ADVERTISEMENT

ಮಂಗಳೂರಿಗೆ ಐಷಾರಾಮಿ ಹಡಗು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಮಂಗಳೂರು: ನವ ಮಂಗಳೂರು ಬಂದರಿಗೆ (ಎನ್‌ಎಂಪಿಟಿ) ಹೊಸ ಪ್ರವಾಸಿ ಋತುವಿನ ಪ್ರಥಮ ಐಷಾರಾಮಿ ಪ್ರವಾಸಿ ಹಡಗು `ಎಂ.ವಿ.ಐಡಾ ದಿವಾ' 1810 ಪ್ರಯಾಣಿಕರು ಮತ್ತು 617 ನಾವಿಕ ಸಿಬ್ಬಂದಿಯನ್ನು ಹೊತ್ತು ಬಂದಿದ್ದು, ಮಂಗಳೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹುರುಪು ನೀಡಿದೆ.

ಇದೇ ಹಡಗಿನ ಜತೆಯಲ್ಲಿ 60 ಪ್ರಯಾಣಿಕರು ಮತ್ತು  70 ನಾವಿಕ ಸಿಬ್ಬಂದಿಯನ್ನು ಹೊತ್ತ ಮತ್ತೊಂದು ಐಷಾರಾಮಿ ಹಡಗು `ಎಂ.ವಿ.ಕ್ಲಿಪ್ಪರ್ ಒಡಿಸ್ಸಿ' ಸಹ ಬಂದರಿಗೆ ಬಂದಿದ್ದು ಸೋಮವಾರ ಎರಡೂ ಐಷಾರಾಮಿ ಹಡಗುಗಳಿಂದಾಗಿ ಬಂದರಿಗೆ ಹೊಸ ಕಳೆ ಮೂಡಿತ್ತು.

`ಐಡಾ ದಿವಾ' ಹಡಗು ಇದೀಗ 3ನೇ ಬಾರಿಗೆ ಮಂಗಳೂರಿಗೆ ಬಂದಿದ್ದು, ಜರ್ಮನಿಯ ಪ್ರಯಾಣಿಕರೇ ಹೆಚ್ಚಿದ್ದಾರೆ. 1,439 ಪ್ರವಾಸಿಗರು ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಸಹಿತ ಇತರ ಕಡೆಗಳಿಗೆ ತೆರಳಿ ಇಲ್ಲಿನ ಪ್ರಕೃತಿ ಸೌಂದರ್ಯ, ಕಲೆ, ಸಂಸ್ಕೃತಿಯ ಪರಿಚಯ ಮಾಡಿಕೊಂಡರು.

ಎನ್‌ಎಂಪಿಟಿ ಅಧ್ಯಕ್ಷ ಪಿ.ತಮಿಳುವಾಣನ್ ಅವರು ಪ್ರವಾಸಿಗರು ಮತ್ತು ಚಾಲಕ ಸಿಬ್ಬಂದಿ ಬರಮಾಡಿಕೊಂಡರು. ಬಂದರಿನಲ್ಲಿನ ಪರಿಸರ, ವಲಸೆ ವಿಭಾಗ ಹಾಗೂ ಇತರ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತವಾಯಿತು. ಡಿಸೆಂಬರ್ 3ರಂದು ಮತ್ತೆ ಎರಡು ಐಷಾರಾಮಿ ಹಡಗುಗಳು ಇಲ್ಲಿಗೆ ಬರುವ ನಿರೀಕ್ಷೆ ಇದೆ. ಕಳೆದ ವರ್ಷ 17ಕ್ಕೂ ಅಧಿಕ ಐಷಾರಾಮಿ ಹಡಗುಗಳು ಮಂಗಳೂರಿಗೆ ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.