ADVERTISEMENT

ಮಂಗಳೂರಿನ ಜೋಕಟ್ಟೆ ಬಳಿ ಮಿನಿ ಲಾರಿ ಕಂದಕಕ್ಕೆ :8 ಮಂದಿ ಕಾರ್ಮಿಕರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST
ಮಂಗಳೂರಿನ ಜೋಕಟ್ಟೆ ಬಳಿ ಮಿನಿ ಲಾರಿ ಕಂದಕಕ್ಕೆ :8 ಮಂದಿ ಕಾರ್ಮಿಕರ ದುರ್ಮರಣ
ಮಂಗಳೂರಿನ ಜೋಕಟ್ಟೆ ಬಳಿ ಮಿನಿ ಲಾರಿ ಕಂದಕಕ್ಕೆ :8 ಮಂದಿ ಕಾರ್ಮಿಕರ ದುರ್ಮರಣ   

ಮಂಗಳೂರು: ನಗರ ಹೊರವಲಯದ ಜೋಕಟ್ಟೆಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರ ಹೆಸರು ಮತ್ತು ವಿವರ ತಿಳಿದುಬಂದಿಲ್ಲ.
ಕಾರ್ಮಿಕರು ಜೋಕಟ್ಟೆಯ ಸಿಸಿಎಲ್ ಹಾಗೂ ಗೆರೋಲ್ ಕಂಪೆನಿಯಲ್ಲಿ ಪೇಂಟಿಂಗ್ ಮುಗಿಸಿ ಫೋರ್ಸ್ ಪಿಕಪ್ ತೆರೆದ ವಾಹನದಲ್ಲಿ ಮನೆಗೆ ಮರಳುತ್ತಿದ್ದರು.

ಜೋಕಟ್ಟೆ ಬಳಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಮಗುಚಿಬಿದ್ದಿತು. ವಾಹನದಲ್ಲಿ ಒಟ್ಟು 21 ಮಂದಿ ಕಾರ್ಮಿಕರು ಇದ್ದರು. ಈ ಪೈಕಿ ವಾಹನದಡಿ ಸಿಲುಕಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಘಟನೆಯಲ್ಲಿ ಉಳಿದ 13 ಮಂದಿ ಗಾಯಗೊಂಡ್ದ್ದಿದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪೌಲೋಸ್ ಮ್ಯಾಥ್ಯು ಅವರಿಗೆ ಸೇರಿದ ಸುರತ್ಕಲ್‌ನ ನಿರ್ಮಿತಿ ಎಂಟರ್‌ಪ್ರೈಸಸ್ ಸಂಸ್ಥೆಗೆ ಸೇರಿದ ಕಾರ್ಮಿಕರು ಸಿಸಿಎಲ್ ಕಂಪೆನಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಪೇಂಟಿಂಗ್ ಕೆಲಸ ಮಾಡುತ್ತಿದ್ದರು.
 
ಇವರು ಒಡಿಶಾ, ಬಿಹಾರ ಹಾಗೂ ಬೀದರ್ ಮೂಲದ ಕಾರ್ಮಿಕರು. ಊಟಕ್ಕೆ ಹೋಗುತ್ತಿದ್ದರು: ಭಾನುವಾರ ರಜಾ ದಿನವಾದರೂ, ಕಾರ್ಮಿಕರು ಮಧ್ಯಾಹ್ನದವರೆಗೆ ಹೆಚ್ಚುವರಿ ಕೆಲಸ (ಓ.ಟಿ ) ನಿರ್ವಹಿಸಿದ್ದರು. ಮಧ್ಯಾಹ್ನ ಊಟಕ್ಕೆ ಸಮೀಪದ ಕಾಟಿಪಳ್ಳದ ಬಾಡಿಗೆ ಮನೆಗೆ ತೆರಳುವ ಸಂದರ್ಭ ಅಪಘಾತ ಸಂಭವಿಸಿದೆ.

  `ವೇಗವಾಗಿ ಚಲಿಸುತ್ತಿದ್ದ ಫೋರ್ಸ್ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಲಪಾರ್ಶ್ವದ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನ ಬಿದ್ದ ಸ್ಥಳದಲ್ಲಿ ಕಲ್ಲುಗಳಿಗೆ ಬಡಿದ ಪರಿಣಾಮ ಅಪಘಾತದ ತೀವ್ರತೆ ಮತ್ತಷ್ಟು ಹೆಚ್ಚಿತು~ ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದರು. `ಕಾರ್ಮಿಕರ ಪೈಕಿ ಬಹುತೇಕ ಮಂದಿ ಹೊರರಾಜ್ಯದವರು. ಕಂಪೆನಿಯ ಮಾಲೀಕರಿಗೂ ಕಾರ್ಮಿಕರ ಸರಿಯಾದ ಪರಿಚಯ ಇಲ್ಲ. 

ಹೀಗಾಗಿ ಮೃತ ಕಾರ್ಮಿಕರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ.ಸಂಬಂಧಿಕರನ್ನು ಕರೆಸಿ ಈ ಬಗ್ಗೆ ಖಚಿತಪಡಿಕೊಳ್ಳಬೇಕಾಗಿದೆ~ ಎಂದು ಎಸಿಪಿ ಪುಟ್ಟಮಾದಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.