ADVERTISEMENT

‘ಮನೆ ಮನೆಗೆ ಕುಮಾರಣ್ಣ’ ಸಿದ್ಧಗಂಗಾ ಮಠದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಜೆಡಿಎಸ್‌ ಹೊರತಂದಿರುವ ’ಮನೆ ಮನೆಗೆ ಕುಮಾರಣ್ಣ, ಈ ಬಾರಿ ಜೆಡಿಎಸ್‌ ಸರ್ಕಾರ’ ಪ್ರಚಾರ ಸಾಹಿತ್ಯದ ಮೇಲೆ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಕಣ್ಣಾಡಿಸಿದರು. ಶಾಸಕ ಸಿ.ಬಿ.ಸುರೇಶಬಾಬು, ಮುಖಂಡರಾದ ಎಚ್‌.ವಿಶ್ವನಾಥ್‌, ಸಿ.ಚೆನ್ನಿಗಪ್ಪ, ಗೌರಿಶಂಕರ್‌, ಎಚ್‌.ಡಿ.ದೇವೇಗೌಡ, ಬಿ.ಸತ್ಯನಾರಾಯಣ ಇದ್ದಾರೆ
ಜೆಡಿಎಸ್‌ ಹೊರತಂದಿರುವ ’ಮನೆ ಮನೆಗೆ ಕುಮಾರಣ್ಣ, ಈ ಬಾರಿ ಜೆಡಿಎಸ್‌ ಸರ್ಕಾರ’ ಪ್ರಚಾರ ಸಾಹಿತ್ಯದ ಮೇಲೆ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಕಣ್ಣಾಡಿಸಿದರು. ಶಾಸಕ ಸಿ.ಬಿ.ಸುರೇಶಬಾಬು, ಮುಖಂಡರಾದ ಎಚ್‌.ವಿಶ್ವನಾಥ್‌, ಸಿ.ಚೆನ್ನಿಗಪ್ಪ, ಗೌರಿಶಂಕರ್‌, ಎಚ್‌.ಡಿ.ದೇವೇಗೌಡ, ಬಿ.ಸತ್ಯನಾರಾಯಣ ಇದ್ದಾರೆ   

ತುಮಕೂರು: ಜೆಡಿಎಸ್‌ ಪಕ್ಷ ರೂಪಿಸಿರುವ ‘ಮನೆಮನೆಗೆ ಕುಮಾರಣ್ಣ, ಈ ಬಾರಿ ಜೆಡಿಎಸ್‌ ಸರ್ಕಾರ’ ಪ್ರಚಾರ ಕಾರ್ಯಕ್ರಮಕ್ಕೆ ಬುಧವಾರ ಸಿದ್ಧಗಂಗಾ ಮಠದಲ್ಲಿ ಚಾಲನೆ ನೀಡಲಾಯಿತು.

ಲೋಕಕಲ್ಯಾಣಾರ್ಥ ಹಾಗೂ ಮಠಾಧೀಶ ಶಿವಕುಮಾರ ಸ್ವಾಮೀಜಿ, ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಲೆಂದು ಮಠದಲ್ಲಿ ಆಯೋಜಿಸಿದ್ದ ಪರ್ಜನ್ಯ, ಮೃತ್ಯುಂಜಯ, ಗಣ ಹೋಮ ಸೇರಿ ವಿವಿಧ ಬಗೆಯ ಹೋಮ, ಹವನಕ್ಕೆ ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಪೂಜೆ ಸಲ್ಲಿಸಿದರು.

ನಂತರ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಜೆಡಿಎಸ್‌ ಪಕ್ಷ ತಂದಿರುವ ಪ್ರಚಾರ ಸಾಹಿತ್ಯವನ್ನು ಸ್ವಾಮೀಜಿ
ಬಿಡುಗಡೆಗೊಳಿಸಿದರು.

ADVERTISEMENT

‘ನಾನು ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನೀಡಿದ ಕಾರ್ಯಕ್ರಮಗಳು, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡುವ ಕಾರ್ಯಕ್ರಮಗಳ ವಿವರವನ್ನು ಈ ಹೊತ್ತಿಗೆಯಲ್ಲಿ ನೀಡಲಾಗಿದೆ. ಪ್ರಾದೇಶಿಕ ಪಕ್ಷ ಅನಿವಾರ್ಯ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ’ ಎಂದು ದೇವೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಶ್ರೀಗಳು ಆಶೀರ್ವಾದ ಮಾಡಿರುವುದು ನಮಗೆ ಶಕ್ತಿ ತಂದಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ’ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು, ಸೋತವರು, ಟಿಕೆಟ್ ಆಕಾಂಕ್ಷಿಗಳು, ಮನೆಮನೆಗೆ ತೆರಳಿ ಮತದಾರರಿಗೆ ಮನದಟ್ಟು ಮಾಡಿಕೊಡಲಿದ್ದಾರೆ ಎಂದರು.

ಜೆಡಿಎಸ್‌ ಅಧಿಕಾರ ಹಿಡಿಯುವುದು ಭ್ರಮೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ ಅವರು, ‘ಸಿದ್ದರಾಮಯ್ಯ ಅಧಿಕಾರ, ಹಣದ ಅಹಂಕಾರದಿಂದ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ನಾನು ಅಹಂಕಾರದಿಂದ ಮಾತನಾಡುವುದಿಲ್ಲ. ಅವರ ಮಾತುಗಳಿಗೆ ಅಸಮಾಧಾನ, ಅಸೂಯೆ ಪಡುವುದಿಲ್ಲ’ ಎಂದರು.

‘ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಗುರುತಿಸಿರಲಿಲ್ಲ. ನಾನು ಗುರುತಿಸಿ ಉಪಮುಖ್ಯಮಂತ್ರಿ ಮಾಡಿದೆ ಎಂದು ಅವರು ಹೇಳಿದರು.

ನಿಧಾನವಾಗಿ ಇಳಿಯಿರಿ...!

ತುಮಕೂರು: ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ಹೊತ್ತಿಗೆ ಬಿಡುಗಡೆ ವೇಳೆ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ದೇವೇಗೌಡರಿಗೆ ’ಮೆಟ್ಟಿಲುಗಳಿವೆ, ನಿಧಾನವಾಗಿ ಇಳಿಯಿರಿ’ ಎಂದು ಸ್ವಾಮೀಜಿ ಹೇಳಿದ್ದು, ಅಲ್ಲಿದ್ದ ಎಲ್ಲರ ಗಮನ ಸೆಳೆಯಿತು.

ಎರಡು ಸಲ ಇಂಥ ಎಚ್ಚರಿಕೆಯನ್ನು ಶ್ರೀಗಳು ನೀಡಿದರು. ಈ ವಯಸ್ಸಿನಲ್ಲೂ ಶ್ರೀಗಳ ಕಾಳಜಿ ಕಂಡು ಅಲ್ಲಿದ್ದವರು ಮೂಕವಿಸ್ಮಿತಗೊಂಡರು. ಶ್ರೀಗಳು ದೇವೇಗೌಡರಿಗೆ ಬಸವಣ್ಣನ ಮೂರ್ತಿ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.