ADVERTISEMENT

ಮಠಗಳ ಸ್ವಾಧೀನಕ್ಕೆ ಸರ್ಕಾರ ಮುಂದಾದರೆ ಹೆದರುವುದಿಲ್ಲ: ಮುನವಳ್ಳಿ ಮುರುಗೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 15:03 IST
Last Updated 25 ಫೆಬ್ರುವರಿ 2018, 15:03 IST
ಮಠಗಳ ಸ್ವಾಧೀನಕ್ಕೆ ಸರ್ಕಾರ ಮುಂದಾದರೆ ಹೆದರುವುದಿಲ್ಲ: ಮುನವಳ್ಳಿ ಮುರುಗೇಂದ್ರ ಸ್ವಾಮೀಜಿ
ಮಠಗಳ ಸ್ವಾಧೀನಕ್ಕೆ ಸರ್ಕಾರ ಮುಂದಾದರೆ ಹೆದರುವುದಿಲ್ಲ: ಮುನವಳ್ಳಿ ಮುರುಗೇಂದ್ರ ಸ್ವಾಮೀಜಿ   

ಬೆಳಗಾವಿ: ‘ಮಠಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ನಾವು ಅದಕ್ಕೆಲ್ಲ ಹೆದರುವುದಿಲ್ಲ’ ಎಂದು ಮುನವಳ್ಳಿ ಸೋಮೇಶ್ವರ ಮಠದ ಮುರುಗೇಂದ್ರ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್ ಧರ್ಮ ಜಾಗರಣ ವತಿಯಿಂದ ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಿರಾಟ್ ಹಿಂದೂ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ಸಮಾಜಕ್ಕಾಗಿ ಹಲವರು ಹೋರಾಡಿದ್ದಾರೆ. ಅವರಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ದೊಡ್ಡದು. ಸಂತರಿಗೆ ಇಂದು ಬಹಳ ತೊಂದರೆ ಎದುರಾಗಿದೆ. ಅವರ ಕೊಡುಗೆ ಹಾಗೂ ಶ್ರಮವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಾವೆಲ್ಲರೂ ಭಾರತೀಯರು. ನಂತರ ಮಠ ಎನ್ನುವುದನ್ನು ಮರೆಯಬಾರದು. ಮೊದಲು ದೇಶ, ನಂತರ ರಾಜ್ಯ’ ಎಂದು ಅವರು ಹೇಳಿದರು.

ADVERTISEMENT

ಘೋಡಗೇರಿ ಕೈವಲ್ಯಾನಂದ ಸ್ವಾಮೀಜಿ ಮಾತನಾಡಿ, ‘ವೈಚಾರಿಕರು ಕೇಸರಿಗೆ ಬೇರೆ ಅರ್ಥ ಕೊಟ್ಟಿರಬಹುದು. ಆದರೆ ಅದು ನಮಗೆ ಪವಿತ್ರವಾದುದು. ಧರ್ಮ ಇಂದು ಬಹಳಷ್ಟು ಸಂಕೀರ್ಣ ಸ್ಥಿತಿಯಲ್ಲಿದೆ. ರಾಜಕಾರಣಿಗಳು ಧರ್ಮವನ್ನು ಹಾಳು ಮಾಡುವುದಕ್ಕೆ ಮುಂದಾಗಿದ್ದು, ನಾವು ಸಂತ ಶಕ್ತಿ ಒಂದಾಗಿ ನಿಲ್ಲಬೇಕಾಗಿದೆ. ರಾಜಕಾರಣಿಗಳು ಜಾತಿ ವಿಷಯ ಎತ್ತಿ ಅವರ ಕೆಲಸ ಸಾಧಿಸಿಕೊಳ್ಳಲು ಮುಂದಾದರು. ಆದರೆ, ಖಾವಿ ಎಲ್ಲರನ್ನೂ ಒಗ್ಗೂಡಿಸಬಲ್ಲದು ಎನ್ನುವುದನ್ನು ನಾವು ತೋರಿಸಿದ್ದೇವೆ. ಇನ್ನು ಮುಂದೆ ಒಡೆಯುವವರನ್ನು ಬಿಟ್ಟು ಕೂಡಿಸುವವರನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಬಂದಿದೆ‌. ಧರ್ಮ, ಸಂಸ್ಕೃತಿ ಉಳಿಸುವವರನ್ನು ಬೆಂಬಲಿಸುತ್ತೇವೆ. ಧರ್ಮ ಒಡೆಯುವವರನ್ನು ಬೆಂಬಲಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಇದ್ದ ಕಸವನ್ನು ದೊಡ್ಡದಾಗಿ ಧರ್ಮ ಒಡೆಯುವವರನ್ನು ಬೆಂಬಲಿಸಬೇಡಿ’ ಎಂದು ಕರೆ ನೀಡಿದರು.

ಮುಕ್ತಿಮಠದ ಶಿವ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮಠಗಳನ್ನು ವಶ ಪಡಿಸಿಕೊಳ್ಳುವುದಲ್ಲ, ಸರ್ಕಾರವು ಮಠಗಳನ್ನು ಮುಟ್ಟುವುದಕ್ಕೂ ಭಕ್ತರು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಭಗವದ್ಗೀತೆಯ ಮೇಲೆ ಎಲ್ಲ ಧರ್ಮಗ್ರಂಥಗಳೂ ನಿಂತಿವೆ. ಎಲ್ಲದಕ್ಕೂ ಅಡಿಪಾಯವದು. ಅದನ್ನು ತೆಗೆದರೆ ಉಳಿದ ಗ್ರಂಥಗಳೆಲ್ಲ ಬಿದ್ದು ಹೋಗುತ್ತವೆ ಎಂದು ತಿಳಿಸಿದರು.

ಸಂತ ಸಮಾವೇಶ ನಿರ್ಣಯಗಳು
* ಸಾಮರಸ್ಯದ ಕುರಿತು ಉಡುಪಿಯ ಧರ್ಮಸಂಸದ್ ತೆಗೆದುಕೊಂಡ ನಿರ್ಣಯವನ್ನು ಕಾರ್ಯರೂಪಕ್ಕೆ ತರಬೇಕು. ಇದಕ್ಕಾಗಿ ಜಿಲ್ಲೆಯ ಕನಿಷ್ಠ ಒಂದು ತಾಲ್ಲೂಕನ್ನು ಪ್ರತಿ ಮಠದವರೂ ಆಯ್ಕೆ ಮಾಡಿಕೊಂಡು ಅಲ್ಲಿ ವರ್ಷವಿಡೀ ಸಾಮಾಜಿಕ ಸಾಮರಸ್ಯಕ್ಕಾಗಿ ಕಾರ್ಯಕ್ರಮಗಳನ್ನು ನಡೆಸಬೇಕು. ಪ್ರತಿ ಮಠಾಧೀಶರೂ ಸಾಮರಸ್ಯಕ್ಕಾಗಿ ಶೋಷಿತರ ಬಡಾವಣೆಯಲ್ಲಿ ಪಾದಯಾತ್ರೆ ಮಾಡಬೇಕು.
* ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜಿಹಾದಿ ಹಾಗೂ ಕ್ರೈಸ್ತ ಮಿಷನರಿ ಪ್ರೇರಿತ ಮತಾಂತರ ತಡೆಯಲು ಎಲ್ಲ ಸ್ವಾಮೀಜಿಗಳೂ ಸಂಪೂರ್ಣ ಶಕ್ತಿ ಹಾಗೂ ಸಮಯ ಹಾಕಿ ಪ್ರಯತ್ನಿಸಬೇಕು. ಜಾಗೃತ ಹಿಂದೂ ಸಮಾಜ ಹಾಗೂ ಸಂತ ಶಕ್ತಿ ಒಂದಾಗಿ ಮತಾಂತರದ ಪಿಡುಗನ್ನು ನಿಲ್ಲಿಸಬೇಕು. ಮತಾಂತರ ಆದವರನ್ನು ಮಾತೃ ಧರ್ಮಕ್ಕೆ ಕರೆತರಲು ಅವಿರತವಾಗಿ ಶ್ರಮಿಸಬೇಕು‌.
* ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಸರಿಯಾಗಿ ಮಳೆಯಾಗದೆ ತೀವ್ರವಾದ ಬರ ಪರಿಸ್ಥಿತಿ ಇದೆ. ಈ ಸಮಸ್ಯೆ ಪರಿಹಾರಕ್ಕಾಗಿ ಮಠಾಧೀಶರು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.