ADVERTISEMENT

ಮರು ಮತದಾನಕ್ಕೆ ಆಗ್ರಹಿಸಿ ಧರಣಿ

ವಾಮಮಾರ್ಗದಿಂದ ಶೆಟ್ಟರ್‌ ಗೆಲುವು– ಆರೋಪ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು   

ಧಾರವಾಡ: ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಬಗ್ಗೆ ತನಿಖೆ ನಡೆಸಿ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ, ಕ್ಷೇತ್ರದಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಡಾ. ಮಹೇಶ ನಾಲವಾಡ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಇಲ್ಲಿನ ಆಲೂರು ವೆಂಕಟರಾವ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿದ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೋದಿ ಪ್ರತಿಕೃತಿ ದಹಿಸಿದರು.

‘ಸದರಿ ಚುನಾವಣೆಯಲ್ಲಿ ಉಪಯೋಗಿಸಿದ ಎಲ್ಲ ಮತಯಂತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿದ್ದು, ತಾಂತ್ರಿಕ ದೋಷ ಇದೆ. ಅದೇ ರೀತಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವರೂ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದ ಗೆಲುವಿನ ಅಂತರದ ಸಂಖ್ಯೆಗೂ, ವಾಸ್ತವಕ್ಕೂ ತೀರಾ ಹತ್ತಿರ ಇರುವುದರಿಂದ ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ನಾಲವಾಡ ಆಗ್ರಹಿಸಿದರು.

ADVERTISEMENT

‘ಸೆಂಟ್ರಲ್ ಕ್ಷೇತ್ರದಲ್ಲಿ ವಾಮಮಾರ್ಗದಿಂದ ಮತ್ತೊಮ್ಮೆ ಆಯ್ಕೆ ಆಗಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ನಿಜವಾಗಿಯೂ ಧೈರ್ಯ ಅಥವಾ ತಾಕತ್ತು ಇದ್ದರೆ ಇನ್ನೊಮ್ಮೆ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದರು.

ಮತಯಂತ್ರ ಹಾಗೂ ವಿ.ವಿ.ಪ್ಯಾಟ್‌ಗಳಲ್ಲಿನ ದೋಷದಿಂದ ಈ ಕ್ಷೇತ್ರದಲ್ಲಿ ಸೋಲಾಗಿದ್ದು, ಈ ಕೂಡಲೇ ಮರು ಮತದಾನಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.

ರ‍್ಯಾಲಿಯು ಜಿಲ್ಲಾಧಿಕಾರಿ ಆವರಣ ಪ್ರವೇಶಿಸುತ್ತಿದ್ದಂತೆಯೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.