ADVERTISEMENT

ಮಲೆನಾಡಿನಲ್ಲಿ ಮಳೆ ಮಾಯ!

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಶಿವಮೊಗ್ಗ: ಮಲೆನಾಡಿನಲ್ಲಿಯೂ ಮಳೆ ಮಾಯವಾಗಿದ್ದು, ಜಿಲ್ಲೆಯಲ್ಲಿ ಮಳೆಯ ಮೋಡದ ಬದಲಿಗೆ ಬರದ ಕಾರ್ಮೋಡ ಕವಿದಿದೆ. ನದಿ, ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ತುಂಬಿ ಹರಿಯಬೇಕಾದ ಈ ಕಾಲದಲ್ಲಿ ಎಲ್ಲವೂ ಬತ್ತಿ, ಬರಿದಾಗುತ್ತಿವೆ. ಜೂನ್-ಜುಲೈ ತಿಂಗಳ ಬಿತ್ತನೆ ಸಮಯದಲ್ಲಿ ಕೇವಲ ಶೇಕಡ 38ರಷ್ಟು ಮಳೆಯಾಗಿದ್ದು, ಯಾವುದೇ ಬೆಳೆ ನಾಟಿ ಮಾಡಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ.

ಬತ್ತ, ಮೆಕ್ಕೆಜೋಳ ಜಿಲ್ಲೆಯ ಪ್ರಧಾನ ಬೆಳೆಗಳು. ಜುಲೈ ಮಧ್ಯದ ಒಳಗೆ ಇವುಗಳ ನಾಟಿ ಕಾರ್ಯ ಮುಗಿಯಬೇಕಿತ್ತು. ಒಟ್ಟು ಬತ್ತದ ಬಿತ್ತನೆಯ 1,08,000 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 6,700 (ಶೇಕಡ 7ರಷ್ಟು) ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ ಒಟ್ಟು ಬಿತ್ತನೆಯ 68,830 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಆದರೆ, ಮಳೆ ಕೊರತೆಯಿಂದ ಬಿತ್ತದ ಮುಸುಕಿನ ಜೋಳವೂ ಮೊಳಕೆ ಒಡೆದಿಲ್ಲ.

ಜಲಾನಯನ ಪ್ರದೇಶಗಳಲ್ಲೂ ಮಳೆ ಕೊರತೆಯಿಂದಾಗಿ ಜಲಾಶಯಗಳ ನೀರಿನ ಮಟ್ಟವೂ ಏರುತ್ತಿಲ್ಲ. ಭದ್ರಾ ಜಲಾಶಯ 145 ಅಡಿ ಏರಿಕೆಯಾದರೆ ಮಾತ್ರ ನೀರು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ತೀರ್ಮಾನಿಸಿದೆ. ಸದ್ಯ 138 ಅಡಿ ನೀರು ಜಲಾಶಯದಲ್ಲಿದ್ದು, ಇನ್ನೂ 7 ಅಡಿ ನೀರು ಬರುವುದಕ್ಕೆ ಇನ್ನೆಷ್ಟು ಮಳೆ ಬರಬೇಕು ಎಂದು ರೈತರು ಲೆಕ್ಕಾಚಾರ ಹಾಕುತ್ತಿದ್ದಾರೆ. 

ಮಳೆ ಮುಂದೆಯೂ ಕಣ್ಮರೆಯಾಗಲಿದೆ ಎಂದು ಅಂದಾಜಿಸಿರುವ ಕೃಷಿ ಇಲಾಖೆ, ಈಗಾಗಲೇ ಮಧ್ಯಮ ಹಾಗೂ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರಿಗೆ ಶಿಫಾರಸು ಮಾಡುತ್ತಿದೆ. ಬತ್ತ ಬಿಟ್ಟು ಸೂರ್ಯಕಾಂತಿ, ಅಲಸಂದೆ ಬಿತ್ತನೆಗೆ ಸಲಹೆ ಮಾಡಿದೆ. ಜಿಲ್ಲೆಯಲ್ಲಿ ಈ ಬೀಜಗಳ ಕೊರತೆ ಇದ್ದು, ಇಲಾಖೆಯಲ್ಲಿ ಶೇಕಡ 10ರಷ್ಟು ಮಾತ್ರ ದಾಸ್ತಾನು ಇದೆ ಎನ್ನುತ್ತದೆ ಕೃಷಿ ಇಲಾಖೆ.

ಈ ಮಧ್ಯೆ ಜಿಲ್ಲೆಯಲ್ಲಿನ ಮಳೆ ಕೊರತೆ ಗಮನಿಸಿ, ಬೆಂಗಳೂರಿನ ತಜ್ಞರ ತಂಡವೊಂದು ಈಚೆಗೆ ಆಗಮಿಸಿ, ಶಿವಮೊಗ್ಗ ತಾಲ್ಲೂಕು, ಭದ್ರಾವತಿ, ಶಿಕಾರಿಪುರಕ್ಕೂ ಭೇಟಿ ನೀಡಿ, ಇಲ್ಲಿಯ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ. ಅಲ್ಲದೇ, ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಈಚಿನ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಲಾಗಿದೆ. 

`ಜಿಲ್ಲೆಯಲ್ಲಿ ಉದ್ಭವಿಸಿರುವ ಬರದ ಭೀಕರತೆಯ ಬಗ್ಗೆ ನಮ್ಮಿಂದ ಕಾಲ-ಕಾಲಕ್ಕೆ ಸರ್ಕಾರಕ್ಕೆ ವರದಿ ಹೋಗಿದೆ. ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ. ಆದರೆ, ಅಲ್ಲಿಂದ ಇದುವರೆಗೂ ಯಾವುದೇ ಸಲಹೆ-ಸೂಚನೆಗಳು ಬಂದಿಲ್ಲ~ ಎಂಬುದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರು  ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.