ADVERTISEMENT

ಮಲಪ್ರಭಾ ಕಾಲುವೆಯಲ್ಲಿ ಶೇ 40ರಷ್ಟು ನೀರು ವ್ಯರ್ಥ

ವಿನಾಯಕ ಭಟ್ಟ‌
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST

ಬೆಳಗಾವಿ: ನಾಲ್ಕು ಜಿಲ್ಲೆಗಳ 2 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಉಣಿಸುವ ಸವದತ್ತಿ ತಾಲ್ಲೂಕಿನ ನವಿಲುತೀರ್ಥದ ಮಲಪ್ರಭಾ ಜಲಾಶಯದ ಕಾಲುವೆಗಳ ನಿರ್ವಹಣೆ ಕೊರತೆಯಿಂದಾಗಿ ಹರಿಯುವ ನೀರಿನಲ್ಲಿ ಸುಮಾರು ಶೇ 40ರಷ್ಟು ವ್ಯರ್ಥವಾಗುತ್ತಿದೆ. ಹೀಗಾಗಿ ಕಾಲುವೆಗಳ ಕೊನೆಯ ಭಾಗದ (ಟೇಲ್‌ಎಂಡ್) ರೈತರಿಗೆ `ಮಲಪ್ರಭೆ~ಯು ಮರೀಚಿಕೆಯಾಗಿದೆ. 

 ಬಲ ದಂಡೆ ಕಾಲುವೆಯು (ಎಂಆರ್‌ಬಿಸಿ) 142 ಕಿ.ಮೀ. ಹಾಗೂ  ಎಡ ದಂಡೆ ಕಾಲುವೆಯು (ಎಂಎಲ್‌ಬಿಸಿ) 150 ಕಿ.ಮೀ. ಉದ್ದವಿದೆ. ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳು ಅಲ್ಲಲ್ಲಿ ಶಿಥಿಲಗೊಂಡಿರುವುದು, ಹಲವು ವರ್ಷಗಳಿಂದ ಹೂಳು ಎತ್ತದಿರುವುದು ಹಾಗೂ ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯದೇ ಇರುವುದರಿಂದ ನಾಲೆಗಳ ಕೊನೆ ಭಾಗದ ರೈತರು ಪ್ರತಿ ವರ್ಷ ನೀರಿಗಾಗಿ ಪರದಾಡುವಂತಾಗಿದೆ.

ನವಿಲುತೀರ್ಥದಲ್ಲಿ 1972ರಲ್ಲಿ ನಿರ್ಮಿಸಿದ ಮಲಪ್ರಭಾ ಜಲಾಶಯವು 37.73 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಜಮೀನುಗಳಿಗೆ ನೀರುಣಿಸುತ್ತಿದೆ.

ಮುಖ್ಯ ಕಾಲುವೆ ಗುಂಟ ಹೊರಟರೆ ಅಲ್ಲಲ್ಲಿ ಬೆಳೆದಿರುವ ಜಾಲಿ ಗಿಡಗಳ ಪೊದೆಗಳು, ಉಪ ಕಾಲುವೆ ಹಾಗೂ ಹೊಲ ಕಾಲುವೆಗಳು (ಎಫ್‌ಐಸಿ) ಶಿಥಿಲಗೊಂಡಿರುವುದನ್ನು ಕಾಣಬಹುದು.  ಕೆಳ ಭಾಗದಲ್ಲಿ ಕೆಲವೆಡೆ ಗಿಡಗಂಟಿಗಳು ಬೆಳೆದಿರುವುದರಿಂದ ಕಾಲುವೆ ಎಲ್ಲಿದೆ ಎಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಲ ದಂಡೆ ಕಾಲುವೆಯ ನರಗುಂದ, ರೋಣ ತಾಲ್ಲೂಕು ಹಾಗೂ ಎಡ ದಂಡೆ ಕಾಲುವೆಯ ಬಾದಾಮಿ ಹಾಗೂ ಹುನಗುಂದ ತಾಲ್ಲೂಕಿನ ಭಾಗದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸುತ್ತಿಲ್ಲ.

`ಕಾಲುವೆಯಲ್ಲಿನ ಹೂಳು, ಗಿಡಗಂಟಿಗಳನ್ನು ಕಾಲ ಕಾಲಕ್ಕೆ ತೆಗೆಯುತ್ತಿಲ್ಲ. ನರಗುಂದದ ಕೊನೆಯ ಭಾಗದ ಕೆಲವೆಡೆ ಕಾಲುವೆಯು ನೆಲ ಮಟ್ಟಕ್ಕೆ ತಲುಪುತ್ತಿದೆ. ಕರ್ನಾಟಕ ನೀರಾವರಿ ನಿಗಮವು ಮಳೆಗಾಲ ಆರಂಭವಾಗುವ ಮುನ್ನ ಕಾಲುವೆ ದುರಸ್ತಿ ಕೆಲಸಕ್ಕೆ ಟೆಂಡರ್ ಕರೆಯುತ್ತದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಅರ್ಧಕ್ಕೆ ಕೆಲಸವನ್ನು ನಿಲ್ಲಿಸಿ ದಾಖಲೆಯಲ್ಲಿ ಕೆಲಸ ಮುಗಿದಿದೆ ಎಂದು ತೋರಿಸುತ್ತದೆ~ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆರೋಪಿಸುತ್ತಾರೆ.

`ಬಲ ದಂಡೆ ಕಾಲುವೆಯಲ್ಲಿ ಒಂದು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದರೆ, ನರಗುಂದ ತಾಲ್ಲೂಕಿನ ಗ್ರಾಮಗಳಿಗೂ ನೀರು ಸಿಗುತ್ತದೆ. ಆದರೆ, 500ರಿಂದ 600 ಕ್ಯೂಸೆಕ್ ಮಾತ್ರ ಹರಿಯುತ್ತವೆ. ಈ ಭಾಗದ ರೈತರಿಗೆ ಹೆಚ್ಚಿನ ನೀರು ಸಿಕ್ಕರೆ ಅವರ ಅದೃಷ್ಟ. ರೋಣದಲ್ಲಿ ನೆಪಕ್ಕೆ ಮಾತ್ರ ಕಾಲುವೆ ಇದೆ.  ಅಲ್ಲಿ ನೀರು ಹರಿದಿದ್ದನ್ನೇ ಕಂಡಿಲ್ಲ. ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಕಾಲುವೆಗಳ ದುರಸ್ತಿಗಾಗಿ ರೂ 9 ಕೋಟಿ ನೀಡಿದ್ದರು. ಆದರೆ, ಅದನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಇಂದಿಗೂ ಕಾಲುವೆಗಳ ಸ್ಥಿತಿ ಸುಧಾರಣೆಗೊಂಡಿಲ್ಲ~ ಎನ್ನುತ್ತಾರೆ ಕುಲಕರ್ಣಿ.

ಕಾಲುವೆಗಳ ನಿರ್ವಹಣೆ ಮಾಡಲು ನೀರು ಬಳಕೆದಾರರ ಸಂಘದ ಸದಸ್ಯರಾದ ರೈತರು ನೀರಾವರಿ ನಿಗಮಕ್ಕೆ ತೆರಿಗೆಯನ್ನು ಪಾವತಿಸಬೇಕು. ಆದರೆ, ರೈತರು ಸರಿಯಾಗಿ ಕರ ಪಾವತಿಸದೆ ಇರುವುದರಿಂದ ನಿಗಮವೂ ಕಾಲುವೆಗಳ ನಿರ್ವಹಣೆಯ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ.

`ಮುಖ್ಯ ಹಾಗೂ ವಿತರಣಾ ಕಾಲುವೆಗಳನ್ನು ನಿಗಮವೇ ನಿರ್ವಹಣೆ ಮಾಡುತ್ತದೆ. ಹೊಲ ಕಾಲುವೆಯನ್ನು ನೀರು ಬಳಕೆದಾರರ ಸಂಘವು ದುರಸ್ತಿಪಡಿಸಿಕೊಳ್ಳಬೇಕು. ಕಾಲುವೆ ನಿರ್ವಹಣೆಗಾಗಿ ರೂ 10 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ. ಅವುಗಳ ಪೈಕಿ ಬಲ ಹಾಗೂ ಎಡ ದಂಡೆ ಕಾಲುವೆಗಳ ದುರಸ್ತಿಗೆ ತಲಾ ರೂ 2 ಕೋಟಿ  ಬಳಸಿಕೊಳ್ಳಲಾಗುತ್ತದೆ.
 
ಆದ್ಯತೆ ಮೇಲೆ ಆಯಾ ವಿಭಾಗದಲ್ಲಿ ದುರಸ್ತಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ~ ಎಂದು ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನೆಯ ಪ್ರಭಾರ ಮುಖ್ಯ ಎಂಜಿನಿಯರ್ ಶರಣಪ್ಪ ಎಸ್. ಸೂಲಗುಂಟೆ `ಪ್ರಜಾವಾಣಿ~ಗೆ ತಿಳಿಸಿದರು.

`ಕೆಲವು ಕಡೆ ಒಂದು ಕಿ.ಮೀ.ಗಿಂತಲೂ ಹೆಚ್ಚು ದೂರಕ್ಕೆ ಕೊಳವೆ ಮಾರ್ಗದ ಮೂಲಕ ಕಾಲುವೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಮೇಲ್ಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರನ್ನು ರೈತರು ಮೇಲಕ್ಕೆ ಎತ್ತುತ್ತಿರುವುದರಿಂದ ಕೊನೆಯ ಭಾಗದ ನಿಗದಿಗೊಳಿಸಿರುವಷ್ಟು ನೀರು ಲಭ್ಯವಾಗುತ್ತಿಲ್ಲ. ಕೆಳಭಾಗದ ರೈತರು ದೂರು ನೀಡಿದಾಗ ನಿಗಮದ ವಿಚಕ್ಷಣಾ ದಳವು ಪೊಲೀಸರ ನೆರವಿನೊಂದಿಗೆ ಪರಿಶೀಲನೆ ನಡೆಸಿ, ಕೆಳ ಭಾಗಕ್ಕೂ ನೀರು ಹರಿಸಲು ಕ್ರಮ ಕೈಗೊಳ್ಳುತ್ತದೆ” ಎಂದು ಅವರು ತಿಳಿಸಿದರು.

ಜಲಾಶಯದಲ್ಲಿ ನೀರಿನ ಕೊರತೆ
ಮಲಪ್ರಭಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗುತ್ತಿರುವುದರಿಂದ ಮುಂಗಾರಿನ ಅವಧಿಯಲ್ಲಿ 6 ತಿಂಗಳ ಕಾಲ ಮಾತ್ರ ಕಾಲುವೆಗಳಿಗೆ ಅಗತ್ಯ ನೀರನ್ನು ಹರಿಸಲು ಸಾಧ್ಯವಾಗುತ್ತಿದೆ.

`ಯೋಜನೆಯ ಪ್ರಕಾರ ಮುಂಗಾರು ಬೆಳೆಗೆ ಶೇ. 40, ಹಿಂಗಾರು ಬೆಳೆಗೆ ಶೇ. 40 ಮತ್ತು ಕಬ್ಬು, ಹತ್ತಿ ವಾರ್ಷಿಕ ಬೆಳೆಗೆ ತಲಾ ಶೇ. 10ರಷ್ಟು ನೀರು ನೀಡಬೇಕು. ನೀರಿನ ಕೊರತೆಯಿಂದಾಗಿ ಮುಂಗಾರು ಬೆಳೆಗೆ ಸುಮಾರು 24.26 ಟಿ.ಎಂ.ಸಿ. ಅಡಿ ನೀರು ಪೂರೈಸಲಾಗುತ್ತಿದೆ~ ಎನ್ನುತ್ತಾರೆ ಮಲಪ್ರಭಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್. ನರಸಣ್ಣವರ.

“ಬೆಳೆ ನಿಯಮದ ಪ್ರಕಾರ ಹತ್ತಿ ಹಾಗೂ ಕಬ್ಬನ್ನು ಶೇ 10ರಷ್ಟು ಮಾತ್ರ ಬೆಳೆಯಬಹುದು. ಆದರೆ, ಎಡದಂಡೆ ಕಾಲುವೆ ಪ್ರದೇಶಗಳಲ್ಲಿ ಹೆಚ್ಚು ನೀರಿನ ಅಗತ್ಯ ಇರುವ ಕಬ್ಬನ್ನು ಬೆಳೆಯಲಾಗುತ್ತಿದೆ. ಇದರಿಂದಾಗಿ ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಲಭಿಸುತ್ತಿಲ್ಲ.

ಕಾಲುವೆಗೆ ನಿರಂತರವಾಗಿ ನೀರು ಹರಿಸುತ್ತಿರುವಾಗ ರೈತರು ರಾತ್ರಿಯ ವೇಳೆ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳುವುದಿಲ್ಲ. ಈ ಸಂದರ್ಭದಲ್ಲಿ ಅಲ್ಲಲ್ಲಿ  ಕಾಲುವೆಗಳಲ್ಲಿ ಸೋರಿಕೆ ಉಂಟಾಗುವುದರಿಂದ ಸುಮಾರು ಶೇ. 40 ಪ್ರಮಾಣದ ನೀರು ವ್ಯರ್ಥವಾಗುತ್ತದೆ~ ಎಂದು ಮಲಪ್ರಭಾ ಜಲಾಶಯದ ಕಾರ್ಯ ನಿರ್ವಾಹಕ ಎಂಜಿನಿಯರ್ ನರಸಣ್ಣವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.