ADVERTISEMENT

ಮಳೆಗಾಗಿ ಮೌನವ್ರತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಮಳೆಗಾಗಿ ಮೌನವ್ರತ
ಮಳೆಗಾಗಿ ಮೌನವ್ರತ   

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ಮಳೆಗಾಗಿ ಪ್ರಾರ್ಥಿಸಿ ನಾಡಿನಾದ್ಯಂತ ಭಜನೆ, ಕತ್ತೆಗಳ ಮದುವೆ, ಗುರ್ಜಿ ಪೂಜೆ ಎಂಬ ವಿವಿಧ ಆಚರಣೆಗಳು ನಡೆಯುತ್ತಿದ್ದರೆ, ತಾಲ್ಲೂಕಿನ ಮೂರನೇ ಸೀಗೇನಹಳ್ಳಿಯ ಬಯಲಾಟ ಕಲಾವಿದ ಚುಕ್ಕನಕಲ್ಲು ರಾಮಣ್ಣ ಬುಧವಾರದಿಂದ ಅನ್ನ, ನೀರು ತ್ಯಜಿಸಿ ಮೌನವ್ರತ ಆರಂಭಿಸಿದ್ದಾರೆ.

ತಾಲ್ಲೂಕಿನ ಒಟ್ಟು 47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಇದುವರೆಗೆ ಕೇವಲ ನಾಲ್ಕು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ರೈತರು ಮಳೆಯ ನಿರೀಕ್ಷೆಯಲ್ಲಿದ್ದು, ಗ್ರಾಮಸ್ಥರು ಮಳೆಗಾಗಿ ವಿವಿಧ ಜಾನಪದ ಆಚರಣೆಗಳಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿ ಕಲಾವಿದ ರಾಮಣ್ಣ ಅವರೂ ಮೌನ ವ್ರತಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಪಂಢರಪುರಕ್ಕೆ ಪಾದ­ಯಾತ್ರೆ ತೆರಳಿದ್ದ ಅವರು, ಅಲ್ಲಿಂದ ಬಂದೊಡನೆ ಮನೆಗೂ ಹೋಗದೇ ಗ್ರಾಮದ ಪಾಂಡುರಂಗ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಗ್ರಾಮಸ್ಥರು ಕೂಡ ಕೆಲ ಗಂಟೆಗಳ ಕಾಲ ಅವರೊಡನೆ ಇದ್ದು ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದಾರೆ. 

ADVERTISEMENT

‘ಏನ್‌ ಮಾಡೋದ್ರಿ.... ಮಳೀ ಇಲ್ಲ, ಬೆಳಿ ಇಲ್ಲ. ಅದಕ್ಕ...ಪಾಂಡುರಂಗನ ಭಕ್ತರು ದಿಂಡಿ ಯಾತ್ರಿ, ಭಜನಿ ಎಲ್ಲಾ ಮಾಡಿದ್ವಿ. ಆದ್ರೂ ಮಳಿ ಆಗ್ಲಿಲ್ಲ. ಅದಕ್ಕ ರಾಮಣ್ಣ ಹಟ ಹಿಡ್ದು ಯಾರ ಹತ್ರನೂ ಮಾತಾಡದಂಗ ದೇವರ ಹತ್ರ ಮಳಿ ಬೇಡಾಕತ್ತಾನ್ರಿ. ಶನಿವಾರದವರೆಗೂ ಉಪವಾಸ ಮಾಡ್ತಾನ್ರಿ’ ಎಂದು ಗ್ರಾಮಸ್ಥ ನಾಗಿರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.