ADVERTISEMENT

ಮತಪತ್ರ ಬಳಸಲು ಸಿದ್ದರಾಮಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಟ್‌ ಇದ್ದರು
ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಟ್‌ ಇದ್ದರು   

ರಾಯಚೂರು: ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರ ಬಳಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಮತಯಂತ್ರಗಳು ದುರ್ಬಳಕೆ ಆಗುವ ಸಾಧ್ಯತೆಯಿದೆ. ಈ ಬಗ್ಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತಪತ್ರವಿರುವ ಹಳೇ ಪದ್ಧತಿಯೇ ಸೂಕ್ತ’ ಎಂದು ಶುಕ್ರವಾರ ಮಾನ್ವಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಗುಜರಾತ್‌ ಚುನಾವಣೆಯ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೇರೆ ರಾಜ್ಯಗಳ ಸಮಸ್ಯೆಗಳು, ನಮ್ಮಲ್ಲಿರುವ ಸಮಸ್ಯೆಗಳು ಬೇರೆಯೇ ಇವೆ’ ಎಂದರು.

ADVERTISEMENT

ಅಕ್ರಮವಾಗಿ ಅದಿರು ಸಾಗಣೆ ಕುರಿತಂತೆ ದಾಖಲೆ ಬಿಡುಗಡೆ ಮಾಡುವುದಾಗಿ ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘‌ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಅಂಡ್ ರನ್‌ ಕೇಸ್. ಅವರು ಯಾವುದೇ ದಾಖಲೆ ಬಿಡುಗಡೆ ಮಾಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಸೋಲುವ ಹತಾಶೆಯಿಂದ ಗಲಭೆ ಸೃಷ್ಟಿಸುತ್ತಿರುವ ಬಿಜೆಪಿ’
ಹೊಸಪೇಟೆ:
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ ಹತಾಶಗೊಂಡಿರುವ ಅವರು ಗಲಭೆ ಮಾಡಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಹೇಳಿದರು.

ಇಲ್ಲಿನ ಮುನ್ಸಿಪಲ್‌ ಮೈದಾನದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಗಲಭೆ ಸೃಷ್ಟಿಸಿ ಮತಗಳನ್ನು ಧ್ರುವೀಕರಣ ಮಾಡಲು ಬಿಜೆಪಿ ಹೊರಟಿದೆ. ಅದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕುಮ್ಮಕ್ಕು ಕೊಡುತ್ತಿದ್ದಾರೆ. ಅವರೇ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಗೆದ್ದರೂ ಆಶ್ಚರ್ಯ ಇಲ್ಲ: ಸಿ.ಎಂ
ಹೊಸಪೇಟೆ: ‘ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೂ ಆಶ್ಚರ್ಯಪಡಬೇಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಸ್ಪರ್ಧೆ ಇತ್ತು. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೊಳಿಸಿದ ನಂತರ ಅಲ್ಲಿನ ಜನರಿಗೆ ಬಿಜೆಪಿ ಬಗ್ಗೆ ಬೇಸರವಿದೆ. ಹೀಗಾಗಿ ಯಾರು ಬೇಕಾದರೂ ಗೆಲ್ಲಬಹುದು’ ಎಂದರು.

ಯಾರ ಪರವೂ ಇಲ್ಲ: ‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಐದು ಗುಂಪುಗಳು ಮನವಿ ಕೊಟ್ಟಿದ್ದವು. ಅಲ್ಪಸಂಖ್ಯಾತ ಆಯೋಗಕ್ಕೆ ಆ ಎಲ್ಲ ಅರ್ಜಿಗಳನ್ನು ಕಳುಹಿಸುತ್ತೇನೆ. ನಾನು ಯಾವ ಬಣದ ಪರವೂ ಇಲ್ಲ ವಿರುದ್ಧವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿಯಿಂದ ಬೆಂಕಿ ಹಚ್ಚುವ ಕೆಲಸ’
ಬೆಳಗಾವಿ:
‘ಬಿಜೆಪಿ ನಾಯಕರಲ್ಲಿ ಈಗ ಬೆಂಕಿ ಹಚ್ಚುವ ಸ್ಪರ್ಧೆ ನಡೆದಿದೆ’ ಎಂದು ಆಹಾರ ಸಚಿವ ಯು.ಟಿ. ಖಾದರ್‌ ಶುಕ್ರವಾರ ಇಲ್ಲಿ ಆರೋಪಿಸಿದರು.

‘ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮೈಸೂರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಗಲಭೆ, ಘರ್ಷಣೆ ಮಾಡುವುದನ್ನು ಬಿಟ್ಟರೆ ಚುನಾವಣೆ ಗೆಲ್ಲಲು ಅವರಿಗೆ ಬೇರಾವುದೇ ಮಾರ್ಗವಿಲ್ಲ’ ಎಂದು ಅವರು ಗೇಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.