ADVERTISEMENT

ಮಕ್ಕಳ ಪ್ರತಿಭೆಗೆ ರೂ 3 ಬಹುಮಾನ!

ಪ್ರತಿಭಾ ಕಾರಂಜಿ ಬಹುಮಾನದ ಮೊತ್ತ: ಶಿಕ್ಷಕರಿಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:49 IST
Last Updated 4 ಡಿಸೆಂಬರ್ 2012, 19:49 IST
ಮಕ್ಕಳ ಪ್ರತಿಭೆಗೆ ರೂ 3 ಬಹುಮಾನ!
ಮಕ್ಕಳ ಪ್ರತಿಭೆಗೆ ರೂ 3 ಬಹುಮಾನ!   

ಉಡುಪಿ: ಮಕ್ಕಳ ಪ್ರತಿಭೆಗೆ ಶಿಕ್ಷಣ ಇಲಾಖೆ ಕಟ್ಟುತ್ತಿರುವ ಬೆಲೆ ಐವತ್ತು, ನಲವತ್ತು, ಮೂವತ್ತು ರೂಪಾಯಿ. ಕೆಲವೊಮ್ಮೆ ಇದು ಮೂರು ರೂಪಾಯಿಗೂ ಕುಸಿಯಬಹುದು!

ಪ್ರಥಮ ಬಹುಮಾನ ಗೆದ್ದ ವಿದ್ಯಾರ್ಥಿ ಮನೆಗೆ ಬಂದು ಬಹುಮಾನದ ಹಣ ಎಂದು `ಎರಡು ರೂಪಾಯಿ'ಯ ಒಂದು, `ಒಂದು ರೂಪಾಯಿ'ಯ ಒಂದು ನಾಣ್ಯ ಸೇರಿಸಿ ಒಟ್ಟು ಮೂರು ರೂಪಾಯಿ ಅಪ್ಪನ ಕೈಗಿಟ್ಟರೆ? ಇದು ಆಶ್ಚರ್ಯ ಆದರೂ ಸತ್ಯ.

ವಿಷಯ ಇಷ್ಟೇ, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಶಾಲಾ, ಕ್ಲಸ್ಟರ್, ಬ್ಲಾಕ್, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. 1ರಿಂದ 4ನೇ ತರಗತಿಯ ಮಕ್ಕಳನ್ನು ಒಂದು ಗುಂಪು, 5ರಿಂದ 7ನೇ ತರಗತಿ ಮತ್ತು 8ಮತ್ತು 10ನೇ ತರಗತಿಯ ಮಕ್ಕಳನ್ನು ಪ್ರತ್ಯೇಕ ಗುಂಪು ಮಾಡಿ ಸ್ಪರ್ಧೆ ನಡೆಸಲಾಗುತ್ತದೆ. ವೈಯಕ್ತಿಕ ಮತ್ತು ಗುಂಪು ಎರಡು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ.

ಸಾವಿರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 25 ರೂಪಾಯಿ, ದ್ವಿತೀಯ ಸ್ಥಾನ ಗಳಿಸಿದವರಿಗೆ 15 ರೂಪಾಯಿ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕೇವಲ 10 ರೂಪಾಯಿ ಬಹುಮಾನ ನೀಡಲಾಗುತ್ತಿದೆ.

ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 50, 40 ಮತ್ತು 30 ರೂಪಾಯಿ ಬಹುಮಾನ ಸಿಗುತ್ತಿದೆ. ತಾಲ್ಲೂಕು ಮಟ್ಟದ ಗುಂಪು ಸ್ಪರ್ಧೆಯಲ್ಲಿ ಎಂಟು ಮಂದಿಯ ನೃತ್ಯ ತಂಡವೊಂದು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಪಡೆದರೆ, ಸ್ಪರ್ಧಿ ಮಗುವಿಗೆ ವೈಯಕ್ತಿಕವಾಗಿ (ತಲಾ) ಮೂರು ರೂಪಾಯಿ ಸಿಗುತ್ತದೆ.

ಪ್ರತಿಭಾ ಕಾರಂಜಿ ವಿಜೇತರಿಗೆ ಇಲಾಖೆ ನೀಡುವ ತೀರ ಅಲ್ಪ ಎನ್ನಬಹುದಾದ ಬಹುಮಾನದ ಈ ಮೊತ್ತ ಪೋಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಮಕ್ಕಳು ಕಷ್ಟಪಟ್ಟು ಹಾಡು, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಹುಮಾನ ಪಡೆದರೆ, ಅವಮಾನ ಎನಿಸುವ ರೀತಿಯಲ್ಲಿ ಬಹುಮಾನ ನೀಡಲಾಗುತ್ತಿದೆ ಎಂಬುದು ಅವರ ಆಕ್ಷೇಪ.

`ನನ್ನ ಮಗ ಛದ್ಮವೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ, ಸುಮಾರು ಒಂಬೈನೂರು ರೂಪಾಯಿ ಖರ್ಚು ಮಾಡಿ ಆತನನ್ನು ಸ್ಪರ್ಧೆಗೆ ತಯಾರು ಮಾಡಿದೆ. ದ್ವಿತೀಯ ಸ್ಥಾನ ಪಡೆದ ಆತ ಮನೆಗೆ ಬಂದು ವಿಷಯ ತಿಳಿಸಿ ಹದಿನೈದು ರೂಪಾಯಿ ನನ್ನ ಕೈಗಿಟ್ಟ. ಏನಿದು ಎಂದು ಕೇಳಿದರೆ ಬಹುಮಾನದ ಹಣ ಎಂದು ಹೇಳಿದ' ಎಂದು ಪೋಷಕರೊಬ್ಬರು `ಪ್ರಜಾವಾಣಿ'ಗೆ ತಮ್ಮ ಅನುಭವ ತಿಳಿಸಿದರು.

`ನಾವು ಖರ್ಚು ಮಾಡಿರುವಷ್ಟು ಹಣ ಬಹುಮಾನ ಮೊತ್ತದ ರೂಪದಲ್ಲಿ ಸಿಗಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಆದರೆ ಇಲಾಖೆ ಬಹುಮಾನ ರೂಪದಲ್ಲಿ ಹಣ ನೀಡುವುದಾದದರೆ ಗೌರವ ಎನಿಸುವಷ್ಟು ಮೊತ್ತ ನೀಡಬೇಕು. ಇಲ್ಲದಿದ್ದರೆ ಬರಿ ಪ್ರಶಸ್ತಿ ಪತ್ರ ನೀಡಿದರೂ ಮಕ್ಕಳು ಸಂತಸಪಡುತ್ತಾರೆ. ತೀರ ಕಡಿಮೆ ಎನಿಸುವ ಬಹುಮಾನ ಭಾವನಾತ್ಮವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮುಂದೆ ಇಲಾಖೆ ಈ ನೀತಿಯನ್ನು ಬದಲಾಯಿಸಿಕೊಳ್ಳಲಿ' ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಒಂಬತ್ತು, ಹದಿನಾಲ್ಕು ರೂಪಾಯಿ ಹೀಗೆ ವೈಯಕ್ತಿಕ ಬಹುಮಾನ ಪಡೆದರೆ. ಶಿಕ್ಷಕರೇ ಜೇಬಿನಿಂದ ಒಂದು ರೂಪಾಯಿ ಹಾಕಿ ಆ ಮೊತ್ತವನ್ನು ಹತ್ತು ರೂಪಾಯಿ, ಹದಿನೈದು ರೂಪಾಯಿ ಮಾಡಿ ಮಕ್ಕಳಿಗೆ ನೀಡುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ.

ಶಿಕ್ಷಕರಿಗೆ ಮುಜುಗರ:  ಬಹುಮಾನದ ಮೊತ್ತದ ವಿವಾದದಿಂದಾಗಿ ಶಿಕ್ಷಕರು ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ಸ್ಪರ್ಧೆಗೆ ಕಳುಹಿಸುವ ಪೋಷಕರು ಬಹುಮಾನದ ರೂಪದಲ್ಲಿ ಮೂರು, ನಾಲ್ಕು, ಹತ್ತು ರೂಪಾಯಿ ಸಿಕ್ಕಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಶಾಲೆಗೆ ಬಂದು ಶಿಕ್ಷಕ- ಮುಖ್ಯ ಶಿಕ್ಷಕರ ಜೊತೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಶಿಕ್ಷಕರು ಪೋಷಕರನ್ನು ಸಮಾಧಾನಪಡಿಸುವ ವೇಳೆ ಸಾಕುಸಾಕಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.