ADVERTISEMENT

ಮಂಗಳೂರು: ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮೇ 2018, 8:18 IST
Last Updated 14 ಮೇ 2018, 8:18 IST
ಮಂಗಳೂರಿನ ಬೋಂದೆಲ್ ನಲ್ಲಿರುವ ಮಹಾತ್ಮಾ ಗಾಂಧಿ ಶತಾಬ್ದಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿರುವ ಭದ್ರತಾ ಕೊಠಡಿಗೆ ಅರೆಸೇನಾ ಪಡೆಯ ಯೋಧರು ಭದ್ರತೆ ಒದಗಿಸಿರುವುದು ಮತ್ತು ಮತ ಎಣಿಕೆಗೆ ಸಿದ್ಧತೆ ಮಾಡಿರುವುದು.
ಮಂಗಳೂರಿನ ಬೋಂದೆಲ್ ನಲ್ಲಿರುವ ಮಹಾತ್ಮಾ ಗಾಂಧಿ ಶತಾಬ್ದಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿರುವ ಭದ್ರತಾ ಕೊಠಡಿಗೆ ಅರೆಸೇನಾ ಪಡೆಯ ಯೋಧರು ಭದ್ರತೆ ಒದಗಿಸಿರುವುದು ಮತ್ತು ಮತ ಎಣಿಕೆಗೆ ಸಿದ್ಧತೆ ಮಾಡಿರುವುದು.   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೋಂದೆಲ್‌ನ ಮಹಾತ್ಮ ಗಾಂಧಿ ಶತಾಬ್ದಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಮತ ಎಣಿಕೆಗಾಗಿ ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ ಮಾಡಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್‌ ವಿಪುಲ್‌ ಕುಮಾರ್‌ ಅವರೊಂದಿಗೆ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮತ ಎಣಿಕೆ ಕುರಿತು ವಿವರ ನೀಡಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್‌, ‘ಬೆಳಿಗ್ಗೆ 8 ಗಂಟೆಗೆ ಏಕಕಾಲಕ್ಕೆ ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ’ ಎಂದರು.

380 ಸೇವಾ ಮತದಾರರಿಗೆ ಇ–ಮೇಲ್‌ ಮೂಲಕ ಮತಪತ್ರ ಕಳುಹಿಸಲಾಗಿತ್ತು. 11,401 ಅಂಚೆ ಮತಪತ್ರಗಳನ್ನು ವಿತರಿಸಲಾಗಿತ್ತು. ಅವುಗಳನ್ನು ತಲುಪಿಸಲು ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೂ ಕಾಲಾವಕಾಶವಿದೆ. ಮೊದಲ ಅರ್ಧ ಗಂಟೆ ಸೇವಾ ಮತ ಮತ್ತು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಆರಂಭವಾಗಲಿದೆ ಎಂದು ತಿಳಿಸಿದರು.

ADVERTISEMENT

ಕ್ಷೇತ್ರಕ್ಕೆ 14 ಮೇಜು: ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಮತ ಎಣಿಕೆಗೆ 14 ಮೇಜುಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ಉತ್ತರ, ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ಕೊಠಡಿಗಳಲ್ಲಿ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ ಏಳು ಮೇಜುಗಳನ್ನು ಒದಗಿಸಲಾಗಿದೆ. ಮಂಗಳೂರು ದಕ್ಷಿಣ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಒಂದೊಂದು ಕೊಠಡಿಯಲ್ಲಿ ತಲಾ 14 ಮೇಜುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಶೇಕಡ 77.67ರಷ್ಟು ಮತದಾನ ನಡೆದಿದೆ. ಜಿಲ್ಲೆಯ 17,11,848 ಮತದಾರರ ಪೈಕಿ 13,29,569 ಮಂದಿ ಮತ ಚಲಾಯಿಸಿದ್ದಾರೆ. ಮತ ಎಣಿಕೆಗೆ ಗರಿಷ್ಠ 18 ಸುತ್ತುಗಳು ಬೇಕಾಗುತ್ತದೆ. ಆ ಬಳಿಕವೇ ಪೂರ್ಣ ಫಲಿತಾಂಶ ಪ್ರಕಟಿಸಲಾಗುವುದು. ಮಧ್ಯಾಹ್ನ 1ರಿಂದ 2 ಗಂಟೆಯ ವೇಳೆಗೆ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಪ್ರತಿಯೊಂದು ಸುತ್ತಿನ ಎಣಿಕೆ ಪೂರ್ಣಗೊಂಡು ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ಸಹಿ ಮಾಡಿದ ಬಳಿಕವಷ್ಟೇ ಆಯಾ ಸುತ್ತಿನ ಮತ ಗಳಿಕೆ ವಿವರನ್ನು ಪ್ರಕಟಿಸಲಾಗುವುದು. ಮತ ಎಣಿಕೆಯಲ್ಲಿ ಯಾವುದೇ ರೀತಿಯ ಗಡಿಬಿಡಿ ಮಾಡುವುದಿಲ್ಲ. ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನು ಚಾಚೂತಪ್ಪದೆ ಪಾಲಿಸಲಾಗುವುದು ಎಂದರು.

ಪ್ರತಿ ಮೇಜಿಗೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳು 14 ಮೇಜುಗಳಿಗೆ ತಲಾ ಒಬ್ಬ ಎಣಿಕೆ ಏಜೆಂಟರನ್ನು ನೇಮಿಸಲು ಅವಕಾಶ ನೀಡಲಾಗಿದೆ. ಎರಡು ಕೊಠಡಿಗಳಿರುವ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಒಂದೊಂದು ಕೊಠಡಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಮೊಬೈಲ್ ನಿಷೇಧ: ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್‌ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಸಾಧನಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಚುನಾವಣಾ ವೀಕ್ಷಕರಿಗೆ ಮಾತ್ರ ಮೊಬೈಲ್‌ ಬಳಸಲು ಅನುಮತಿ ಇದೆ. ಸಂಪೂರ್ಣವಾಗಿ ಮತ ಎಣಿಕೆ ಕೇಂದ್ರ ಸಿಸಿಟಿವಿ ಮತ್ತು ಕ್ಯಾಮೆರಾಗಳಿಂದ ಆವೃತವಾಗಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನೇರವಾಗಿ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮೂರು ಹಂತದ ಭದ್ರತೆ:‌ ನಗರ ಪೊಲೀಸ್ ಕಮಿಷನರ್ ವಿಪುಲ್‌ ಕುಮಾರ್ ಮಾತನಾಡಿ, ‘ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಎಲ್ಲರನ್ನೂ ತಪಾಸಣೆಗೊಳಪಡಿಸಿ ಬಿಡಲಾಗುತ್ತದೆ. ಎರಡನೇ ಹಂತದಲ್ಲಿ ಮತ್ತೆ ತಪಾಸಣೆ ನಡೆಸಲಾಗುತ್ತದೆ. ಮೂರನೇ ಹಂತದಲ್ಲಿ ಎಣಿಕೆ ಕೇಂದ್ರವನ್ನು ಸಂಪೂರ್ಣವಾಗಿ ಅರೆಸೇನಾ ಪಡೆ ಸುಪರ್ದಿಗೆ ನೀಡಲಾಗಿದೆ. ಇದಕ್ಕಾಗಿ ಸಶಸ್ತ್ರ ಸೀಮಾ ಬಲದ ಮೂರು ಕಂಪೆನಿಗಳನ್ನು ನಿಯೋಜಿಸಲಾಗಿದೆ’ ಎಂದರು.

ಚುನಾವಾಣಾ ಅಧಿಕಾರಿಗಳು, ಎಣಿಕೆಗೆ ನಿಯೋಜಿಸಿರುವ ಸಿಬ್ಬಂದಿ, ಅಭ್ಯರ್ಥಿಗಳು, ಎಣಿಕೆ ಏಜೆಂಟರು ಸೇರಿದಂತೆ ಜಿಲ್ಲಾ ಚುನಾವಣಾ ಅಧಿಕಾರಿಯವರಿಂದ ಪಾಸ್‌ ಪಡೆದಿರುವವರಿಗೆ ಮಾತ್ರ ಎಣಿಕೆ ಕೇಂದ್ರದೊಳಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.

ಮತ ಎಣಿಕೆ ಕಾರಣದಿಂದ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಎರಡು ತಂಡಗಳು, ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತಲಾ ಆರು ತುಕಡಿಗಳು, 100 ಸಂಚಾರಿ ಗಸ್ತು ತಂಡಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ. ಪರಿಸ್ಥಿತಿಯ ದುರ್ಬಳಕೆ ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯೋತ್ಸವ ನಿಷಿದ್ಧ
ಮತ ಎಣಿಕೆ ಪ್ರಯುಕ್ತ ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ವಿಜಯೋತ್ಸವ, ಸಭೆ, ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಮತ ಎಣಿಕೆ ವೇಳೆ ಯಾರಿಗಾದರೂ ಅನುಮಾನ ವ್ಯಕ್ತವಾದರೆ ನಿರ್ದಿಷ್ಟ ಕ್ರಮದಲ್ಲಿ ಆಕ್ಷೇಪಣೆ, ದೂರು ಸಲ್ಲಿಸಬಹುದು. ಎಣಿಕೆ ಮತ್ತು ಫಲಿತಾಂಶ ಪ್ರಕಟಣೆಗೆ ಅಡ್ಡಿಯಾಗುವ ರೀತಿಯಲ್ಲಿ ಅನುಚಿತವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.