ADVERTISEMENT

ಮತ್ತೆ ಭೂ ಕಂಪನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಹಿರಿಯೂರು (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ಭೂಕಂಪನ ಪೀಡಿತ ಗ್ರಾಮಗಳಾದ ನಾಯಕರಕೊಟ್ಟಿಗೆ, ಕೆರೆಕೆಂಚಯ್ಯನಹಟ್ಟಿ, ಯಲ್ಲದಕೆರೆ, ಸೀಗೆಹಟ್ಟಿ, ಪಿಲ್ಲಾಜನಹಳ್ಳಿ, ಹಂದಿಗನಡು, ಬಡಗೊಲ್ಲರಹಟ್ಟಿಗಳಲ್ಲಿ ಗುರುವಾರ ರಾತ್ರಿ ಮತ್ತೆ ಭೂಮಿ ಕಂಪಿಸಿದೆ.

ಇದರಿಂದ ಗ್ರಾಮಸ್ಥರು ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸುವ ಬದಲು ಮನೆಯ ಹೊರಗೆ ಇಡೀ ರಾತ್ರಿ ಜಾಗರಣೆ ಮಾಡಿದರು.

ಮಾರ್ಚ್ 31ರಿಂದ ಏಪ್ರಿಲ್ 11ರವರೆಗೆ ತಾಲ್ಲೂಕಿನಲ್ಲಿ ಆರೇಳು ಬಾರಿ ಭೂಮಿ ನಡುಗಿದೆ. ಭೂಮಿಯಲ್ಲಿ ಮೂರ‌್ನಾಲ್ಕು ಸೆಕೆಂಡ್‌ಗಳ ಕಾಲ ಗುಡುಗುಡು ಶಬ್ದ ಕೇಳಿಬರುತ್ತಿದೆ. ಶಬ್ದ ಕೇಳಿ ಬಂದ ಕ್ಷಣ ಮಾತ್ರದಲ್ಲಿ ಮನೆಯಲ್ಲಿದ್ದ ಪಾತ್ರೆಗಳೆಲ್ಲ ಉರುಳಿ ಬೀಳುತ್ತಿವೆ. ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ ಮೊದಲಾದ ಕಡೆಗಳಿಂದ ತಜ್ಞರು ಬಂದು ಪರಿಶೀಲಿಸಿ ಹೋಗಿದ್ದಾರೆ. ಭೂಕಂಪನದ ತೀವ್ರತೆ ಕಡಿಮೆ ಇದ್ದು, ಗ್ರಾಮಸ್ಥರು ಹೆದರುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ.

ಆದರೆ, ಈ ಕಂಪನದ ಹಿಂದಿನ ಸತ್ಯವೇನು? ಇದು ಭೂಕಂಪವೇ, ಅತಿಯಾದ ಗಣಿಗಾರಿಕೆಯಿಂದಾದ ಒತ್ತಡವೇ? ಅಂತರ್ಜಲ ಕುಸಿತದಿಂದ ಭೂಮಿ ಬರಡಾಗಿ ಈ ರೀತಿ ಆಗುತ್ತಿದೆಯೇ? ಎಂಬ ಗ್ರಾಮಸ್ಥರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಡಿ. ಶಿವಣ್ಣ ಒತ್ತಾಯಿಸಿದ್ದಾರೆ.

ಭೂಕಂಪನ ಪೀಡಿತ ಹಳ್ಳಿಗರಿಗೆ ಅಪಾಯರಹಿತ ಸ್ಥಳದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.