ADVERTISEMENT

ಭೋವಿ ಜನಾಂಗದ ಅಭಿವೃದ್ಧಿ: ಮುಂದಿನ ಬಜೆಟ್‌ನಲ್ಲಿ ನೂರು ಕೋಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST
ಭೋವಿ ಜನಾಂಗದ ಅಭಿವೃದ್ಧಿ: ಮುಂದಿನ ಬಜೆಟ್‌ನಲ್ಲಿ ನೂರು ಕೋಟಿ
ಭೋವಿ ಜನಾಂಗದ ಅಭಿವೃದ್ಧಿ: ಮುಂದಿನ ಬಜೆಟ್‌ನಲ್ಲಿ ನೂರು ಕೋಟಿ   

ಬೆಂಗಳೂರು: `ಭೋವಿ ಜನಾಂಗದ ಅಭಿವೃದ್ಧಿಗಾಗಿ ಮುಂದಿನ ವರ್ಷ ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಮೀಸಲಿಡಲಾಗುವುದು~ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಹೈದರಾಬಾದ್ ಕರ್ನಾಟಕ ಭೋವಿ ಸಮಾಜ ಸಂಘ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಮುಖ್ಯಮಂತ್ರಿ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಭೋವಿ ಜನಾಂಗದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ~ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಸಮುದಾಯದ ಅಭಿವೃದ್ಧಿಗೆ ಈ ಹಣವನ್ನು ಬಳಸಬಹುದಾಗಿದೆ. ಸಮಾಜದ ಗಣ್ಯರೇ ಸಭೆ ಸೇರಿ ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು~ ಎಂದು ನುಡಿದರು.

`ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿರುವ ಭೋವಿ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸುತ್ತಿದ್ದು ಪ್ರಸ್ತುತ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನೆಲಮಂಗಲ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬಾಗಲಕೋಟೆಗಳಲ್ಲಿ ಭೋವಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೆ ಆದ್ಯತೆ ನೀಡಿ 4634 ಕೋಟಿ ಹಾಗೂ 1866 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ~ ಎಂದರು.
`ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಪ್ರಸ್ತುತ 87 ಸಾವಿರ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿದೆ. ಮುಂದಿನ ವರ್ಷ 1 ಲಕ್ಷ ಕೋಟಿ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ. ಇದರ ದೊಡ್ಡ ಪಾಲು ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಬಳಕೆಯಾಗಬೇಕು~ ಎಂದು ತಿಳಿಸಿದರು.

`ಭೋವಿ ಸಮುದಾಯದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಮುಂದೆ ಬರುವುದಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಕುಲಕಸುಬಿನ ಜತೆಗೆ ವಿದ್ಯೆಯನ್ನೂ ಕಲಿಯಬೇಕಿದೆ~ ಎಂದರು.

`ಸರ್ಕಾರ ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ  ಶಾಲೆಗಳನ್ನು ತೆರೆದು ಕಾನ್ವೆಂಟ್ ಮಾದರಿಯ ಶಿಕ್ಷಣ ನೀಡುತ್ತಿದೆ. ಶೇ 96ರಷ್ಟು ಫಲಿತಾಂಶವನ್ನು ಈ ಶಾಲೆಗಳು ದಾಖಲಿಸುತ್ತಿವೆ. ಇಂತಹ ಶಾಲೆಗಳ ಸದುಪಯೋಗವನ್ನು ಪಡೆಯಬೇಕು~ ಎಂದು ಅವರು ಹೇಳಿದರು.

ಶಾಸಕ ಸುನೀಲ ಯ. ವಲ್ಯ್‌ಪುರ ಮಾತನಾಡಿ, `ಭೋವಿ ಗುರುಪೀಠಕ್ಕೆ ಸರ್ಕಾರ 2 ಕೋಟಿ ರೂಪಾಯಿ ಅನುದಾನ ನೀಡಿದೆ. ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಏಳಿಗೆಗಾಗಿ ಬಜೆಟ್‌ನಲ್ಲಿ 25 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಸಂತಸದ ಸಂಗತಿಯಾಗಿದೆ~ ಎಂದರು.

`ಜನಾಂಗದ ಭೂ ರಹಿತರಿಗೆ ಭೂಮಿ ಒದಗಿಸಬೇಕು ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಮಾನ್ಯತೆ ನೀಡಬೇಕು. ಕಲ್ಲು ಒಡೆಯುವ ಜನಾಂಗದ ಕಾರ್ಮಿಕರಿಗೆ ಪರಿಸರ ಶುಲ್ಕ ವಿನಾಯ್ತಿ ನೀಡಬೇಕು.ಗಣಿಗಾರಿಕೆಯಲ್ಲಿ ಮೀಸಲಾತಿ ಆಧಾರದ ಮೇಲೆ ಉದ್ಯೋಗಾವಕಾಶ ನೀಡಬೇಕು. ಜನಾಂಗದ ಅಲೆಮಾರಿ ಸಮುದಾಯಗಳಿಗೆ ಸಂಚಾರಿ ಶಾಲೆ ಮೂಲಕ ಶಿಕ್ಷಣ ನೀಡಬೇಕು~ ಎಂದು ಮನವಿ ಮಾಡಿದರು.

ಬಾಗಲಕೋಟೆ, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಂಸದ ಜನಾರ್ದನ ಸ್ವಾಮಿ, ಶಾಸಕರಾದ ಎಂ.ನಾರಾಯಣ ಸ್ವಾಮಿ, ಎಂ.ಚಂದ್ರಪ್ಪ, ಎಂ.ವಿ.ನಾಗರಾಜು, ಮಾನಪ್ಪ ಡಿ. ವಜ್ಜಲ್, ಕೆ. ವೆಂಕಟಸ್ವಾಮಿ, ಜಿ.ಬಸವಣ್ಣೆಪ್ಪ, ಸಂಘದ ವಿಭಾಗೀಯ ಅಧ್ಯಕ್ಷ ತಿಪ್ಪಣ್ಣ ಮಾಸ್ಟರ್ ಬೋರಗಾಂವ್‌ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.