ಉಡುಪಿ: ಮಣಿಪಾಲ ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆ ಸಮೀಪದ ಮನೆಯೊಂದಕ್ಕೆ ಭಾನುವಾರ ರಾತ್ರಿ ಮೂವರು ಯುವಕರು ಮನೆಗೆ ನುಗ್ಗಿ ಸಿನಿಮೀಯ ಮಾದರಿಯಲ್ಲಿ ರೂ. 14.50 ಲಕ್ಷ ಮೌಲ್ಯದ ಸ್ವತ್ತು ಲೂಟಿ ಮಾಡಿದ್ದಾರೆ.
ಮಾಬುಕಳ ಸೇತುವೆ ಬಳಿ, ಕುಮ್ರಗೋಡು ಗ್ರಾಮದ ನಿವಾಸಿ ವಾಸುದೇವ ಪೂಜಾರಿ (58) ಎಂಬುವವರ ಹಿರಿಯ ಸಹೋದರಿ ಕನಕಾ ಆರ್.ಅಮೀನ್ ಅವರ `ನಮನ~ ಮನೆಯಲ್ಲಿ ಈ ಘಟನೆ ನಡೆದಿದೆ.
`ಆರೋಪಿಗಳಿಗಾಗಿ ಶೋಧ ನಡೆದಿದೆ~ ಎಂದು ದೂರು ದಾಖಲಿಸಿಕೊಂಡಿರುವ ಮಣಿಪಾಲ ಠಾಣೆ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆ ವಿವರ: ಮಕ್ಕಳಿಬ್ಬರು ದುಬೈ, ಮುಂಬೈನಲ್ಲಿ ಇರುವುದರಿಂದ ಕನಕಾ ಅವರೊಬ್ಬರೇ ಮನೆಯಲ್ಲಿದ್ದು, ಸಂಬಂಧಿ ವಾಸುದೇವ ಪೂಜಾರಿ ಮತ್ತಿತರರು ಆಗ್ಗಾಗ್ಗೆ ಹೋಗಿ ರಕ್ಷಣೆಗೆಂದು ಉಳಿಯುತ್ತಿದ್ದರು.
ವಾಸುದೇವ ಪೂಜಾರಿ, ಪ್ರಕಾಶ ಮತ್ತು ಗುರುದಾಸ ಮನೆಯ ಹಜಾರದಲ್ಲಿ ಭಾನುವಾರ ರಾತ್ರಿ 10.30ರ ವೇಳೆ ಟಿವಿ ನೋಡುತ್ತಿದ್ದಾಗ ಮೂವರು ಯುವಕರು, `ಪೇಂಟರ್ ಸಂತೋಷ್ ಇದ್ದಾರೆಯೇ?~ ಎಂದು ಕೇಳುತ್ತಲೇ ಒಳಕ್ಕೆ ನುಗ್ಗಿದರು. ಬಳಿಕ ಚಾಕುವಿನಿಂದ ಪೂಜಾರಿ ಮತ್ತು ಸಂಬಂಧಿಕರಿಗೆ ತಿವಿದು, ಬಾಯಿಗೆ ಪ್ಲಾಸ್ಟಿಕ್ ತುರುಕಿ ಕೊಠಡಿಯಲ್ಲಿ ಕೂಡಿ ಹಾಕಿದರು.
ನಂತರ ಕನಕಾ ಅವರನ್ನು ಹೆದರಿಸಿ ಬೀರು ತೆಗೆಸಿ ವಜ್ರದೋಲೆ, ವಜ್ರದ ಉಂಗುರ, ತಲಾ 10 ಗ್ರಾಂ ತೂಕದ 6 ಚಿನ್ನದ ಬಳೆಗಳು, 25 ಗ್ರಾಂ ತೂಕದ ಇನ್ನೊಂದು ಬಳೆ, ತಲಾ 35 ಗ್ರಾಂನ 2 ಚಿನ್ನದಸರ, 1.75 ಲಕ್ಷ ನಗದು ಲೂಟಿ ಮಾಡಿದ್ದಾರೆ. ಅಲ್ಲದೆ, ಮನೆಯಂಗಳದಲ್ಲಿದ್ದ ಇನ್ನೋವಾ ಕಾರನ್ನೂ ಕದ್ದೊಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.