ADVERTISEMENT

ಮತ್ತೆ ಬೀದಿಗೆ ಬಿದ್ದ ತಲಮಾರಿ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ರಾಯಚೂರು: ನಾವು ದಿಕ್ಕಿಲ್ಲದ ಪಕ್ಷಿಗಳು... ನಮ್ಮನ್ನು ನೋಡೋರಿಲ್ಲ... ಕಷ್ಟ ಕೇಳೋರಿಲ್ಲ... ಎರಡು ವರ್ಷದ ಹಿಂದೆ ಪಟ್ಟ ಪಾಡು ಮತ್ತೆ ಅನುಭವಿಸುತ್ತಿದ್ದೇವೆ... ಮತ್ತೆ ಮಳೆಗಾಳಿಗೆ ಬೀದಿಪಾಲಾಗಿದ್ದೇವೆ... ರಾತ್ರಿಯಿಂದ ಮಳೆಯಲ್ಲಿ ತೋಯ್ದುಕೊಂಡೇ ಕಾಲ ಕಳೆದಿದ್ದೇವೆ.. ಊಟಕ್ಕಿಲ್ಲ... ಎಲ್ಲವೂ ನೀರು ಪಾಲು...

2009ರಲ್ಲಿ ಸುರಿದ ಭಾರಿ ಮಳೆಗೆ, ಪ್ರವಾಹಕ್ಕೆ ಮನೆ ಕಳೆದುಕೊಂಡು ಬೀದಿ ಪಾಲಾದ ರಾಯಚೂರು ತಾಲ್ಲೂಕಿನ ತಲಮಾರಿ ಗ್ರಾಮದ ನೆರೆಸಂತ್ರಸ್ತ ಸುಮಾರು 72 ಕುಟುಂಬಗಳು ಗುರುವಾರ ಕಣ್ಣೀರಿಟ್ಟ ಪರಿ ಇದು.

2009ರಲ್ಲಿ ಪ್ರವಾಹ ಆದಾಗ ಸಂತ್ರಸ್ತರಿಗೆ ಸರ್ಕಾರ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಈ ಗ್ರಾಮದಲ್ಲಿನ ಸಂತ್ರಸ್ತರಿಗೆ ಊರಾಚೆ 72 ಕುಟುಂಬಗಳಿಗೆ ಟಿನ್ ಶೆಡ್ ಹಾಕಿಕೊಟ್ಟಿತ್ತು. ಎರಡು ವರ್ಷದಿಂದಲೂ ಮಳೆ ಬಂದಾಗ, ಗಾಳಿ ಬೀಸಿದಾಗ ಈ ತಗಡುಗಳು ಹಾರುತ್ತಿದ್ದವು. ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೆ ಬೀಸಿದ ಗಾಳಿ ಮತ್ತು ಸುರಿದ ಮಳೆಗೆ ಟಿನ್ ಶೆಡ್‌ಗಳೇ ಹಾರಿ ಬಿದ್ದಿವೆ.

ಸಂತ್ರಸ್ತರು ಮತ್ತೆ ಬೀದಿಪಾಲಾಗಿದ್ದು, ನೆರೆವಿಗೆ ಸರ್ಕಾರದ, ಜನತೆಯ ಅಂಗಲಾಚುತ್ತಿದ್ದ ದೃಶ್ಯ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ಗೆ ಕಂಡು ಬಂದಿತು.

ಟಿನ್ ಶೀಟ್ ಬಿದ್ದು ಬಾಲಕ ನಿತ್ಯಾನಂದಂ ತಲೆಗೆ ತೀವ್ರ ಗಾಯವಾಗಿದೆ. ಈತ ತಲಮಾರಿ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಇದೇ ರೀತಿ ಮೂರ‌್ನಾಲ್ಕು ಜನರಿಗೆ ಗಾಯವಾಗಿದೆ. ತರಚು ಗಾಯಗಳು ಸಾಮಾನ್ಯವಾಗಿವೆ.

ಸಂತ್ರಸ್ತರ ಗೋಳು: ಮಳೆ-ಗಾಳಿ ಶುರುವಾದಾಗ ನಾಲ್ಕಾರು ಶೆಡ್ ಹಾರಿದವು. ಮತ್ತೆ ಮಳೆಗಾಳಿ ಜೋರಾಯಿತು. ಒಂದೊಂದೇ ಶೆಡ್ ಹಾರಿಬಿದ್ದವು. ಟಿನ್ ಶೀಟ್ ಎಷ್ಟೋ ದೂರ ಬಿದ್ದಿದ್ದವು. ಎಲ್ಲರೂ ರಾತ್ರಿ ಪೂರ್ತಿ ರಸ್ತೆಯಲ್ಲಿ ಕಾಲ ಕಳೆದೆವು. ಬೆಳಿಗ್ಗೆಯಿಂದ ಪಾತ್ರೆ ಪಗಡೆ, ಬಟ್ಟೆ ಹುಡುಕಿ ತೆಗೆಯುತ್ತಿದ್ದೇವೆ.

ಕೆಲವರು ತಲಮಾರಿ ಗ್ರಾಮಕ್ಕೆ ತೆರಳುತ್ತಿದ್ದಾರೆ. ಮತ್ತೊಂದಿಷ್ಟು ಜನರು ಹೊಸದಾಗಿ ನಿರ್ಮಾಣ ಆಗಿರುವ ಆಸರೆ ಮನೆಗೆ ಹೋಗುತ್ತಿದ್ದಾರೆ ಎಂದು ಸಂತ್ರಸ್ತರಾದ ದಾವೀದ್, ರೂತಮ್ಮ, ಈರಣ್ಣ ಮತ್ತು ಬಾಬು  ವಿವರಿಸಿದರು.

ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಜಾಫರ್ ಪಟೇಲ್ ಅವರು ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಪಂಚಾಯಿತಿಯವರು ಬಿದ್ದ ಮನೆ ಸಾಮಗ್ರಿ ಸಾಗಿಸಲು ಟ್ರಾಕ್ಟರ್ ವ್ಯವಸ್ಥೆ ಮಾಡಿದ್ದಾರೆ. ಅದನ್ನು ಬಿಟ್ಟರೇ ಮತ್ತೇನೂ ಇಲ್ಲ ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ: ಎರಡು ವರ್ಷದಿಂದಲೂ ತಮ್ಮದು ಇದೇ ಸ್ಥಿತಿ. ನೂರಾರು ಹೊಸ ಮನೆ ನಿರ್ಮಿಸಿದ್ದರೂ ಕೊಟ್ಟಿಲ್ಲ. ಕೊಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ಹೊಸ ಮನೆಗೆ ಹೋಗಿ ಇರಬೇಕೆಂದರೂ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಕುಡಿಯಲು ನೀರಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಆದರೂ ಮಳೆಯಿಂದ ಬಚಾವಾದರೆ ಸಾಕು ಎಂದು ಹೊರಟಿದ್ದೇವೆ ಎಂದು ಕೆಲ ಸಂತ್ರಸ್ತ ಕುಟುಂಬಗಳು ಸಮಸ್ಯೆ ಹೇಳಿಕೊಂಡರು.

ಬುಧವಾರ ಸಂಜೆಯಿಂದ ಈ ರೀತಿ ಬೀದಿಗೆ ಬಿದ್ದು ಕಷ್ಟ ಪಡುತ್ತಿದ್ದೇವೆ. ಸರ್ಕಾರಿ ಅಧಿಕಾರಿಗಳೊಬ್ಬರೂ ಭೇಟಿ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.