ADVERTISEMENT

ಮಳೆಗೆ ಇಬ್ಬರ ಸಾವು; ಸಂತ್ರಸ್ತರ ಶೆಡ್ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 20:10 IST
Last Updated 12 ಜೂನ್ 2011, 20:10 IST

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾನುವಾರ ಮಳೆ ಚುರುಕುಗೊಂಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ಮಧ್ಯೆ ಮಳೆಯಾಗುತ್ತಿದ್ದಾಗ ಪ್ರತ್ಯೇಕ ಘಟನೆಗಳಲ್ಲಿ ಹೊಳೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಚಿಕ್ಕಸೂಗೂರಿನಲ್ಲಿ ಗಾಳಿ ಮಳೆಗೆ ಪ್ರವಾಹ ಸಂತ್ರಸ್ತರ ಟಿನ್ ಶೆಡ್‌ಗಳು ಹಾರಿಹೋಗಿವೆ. ಭಾಗಮಂಡಲ ಬಳಿಯ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಚೆಂಬು ಗ್ರಾಮದ ಮಜಿಕೋಡಿ ಎಂಬಲ್ಲಿ ಮನೆ ಮುಂಭಾಗದ ಹೊಳೆಗೆ ಅಡಿಕೆ ಮರದ ಸೇತುವೆ ನಿರ್ಮಿಸುತ್ತಿದ್ದಾಗ ಹೂವಪ್ಪ ಯಾನೆ ಹೂವಯ್ಯ (48) ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ.

ಪಾಲ (ಸೇತುವೆ) ನಿರ್ಮಾಣ ಮಾಡುತ್ತಿದ್ದ ವೇಳೆ ಅವರು ಅಯತಪ್ಪಿ ಬಿದ್ದರು. ನೀರು ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಕೆಲಸಗಾರರು ಕೂಡಲೇ  ಮೇಲಕ್ಕೆತ್ತಿದ್ದರೂ ಅಷ್ಟರಲ್ಲೇ ಮೃತಪಟ್ಟಿದ್ದರು.

ADVERTISEMENT

ದ.ಕ. ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ ಪರಿಸರದಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಅಜೆಕಾರು ಠಾಣೆ ವ್ಯಾಪ್ತಿಯ ಮರ್ಣೆ ಗ್ರಾಮದ ನಡಿಮಾರಿನಲ್ಲಿ ಭಾನುವಾರ ಬೆಳಿಗ್ಗೆ ಹಳ್ಳ  ಕ್ಕೆ ಜಾರಿ ಬಿದ್ದು  ನವ ವಿವಾಹಿತ ಮೃತಪಟ್ಟಿದ್ದಾನೆ.

ನಡಿಮಾರು ಬೈಲುಮನೆ ನಿವಾಸಿ ಶಿಶುಪಾಲ ಶೆಟ್ಟಿ (37) ಮೃತಪಟ್ಟ ದುರ್ದೈವಿ. ಬೆಳಿಗ್ಗೆ 7.30ಕ್ಕೆ ಮನೆ ಸಮೀಪದ ಹಳ್ಳದಲ್ಲಿ ದಾಟುತ್ತಿದ್ದಾಗ ಜಾರಿ ಬಿದ್ದರು. ರಕ್ಷಿಸಿ ಕೂಡಲೇ ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪ್ರಯೋಜನ ಆಗಲಿಲ್ಲ. ಶಿಶುಪಾಲ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು.

ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಬಿರುಸಿನಿಂದ ಸುರಿಯುತ್ತಿದೆ. ಭಾನುವಾರಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ವಿಶೇಷವಾಗಿ ಪೊನ್ನಂಪೇಟೆಯಲ್ಲಿ 77.6 ಮಿ.ಮೀ.ನಷ್ಟು ಮಳೆಯಾಗಿದೆ.

ಮಡಿಕೇರಿಯಲ್ಲಿ 55 ಮಿ.ಮೀ, ಶ್ರೀಮಂಗಲದಲ್ಲಿ 42.1 ಮಿ.ಮೀ, ಅಮ್ಮತ್ತಿಯಲ್ಲಿ 40 ಮಿ.ಮೀ, ಬಾಳೆಲೆಯಲ್ಲಿ 22.5 ಮಿ.ಮೀ, ಸೋಮವಾರ ಪೇಟೆಯಲ್ಲಿ 20 ಮಿ.ಮೀ, ವೀರಾಜಪೇಟೆಯಲ್ಲಿ 17 ಮಿ.ಮೀ. ನಷ್ಟು ಮಳೆಯಾಗಿದೆ. ಲಿಂಗನಮಕ್ಕಿ ಸುತ್ತಮುತ್ತ 44.2 ಮಿ.ಮೀ. ಮಳೆಯಾದ ಪರಿಣಾಮ ಒಳಹರಿವು 7,839 ಕ್ಯೂಸೆಕ್‌ಗೆ ಏರಿದೆ. ಅದೇ ರೀತಿ ಭದ್ರಾ ಜಲಾಶಯದ ಅಕ್ಕಪಕ್ಕ ಮಳೆಯಾಗಿ ಒಳಹರಿವು 4,443 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹಾಗಾಗಿ ನೀರಿನ ಮಟ್ಟದಲ್ಲಿ ಒಂದು ಅಡಿ ಹೆಚ್ಚಳವಾಗಿದ್ದು, ಅದು 146 ಅಡಿಗೆ ಏರಿದೆ.

ಹಾರಿದ ಶೆಡ್‌ಗಳು: ರಾಯಚೂರು ಸಮೀಪದ ಚಿಕ್ಕಸುಗೂರ ಗ್ರಾಮದ ನೆರೆ ಸಂತ್ರಸ್ತರಿಗೆ ಎರಡು ವರ್ಷದ ಹಿಂದೆ ರಾಜ್ಯ ಸರ್ಕಾರವು ಹಾಕಿಕೊಟ್ಟಿದ್ದ ಟಿನ್ ಶೆಡ್‌ಗಳು ಭಾನುವಾರ ಸಂಜೆ ಭಾರಿ ಗಾಳಿಗೆ ಹಾರಿವೆ.
 32 ಶೆಡ್‌ನಲ್ಲಿ 10 ಕುಟುಂಬಗಳು ಚಿಕ್ಕಸುಗೂರು ಗ್ರಾಮಕ್ಕೆ ತೆರಳಿ ವಾಸಿಸುತ್ತಿದ್ದರೆ ಇನ್ನೂ 22 ಕುಟುಂಬಗಳು ಇದೇ ಟಿನ್ ಶೆಡ್‌ನಲ್ಲಿ ಜೀವನ ನಡೆಸುತ್ತಿದ್ದರು.

ಭಾರಿ ಗಾಳಿ ಬೀಸಿದ್ದರಿಂದ ಟಿನ್ ಶೆಡ್ ಹಾರಿವೆ. ಎಲ್ಲ ಶೆಡ್‌ಗಳು ಛಿದ್ರವಾಗಿದ್ದು, ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳು ಟಿನ್ ಶೆಡ್ ಮೇಲೆಯೇ ಬಿದ್ದಿವೆ.

ಗಾಳಿ ಬೀಸುತ್ತಿದ್ದಾಗ ಸಂತ್ರಸ್ತರು ಗಾಬರಿಗೊಂಡು ಶೆಡ್ ಹೊರಗಡೆ ಬಂದಿದ್ದರಿಂದ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಶೆಡ್‌ಗಳು ನೆಲ್ಲಕ್ಕುರುಳಿದವು. ನಾಲ್ಕಾರು ಜನರಿಗೆ ಗಾಯಗಳಾಗಿವೆ. ಮತ್ತೆ ಬೀದಿಗೆ ಬಿದ್ದಿದ್ದೇವೆ. ಈಗ ಉಳಿದುಕೊಳ್ಳಲು ಜಾಗೆ ಇಲ್ಲ ಎಂದು ಕಣ್ಣೀರಿಟ್ಟ ಸಂತ್ರಸ್ತರು ಹೈದರಾಬಾದ್-ರಾಯಚೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನ್ಬುಕುಮಾರ, ತಹಶೀಲ್ದಾರ ಮಧುಕೇಶ್ವರ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಸಂತ್ರಸ್ತರ ಸಂತೈಸಲು ಮುಂದಾದರು. ಚಿಕ್ಕಸುಗೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಪದೇ ಪದೇ ಕಹಿ ಅನುಭವ: 2009ರಲ್ಲಿ ಪ್ರವಾಹದ ಕಹಿ ಅನುಭವ, ನರಕಯಾತನೆ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮತ್ತೆ ಈ ವರ್ಷ ಮುಂಗಾರು ಮಳೆ ಆರಂಭದ ಸಂದರ್ಭದಲ್ಲಿ ಆಗುತ್ತಿದೆ. ಹೋದ ವಾರಷ್ಟೇ ರಾಯಚೂರು ತಾಲ್ಲೂಕಿನ ತಲಮಾರಿ ಗ್ರಾಮದ ನೆರೆ ಸಂತ್ರಸ್ತರಿಗೆ ಹಾಕಿದ ಟಿನ್ ಶೆಡ್ ಭಾರಿ ಮಳೆಗಾಳಿಗೆ ಹಾರಿದ್ದರಿಂದ 72 ಕುಟುಂಬಗಳು ಬೀದಿಗೆ ಬಿದ್ದಿದ್ದವು. ನಾಲ್ಕಾರು ಜನರಿಗೆ ಗಾಯಗಳಾಗಿದ್ದವು.

ಚಿಕ್ಕಸುಗೂರು ನೆರೆ ಸಂತ್ರಸ್ತರು ವಾಸಿಸುವ ಸ್ಥಳದಲ್ಲಿ ಅಂಥದ್ದೇ ಘಟನೆ ನಡೆದಿದೆ. 22 ಕುಟುಂಬದವರು ಎರಡೂವರೆ ವರ್ಷದ ಹಿಂದೆ ಬೀದಿಗೆ ಬಿದ್ದ ಕಹಿ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.