ADVERTISEMENT

ಮನೆಯಿಂದ ರೂ 6.90 ಲಕ್ಷ ಕಳವು

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಕಡಬ (ಉಪ್ಪಿನಂಗಡಿ): ಪುತ್ತೂರು ತಾಲ್ಲೂಕಿನ ಕಡಬ ಸಮೀಪ ರಾಮಕುಂಜದ ಕುಂಡಾಜೆ ಗ್ರಾಮದ ಝಕರಿಯಾ ಎಂಬುವವರ ಮನೆಯಲ್ಲಿ ಗುರುವಾರ ನಸುಕಿನ ವೇಳೆ ರೂ. 6.90 ಲಕ್ಷ ಕಳವಾಗಿದೆ. ಹಣವಿದ್ದ ಸೂಟ್‌ಕೇಸ್ ಪೂರ್ಣ ಖಾಲಿಯಾಗಿ ಮನೆ ಹಿಂದಿನ ಬಾಗಿಲ ಬಳಿ ಬಿದ್ದಿದ್ದು, ಕಳವು ನಡೆದಿರುವ ರೀತಿಯೇ ಸಂಶಯಾಸ್ಪದ ಎನಿಸಿದೆ.

‘ನಸುಕಿನ 4.30ರ ವೇಳೆಗೆ ಎಚ್ಚರವಾಯಿತು. ನೋಡಿದರೆ ಕೊಠಡಿ ಮತ್ತು ವರಾಂಡದ ಬಾಗಿಲು ತೆರೆದುಕೊಂಡಿದ್ದವು. ಒಳಬಂದು ಮಂಚದಡಿ ನೋಡಿದರೆ ಸೂಟ್‌ಕೇಸ್ ಕಾಣೆಯಾಗಿತ್ತು. ವಾರದ ಹಿಂದೆ ನಿವೇಶನವನ್ನು ರೂ. 46 ಲಕ್ಷಕ್ಕೆ ಮಾರಿದ್ದು, ಅದರ ಮುಂಗಡ ಹಣ ಹಾಗೂ ಟಿಪ್ಪರ್ ಲಾರಿ ಮಾರಿದ್ದರಿಂದ ಬಂದಿದ್ದ ಹಣವನ್ನು ಸೂಟ್‌ಕೇಸ್‌ನಲ್ಲಿಟ್ಟಿದ್ದೆ’ ಎಂದು ಝಕರಿಯಾ ದೂರು ನೀಡಿದ್ದಾರೆ.

ಝಕರಿಯಾ ಅವರ ಎರಡನೇ ಪತ್ನಿ ಸಾಜಿದಾ ಮತ್ತು ಮೂರು ಮಕ್ಕಳು ಸೇರಿದಂತೆ 5 ಮಂದಿ ಮನೆಯಲ್ಲಿದ್ದರು. ಚಿಲಕ ಹಾಕಿದ ಬಾಗಿಲು ತೆಗೆದು ಕಳ್ಳರು ಹೇಗೆ ಒಳಬಂದರೋ ಸ್ಪಷ್ಟವಾಗುತ್ತಿಲ್ಲ. ಜತೆಗೆ ಸೂಟ್‌ಕೇಸ್‌ನಲ್ಲಿದ್ದ ಹಣ ಬಿಟ್ಟರೆ ಬೇರಾವುದೇ ವಸ್ತು ಕಳುವಾಗಿಲ್ಲ ಎಂದಿರುವ ಪೊಲೀಸರು, ಕಳುವಾಗಿರುವ ರೀತಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಪುತ್ತೂರು ಎಎಸ್.ಪಿ ಅಮಿತ್ ಸಿಂಗ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.