ADVERTISEMENT

ಮಳೆಗಾಗಿ ಮಂತ್ರದ ಮೊರೆ!

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಮಳೆಗಾಗಿ ಮಂತ್ರದ ಮೊರೆ!
ಮಳೆಗಾಗಿ ಮಂತ್ರದ ಮೊರೆ!   

ಬೆಂಗಳೂರು: `ಸಮೃದ್ಧ ಮಳೆ- ಬೆಳೆ ಆಗಲಿ~ ಎಂದು ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಹೋಮ- ಹವನ ಮತ್ತು ವಿಶೇಷ ಪೂಜೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಆಯಾ ದೇವಸ್ಥಾನಗಳ ನಿಧಿಯಿಂದ ಐದು ಸಾವಿರ ರೂಪಾಯಿವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಈ ಸುತ್ತೋಲೆ ಕುರಿತು ವಿಧಾನಸಭೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, `ಪೂಜೆ- ಪುನಸ್ಕಾರಕ್ಕೆ ಸರ್ಕಾರದ ಹಣ ಏಕೆ? ಹೇಗಿದ್ದರೂ ಸರ್ಕಾರದಲ್ಲಿ ಹಣ ಇಲ್ಲ. ಶಾಸಕರ ಒಂದು ತಿಂಗಳ ವೇತನ ಕೊಡುತ್ತೇವೆ. ಆ ಹಣದಲ್ಲೇ ಪೂಜೆ ಮಾಡಿಸಿ~ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಎಚ್.ಎಸ್.ಮಹದೇವ ಪ್ರಸಾದ್ ಮತ್ತು ಜೆಡಿಎಸ್‌ನ ಸಿ.ಎಸ್.ಪುಟ್ಟೇಗೌಡ ಅವರು `ಮಳೆ ಬರಲಿ ಎಂದು ಪೂಜೆಗೆ ಆದೇಶಿಸಿರುವುದು ಸರ್ಕಾರವೇ ಮೂಢನಂಬಿಕೆ  ಪ್ರೋತ್ಸಾಹಿಸಿದಂತೆ~ ಎಂದು ಟೀಕಿಸಿದರು.

ADVERTISEMENT

`ರಾಜ್ಯದಲ್ಲಿ 34 ಸಾವಿರ ಮುಜರಾಯಿ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನದಲ್ಲಿನ ಪೂಜೆಗೆ ಐದು ಸಾವಿರ ರೂಪಾಯಿ ಅಂತ ಲೆಕ್ಕ ಹಾಕಿದರೆ ರೂ 17 ಕೋಟಿ ಬೇಕಾಗುತ್ತದೆ. ಈ ಹಣವನ್ನು ಜಾನುವಾರುಗಳಿಗೆ ಮೇವು ಖರೀದಿಸಲು ಬಳಸಿದರೆ ಉಪಕಾರ ಮಾಡಿದಂತಾಗುತ್ತದೆ~ ಎಂದರು.

ಸುತ್ತೋಲೆಯಲ್ಲಿ ಏನಿದೆ?: ಸಮೃದ್ಧ ಮಳೆ- ಬೆಳೆಗಾಗಿ ಎಲ್ಲ ದೇವಸ್ಥಾನಗಳಲ್ಲೂ ವರುಣ ಮಂತ್ರ, ಜಲಾಭಿಷೇಕ ಅಗತ್ಯ. ಹೀಗಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನದಿ ತೀರ, ಕಲ್ಯಾಣಿ, ಪುಷ್ಕರಣಿಗಳನ್ನು ಹೊಂದಿರುವ ಪ್ರಮುಖ ದೇವಾಲಯಗಳಲ್ಲಿ (ಕೊಲ್ಲೂರು ಮೂಕಾಂಬಿಕಾ, ಕುಕ್ಕೆ ಸುಬ್ರಹ್ಮಣ್ಯಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಮತ್ತು ಶ್ರೀಕಂಠೇಶ್ವರಸ್ವಾಮಿ) ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಪರ್ಜನ್ಯಜಪ, ಹೋಮ, ವಿಶೇಷ ಪೂಜೆಗಳನ್ನು ಮಾಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಮುಜರಾಯಿ ಇಲಾಖೆಯ ಎ, ಬಿ ಮತ್ತು ಸಿ ವರ್ಗದ ದೇವಾಲಯಗಳಲ್ಲಿ `ಜಲಾಭಿಷೇಕ~  ಮಾಡುವುದಕ್ಕೂ ಆದೇಶಿಸಲಾಗಿದೆ. ಜು.27 ಮತ್ತು ಆ. 2ರಂದು ವಿಶೇಷ ಪೂಜೆ ಮಾಡಬೇಕು. ಇದಕ್ಕೆ  ಗರಿಷ್ಠ ರೂ 5000 ಮೀರದಂತೆ ಆಯಾಯ ದೇವಸ್ಥಾನಗಳ ನಿಧಿಯಿಂದ ಭರಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.