ADVERTISEMENT

ಮಲೆನಾಡಲ್ಲಿ ಮಂಗನ ಕಾಯಿಲೆ ಉಲ್ಬಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ಸುಗ್ಗಿ ಕಾಲದ ಸಂತೋಷದಲ್ಲಿರಬೇಕಾದ ಮಲೆನಾಡಿನ ಜನರು ಇಂದು ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್)  ಯಿಂದಾಗಿ ನರಳುವಂತಾಗಿದೆ. ಕಾನನದಂಚಿನ ಊರುಗಳಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಊರಿಗೆ ಊರೇ ಆತಂಕದ ಮಡುವಲ್ಲಿ ಮಲಗಿದೆ.

ಒಂದು ತಿಂಗಳಿನ ಹಿಂದೆ ತಾಲ್ಲೂಕಿನ ಅಗ್ರಹಾರ ಹೋಬಳಿಯ ಕೋಣಂದೂರು ಭಾಗದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಈಗ ತಾಲ್ಲೂಕಿನ ಬಹುತೇಕ ಭಾಗಗಳಿಗೆ ವ್ಯಾಪಿಸಿದೆ. ಪ್ರತಿ ನಿತ್ಯ ಕಾಯಿಲೆಯಿಂದ ನರಳುವ ರೋಗಿಗಳ ದಂಡು ಆಸ್ಪತ್ರೆಗಳಿಗೆ ಸಾಲು ಸಾಲಾಗಿ ಬರುತ್ತಿದೆ.ರೋಗ ಪೀಡಿತರ ಸಂಖ್ಯೆ  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಈಗಾಗಲೇ ತಾಲ್ಲೂಕಿನ ಮಂಡಗದ್ದೆ, ಅಗ್ರಹಾರ ಹಾಗೂ ಮುತ್ತೂರು ಹೋಬಳಿಗಳ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಯಿಲೆ ಕಾಣಿಸಿಕೊಂಡಿದೆ. 38 ಮಂದಿಗೆ ಕಾಯಿಲೆ ಇರುವುದು ದೃಢಪಟ್ಟಿದೆ. 210 ಮಂದಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿನ ಕೆಎಫ್‌ಡಿ ವಾರ್ಡ್‌ನಲ್ಲಿ 30ರಿಂದ 40 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ಮಾಹಿತಿ ನೀಡಿದರು.

ರೋಗ ಬರುವ ಮೊದಲೇ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ವ್ಯವಸ್ಥಿತ ಪ್ರಯೋಗಾಲಯ ಸ್ಥಳೀಯವಾಗಿಯೇ ಇರಬೇಕು ಎನ್ನುತ್ತಾರೆ ರೋಗ ಪೀಡಿತ ಜನರು.

ಕಾಯಿಲೆಯನ್ನು ದೃಢಪಡಿಸಿಕೊಳ್ಳಲು ಈಗ ಸಾಕಷ್ಟು ಸಮಯ ಹಿಡಿಯುತ್ತಿದೆ. ಕಡಿಮೆ ಅವಧಿಯಲ್ಲಿ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ನೀಡಲು ನೆರವಾಗುತ್ತದೆ ಎನ್ನುತ್ತಾರೆ ವೈದ್ಯರು.

ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ  ಕಾಯಿಲೆಯ ನಿಯಂತ್ರಣಕ್ಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ರೋಗ ಪೀಡಿತ ಮಂಗಗಳು ಸಾಯುತ್ತಿವೆ. ಸತ್ತ ಮಂಗಗಳನ್ನು ಗುಡ್ಡೆ ಹಾಕಿ ಸುಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಯಿಲೆ ಇತರೆ ಪ್ರದೇಶಗಳಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ಜನರು ಕಾಡಿನ ಸಂಪರ್ಕದಿಂದ ದೂರ ಇರುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಆದರೆ, ಮಂಗಗಳು ಈಗ ಊರಿನಲ್ಲಿಯೇ ಸಾಯುತ್ತಿವೆ. ರೋಗ ಮನೆಯಂಗಳದಲ್ಲಿ ನೆಲೆ ನಿಂತಿದೆ.

ಬಿಸಿಲಿನ ಝಳ ಹೆಚ್ಚಿದಂತೆ ರೋಗವೂ ಉಲ್ಬಣಿಸುತ್ತಿದೆ. ರೋಗ ಪೀಡಿತ ಮಂಗಗಳಿಗೆ ಕಡಿದ ಉಣ್ಣೆ(ಒಣಗು) ಬಿಸಿಲಿನ ವಾತಾವರಣದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಜಾನುವಾರು, ನಾಯಿ, ಬೆಕ್ಕು ಮುಂತಾದ ಕಾಡಿನ ಸಂಪರ್ಕ ಇರಿಸಿಕೊಂಡ ಪ್ರಾಣಿಗಳಿಂದ ಊರು ಸೇರುತ್ತಿವೆ. ಜಾನುವಾರುಗಳಿಗೆ ಉಣ್ಣೆ ಹತ್ತದಂತೆ ತಡೆಯಲು ಒಂದು ಬಗೆಯ ಔಷಧ ಲೇಪಿಸಲು ಈಗಾಗಲೇ ನೀಡಲಾಗುತ್ತಿದೆ ಎಂದು ಪಶು ವೈದ್ಯಾಧಿಕಾರಿ ಡಾ.ವಿ.ಕೆ. ಮಂಜುನಾಥ್ ತಿಳಿಸಿದ್ದಾರೆ.

ರೋಗ ಪೀಡಿತ ಪ್ರತಿ ಹಳ್ಳಿಗಳಲ್ಲಿ ಮೌನ ಆವರಿಸಿದೆ. ಕೆಲವು ಮನೆಗಳಲ್ಲಿನ ಬಹುತೇಕರಿಗೆ ರೋಗ ತಗುಲಿರುವುದರಿಂದ ಅನ್ನ, ನೀರು ಕಾಣಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಿಕರೂ ಕೂಡ ಇಂಥಹ ಹಳ್ಳಿಗಳ ಕಡೆ ಮುಖ ಮಾಡುತ್ತಿಲ್ಲ ಎನ್ನುತ್ತಾರೆ ಮಂಡಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಸಿಂಧೂವಾಡಿ ಸತೀಶ್. ಮಳೆ ಬಿದ್ದರೆ ರೋಗ ನಿವಾರಣೆಯಾಗುತ್ತದೆ ಎಂದು ನಂಬಲಾಗಿದ್ದು, ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

1983ರಲ್ಲಿ ತಾಲ್ಲೂಕಿನ ದಬ್ಬಣಗದ್ದೆಯಲ್ಲಿ ಮೊದಲು ಕಾಣಿಸಿಕೊಂಡ ಈ ಕಾಯಿಲೆಯಿಂದ ಇಲ್ಲಿಯವರೆಗೆ 28 ಮಂದಿ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.