ADVERTISEMENT

ಮನೆಯ ಶಾಂತಿ ಪೂಜೆಗೆ ನರಬಲಿ?

ವಿಜಯ್ ಹೂಗಾರ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ತಿರುಮಲದೇವರಕೊಪ್ಪದಲ್ಲಿ  ಕಳೆದ ಒಂದೂವರೆ ತಿಂಗಳ ಹಿಂದೆ ನಡೆದ ದಲಿತ ಯುವಕನ ಕೊಲೆಯ ಪ್ರಕರಣವೊಂದು ಇತ್ತೀಚೆಗೆ ಹೊಸ ತಿರುವು ಪಡೆದುಕೊಂಡಿದ್ದು, ಅದು ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕೊಲೆಯಲ್ಲ, ಬದಲಾಗಿ ಹೊಸ ಮನೆಯ ಶಾಂತಿಗಾಗಿ ನಡೆಸಿದ ನರಬಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಗ್ರಾಮದ ಬಸವರಾಜ ಭರಮಪ್ಪ ಕಡೇಮನಿ (18) ಎಂಬುವನೇ ನರಬಲಿ (ಕೊಲೆ)ಯಾದ ಯುವಕ. ಗ್ರಾಮದ ಬಸನಗೌಡ ನಿಂಗಣ್ಣನಗೌಡ್ರ ಗೌಡ್ರು ಎಂಬುವವರ ಮನೆಯಲ್ಲಿ ಬಸವರಾಜ ಕಳೆದ 5 ವರ್ಷದಿಂದ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಕೆಲಸ ಮಾಡುವ ಮನೆಯ ಮಾಲೀಕರೇ ಈತನನ್ನು ನರಬಲಿ ನೀಡಿದ್ದಾರೆ ಎಂದು ಬಸವರಾಜನ ತಂದೆ, ತಾಯಿಗಳು ಆರೋಪಿಸಿರುವುದರಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ತಮ್ಮ ಮಗನನ್ನು ಬಲಿ ನೀಡಿದ ಘಟನೆ ಸತ್ಯಾಸತ್ಯತೆ ಬಯಲಿಗೆ ತಂದು ತಮ್ಮ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕು. ಆತನನ್ನು ಬಲಿ ಕೊಟ್ಟ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಮಗನನ್ನು ಕಳೆದುಕೊಂಡ ತಿರುಮಲದೇವರಕೊಪ್ಪದ ಬಸವರಾಜನ ತಂದೆ ಭರಮ್ಮಪ್ಪ, ತಾಯಿ ಮಂಜವ್ವ ಅವರು 2011ರ ಡಿಸೆಂಬರ್ 21 ರಂದು ರಾಜ್ಯಪಾಲರಿಗೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.

ನವೆಂಬರ್ 26 ರಂದು ತಿರುಮಲದೇವರಕೊಪ್ಪ ಗ್ರಾಮದ ಹೊರವಲಯದ ಹೊಟ್ಟೆಗೌಡರ ಜಮೀನಿನ ಬಳಿ ಗೋಣಿ ಚೀಲದಲ್ಲಿ ಬಸವರಾಜನ ಶವ ಪತ್ತೆಯಾಗಿತ್ತು. ಅಂದೇ ಬೆಳಗಿನ ಜಾವ ಬಸವನಗೌಡರ ಮಗ ನಿಂಗಣ್ಣನಗೌಡ ಪೊಲೀಸ್ ಠಾಣೆಗೆ ತೆರಳಿ ತಮ್ಮ ಟ್ರ್ಯಾಕ್ಟರ್ ಚಾಲಕ ಬಸವರಾಜನನ್ನು ಕೊಲೆ ಮಾಡಿದ್ದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದನು.

“ಕೊಲೆಯಾದ ಬಸವರಾಜ ನಮ್ಮ ಮನೆಯಲ್ಲಿಯೇ ಇದ್ದುಕೊಂಡು ನನ್ನ ಪತ್ನಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನಲ್ಲದೇ, ನಾನು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಯಾವ ಹೆಂಗಸಿನ ಜೊತೆ ಮಾತನಾಡುತ್ತಿದ್ದೀಯಾ ಎಂದು ಕೇಳುತ್ತಿದ್ದನು. ಇಂತಹದೇ ಒಂದು ಘಟನೆ ನ. 26 ರಂದು ನಡೆದಾಗ ಕೋಪಗೊಂಡು ಆತನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿ ಊರ ಹೊರವಲಯದಲ್ಲಿ ಎಸೆದಿದ್ದೆ” ಎಂದು ನಿಂಗಣ್ಣನಗೌಡ ಪೊಲೀಸರಿಗೆ ತಿಳಿಸ್ದ್ದಿದನು.

ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಆರು ಆರೋಪಿಗಳ ಪೈಕಿ ನಿಂಗಣ್ಣನಗೌಡ ಗೌಡ್ರ ಹಾಗೂ ಆತನ ಮಾವ ಹುಚ್ಚಪ್ಪ ಕಗನಾಳ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.

ಕೊಲೆಯಲ್ಲ, ನರಬಲಿ..?: “ನವೆಂಬರ್ 26 ರ ಬೆಳಿಗ್ಗೆ ಮನೆಬಿಟ್ಟು ಹೋದ ಬಸವರಾಜ ರಾತ್ರಿವರೆಗೆ ಬಂದಿರಲಿಲ್ಲ. ಎಲ್ಲಿಗೆ ಹೋದ ಎಂಬ ಚಿಂತೆಯಲ್ಲಿದ್ದ ನಮಗೆ ಮರುದಿನ ಬೆಳಿಗ್ಗೆ ಗ್ರಾ.ಪಂ. ಸದಸ್ಯರೊಂದಿಗೆ ಬಂದ ಪೊಲೀಸರು ನಿಮ್ಮ ಮಗ ಆಸ್ಪತ್ರೆಯಲ್ಲಿದ್ದಾನೆ ಎಂದು ತಿಳಿಸಿದರು. ಅಲ್ಲಿಗೆ ಹೋದ ನಂತರ ಜೋಯಿಸರಹಳ್ಳಿ-ತಿರುಮಲಕೊಪ್ಪ ಮಧ್ಯದ ಹೊಟ್ಟೆಗೌಡರ ಹೊಲದಲ್ಲಿ ಆತನ ಶವ ಬಿದ್ದಿದೆ ಎಂದು ಹೇಳಿದರು. ಕುಟುಂಬದವರೆಲ್ಲರೂ ಅಲ್ಲಿಗೆ ಹೋದ ಮೇಲೆ ಮಗನ ಶವ ಗೋಣಿ ಚೀಲದಲ್ಲಿ ಇರುವುದು ಪತ್ತೆಯಾಗಿದೆ” ಎಂದು ತಾಯಿ ಮಂಜವ್ವ `ಪ್ರಜಾವಾಣಿ~ ಗೆ ಹೇಳಿದಳು.

ಪತ್ತೆಯಾದ ಮಗನ ಶವದ ಹಣೆ ಮೇಲೆ ಆಳವಾದ ರಂಧ್ರ ಬಿದ್ದಿತ್ತು. ಬಲಗಣ್ಣನ್ನು ಹಾಗೂ ಮೇಲ್ಭಾಗದ ಹಲ್ಲುಗಳನ್ನು ಕಿತ್ತು ಹಾಕಿರುವುದು, ದೇಹದ ಮೇಲೆ ಅರಿಷಿಣ, ಕುಂಕುಮದ ನೀರಿನಿಂದ ಸ್ನಾನ ಮಾಡಿಸಿರುವುದು ಹಾಗೂ ಕೆಲವಡೆ ಅರಿಷಿಣ, ಕುಂಕುಮ ಕಂಡು ಬಂದಿತು. ದೇಹವನ್ನು ಸುಟ್ಟು ಹಾಕಲು ಸೀಮೆ ಎಣ್ಣೆ ಸುರಿದ ವಾಸನೆ ಬರುತಿತ್ತು ಎಂದು ಆಕೆ ಹೇಳಿದಳು.

“ಮಗನ ಹಣೆಯಿಂದ ರಕ್ತವನ್ನು ತೆಗೆದು ಮನೆಯ ತುಂಬ ಸಿಂಪಡಿಸಿದ್ದಾರೆ. ಅದೇ ಕಾರಣಕ್ಕೆ ಪೂಜೆಗೆ ಬಳಸಿದ ನೀರಿನ ಕೊಡ, ಪ್ಲಾಸ್ಟಿಕ್ ಬುಟ್ಟಿ, ದೇವರ ಪೂಜೆ ಮಾಡಿದ ಮನೆಯ ಗೋಡೆಯ ಮೇಲೆ ರಕ್ತದ ಕಲೆಗಳಿವೆ. ಆತನ ಮೇಲ್ಭಾಗದ ಎರಡು ಹಲ್ಲುಗಳನ್ನು ತೆಗೆದು, ಬಲ ಕಣ್ಣುಗುಡ್ಡೆ ತೆಗೆದು ಮನೆಯ ಸುತ್ತಮುತ್ತಲೂ ಹೂತು ಹಾಕಿರಬಹುದು” ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸುತ್ತಾರೆ.

 ಘಟನೆ ಸತ್ಯಾಸತ್ಯತೆಯನ್ನು ಪತ್ತೆ ಮಾಡಿ ಮಗನನ್ನು ಬಲಿಕೊಟ್ಟ ಆರೋಪಿಗಳ ವಿರುದ್ಧ ಡಿಸೆಂಬರ್ 21 ರಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಮಾನವ ಹಕ್ಕುಗಳ ಆಯೋಗಕ್ಕೆ, ಸಮಾಜ ಕಲ್ಯಾಣ ಸಚಿವರಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ. ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಗೆ ಬಸವರಾಜನ ತಂದೆ ಭರಮ್ಮಪ್ಪ, ತಾಯಿ ಮಂಜವ್ವ ದೂರು ಸಲ್ಲಿಸಿದ್ದಾರೆ.

ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ರಾಣೆಬೆನ್ನೂರ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದ ಕುರಿತು ರಾಣೆಬೆನ್ನೂರ ಪೊಲೀಸ್ ಠಾಣೆಯ ಡಿವೈಎಸ್‌ಪಿ ಜಯಪ್ರಕಾಶ ತನಿಖೆ ನಡೆಸಿದ್ದಾರೆ.
ಆದರೆ, ಕೊಲೆಯಾದ ಬಸವರಾಜನ ತಂದೆ, ತಾಯಿಗಳೇ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ಈಗ ನರಬಲಿ ಎಂದು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಅವರು ದೂರು ನೀಡಿರುವ ಎಫ್‌ಐಆರ್ ನಮ್ಮ ಬಳಿ ಇದೆ ಎಂದು ರಾಣೆಬೆನ್ನೂರ ಗ್ರಾಮೀಣ ಠಾಣೆ ಸಿಪಿಐ ಗಿರೀಶಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.