ADVERTISEMENT

ಮಹದಾಯಿ ಇತ್ಯರ್ಥಕ್ಕೆ ಬದ್ಧ

ಹೇಮಾವತಿ– ನೇತ್ರಾವತಿ ನದಿ ಜೋಡಣೆ ಯೋಜನೆ ಕೈಗೊಳ್ಳಲು ಸಿದ್ಧ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ಮಹದಾಯಿ ಇತ್ಯರ್ಥಕ್ಕೆ ಬದ್ಧ
ಮಹದಾಯಿ ಇತ್ಯರ್ಥಕ್ಕೆ ಬದ್ಧ   

ಬೆಂಗಳೂರು: ‘ಮಹದಾಯಿ ಜಲ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಬಿಜೆಪಿ ಬದ್ಧ’ ಎಂದು ಗದಗದಲ್ಲಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಹೇಮಾವತಿ ಮತ್ತು ನೇತ್ರಾವತಿ ನದಿಗಳ ಜೋಡಣೆ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತೇವೆ’ ಎಂದು ತುಮಕೂರಿನಲ್ಲಿ ಘೋಷಿಸಿದರು.

ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಶನಿವಾರ ಮಾತನಾಡಿದ ಅವರು, ಸ್ಥಳೀಯ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾವಿಸಿ ಮತದಾರರ ಮನಗೆಲ್ಲಲು ಯತ್ನಿಸಿದರು. ಆ ಮೂಲಕ, ಕಾಂಗ್ರೆಸ್‌ ಮತ ಬುಟ್ಟಿಗಳಿಗೆ ಕೈ ಹಾಕುವ ಕೆಲಸವನ್ನೂ ಮಾಡಿದರು.

ಮಹದಾಯಿ ವಿಷಯದಲ್ಲಿ ಮೌನ ಮುರಿದ ಮೋದಿ, ‘ಈ ನದಿಯ ಶುದ್ಧ ನೀರಿಗೆ ರಾಜಕಾರಣ ಬೆರೆಸಿದ ಕಾಂಗ್ರೆಸ್ ಅದನ್ನು ಕಲುಷಿತಗೊಳಿಸಿದೆ. ವ್ಯಾಜ್ಯವನ್ನು ಕಗ್ಗಂಟಾಗಿಸಿ, ನ್ಯಾಯಮಂಡಳಿಗೆ ಒಪ್ಪಿಸಿ ಪಾಪದ ಕೃತ್ಯವನ್ನೂ ಮಾಡಿದೆ’ ಎಂದು ದೂರಿದರು.

ADVERTISEMENT

‘ಮಹದಾಯಿಯ ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು 2007ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಇದು ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ. ಏಕೆಂದರೆ, ಆಗ ಅವರು ಕಾಂಗ್ರೆಸ್ ಪಕ್ಷದಲ್ಲೇ ಇರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಈವರೆಗೆ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಸೋತು ಕೃಶವಾಗಿರುವ ಕಾಂಗ್ರೆಸ್‌ಗೆ ಕರ್ನಾಟಕವೊಂದೇ ಉಸಿರಾಡಲು ಅವಕಾಶ ನೀಡಿತ್ತು. ಆದರೆ, ಮೇ 15ರ ನಂತರ ಕಾಂಗ್ರೆಸ್, ‘ಪಿಪಿಪಿ’ (ಪಂಜಾಬ್‌– ಪುದುಚೇರಿ –ಪರಿವಾರ) ಕಾಂಗ್ರೆಸ್‌ ಆಗಲಿದೆ’ ಎಂದೂ ಲೇವಡಿ ಮಾಡಿದರು.

ಎಂಟು ಜಿಲ್ಲೆಗಳಿಗೆ ಅನುಕೂಲ: ‘ಹೇಮಾವತಿ ಮತ್ತು ನೇತ್ರಾವತಿ ನದಿಗಳ ಜೋಡಣೆಯಿಂದ ತುಮಕೂರು ಮತ್ತು ಆಸುಪಾಸಿನ ಎಂಟು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ’ ಎಂದು ಮೋದಿ ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆ ಹತ್ತಾರು ವರ್ಷಗಳಿಂದ ಜಾರಿಯಾಗುವುದರಲ್ಲೇ ಇದೆ. ಹೇಮಾವತಿ ನದಿ ನೀರನ್ನು ತುಮಕೂರಿಗೆ ಯಾಕೆ ಕೊಟ್ಟಿಲ್ಲ. ಎತ್ತಿನಹೊಳೆ ಕುಡಿಯುವ ನೀರು ಯೋಜನೆಯನ್ನು ಯಾಕೆ ಪೂರ್ಣಗೊಳಿಸಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ನೀರಾವರಿ ಸೌಲಭ್ಯ ವಿಸ್ತರಣೆಗೆ ನದಿಗಳ ಜೋಡಣೆ ಅನಿವಾರ್ಯ. ಇದು ವಾಜಪೇಯಿ ಅವರ ಮಹಾ ಕನಸಾಗಿತ್ತು’ ಎಂದರು.

‘30– 35 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಿದ್ದೇವೆ. ಒಂದು ಲಕ್ಷ ಕೋಟಿ ವೆಚ್ಚದಲ್ಲಿ ಕೈಗೊಂಡಿ
ರುವ ಈ ಯೋಜನೆಗಳಲ್ಲಿ ಕರ್ನಾಟಕದ ಐದು ಯೋಜನೆಗಳು ಸೇರಿವೆ. 24 ಲಕ್ಷ ಹೆಕ್ಟೇರ್‌ ಜಮೀನಿಗೆ ಹನಿ ಮತ್ತು ತುಂತುರು ನೀರಾವರಿ ಸೌಕರ್ಯ ಕಲ್ಪಿಸಿದ್ದೇವೆ’ ಎಂದು ತಿಳಿಸಿದರು.

ವಾಚ್‌ಗೆ ಜೋಗ ನಂಟು: ಶಿವಮೊಗ್ಗದಲ್ಲಿ ಮಾತನಾಡಿದ ಮೋದಿ, ‘ಇಲ್ಲಿನ ವಿಶ್ವ ಜೋಗ ಜಲಪಾತಕ್ಕೂ, ಸಿದ್ದರಾಮಯ್ಯ ಅವರ ದುಬಾರಿ ವಾಚ್‌ಗೂ ಸಂಬಂಧವಿದೆ. ಅಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳುವ ಉದ್ದೇಶಕ್ಕೆ ಕಾಣಿಕೆಯಾಗಿ ವಾಚ್ ನೀಡಿದ್ದ ಶಂಕೆ ಇದೆ’ ಎಂದು ಟೀಕಿಸಿದರು.

‘ಪ್ರಿಸನ್‌, ಪ್ರೈಸ್‌ ರೈಸ್‌, ಪಕೋಡಾ’

ಮೋದಿ ಆರೋಪಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಪಿಪಿಪಿ’ಗೆ ನಿಮ್ಮದೇ ಆದ ಪೂರ್ಣರೂಪ ನೀಡಿದ್ದೀರಿ. ನಮ್ಮ ಪ್ರಕಾರ ಪ್ರಜಾಪ್ರಭುತ್ವದಲ್ಲಿ ‘ಪಿಪಿಪಿ’ ಅಂದರೆ ‘ಜನರಿಂದ, ಜನರಿಗಾಗಿ ಜನರಿಗೋಸ್ಕರ’. ಆದರೆ, ನಿಮ್ಮ ಪಕ್ಷದ ಧೋರಣೆ ‘ಪ್ರಿಸನ್‌(ಜೈಲು), ಪ್ರೈಸ್‌ ರೈಸ್‌(ಬೆಲೆ ಏರಿಕೆ), ಪಕೋಡಾ’ ಎಂಬುದು ಸರಿ ಅಲ್ಲವೇ? ಎಂದು ‘ನಿಜ ಹೇಳಿ ಮೋದಿ’ ಹ್ಯಾಷ್‌ ಟ್ಯಾಗ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಮಹದಾಯಿ ವಿಷಯದಲ್ಲಿ ನೀವ್ಯಾಕೆ ಮಧ್ಯ ಪ್ರವೇಶಿಸಲಿಲ್ಲ. ಮೂರೂ ಮುಖ್ಯಮಂತ್ರಿಗಳ ಸಭೆ ಕರೆಯಲಿಲ್ಲ. ಕೆರೆ ವಿಷಯದಲ್ಲಿ ರಾಜಕೀಯ ಮಾಡುವ ಬದಲು ಅವುಗಳ ಅಭಿವೃದ್ಧಿಗೆ ನೆರವು ನೀಡಿಲ್ಲ’ ಎಂದೂ ಕೇಳಿದ್ದಾರೆ.

ಕೈ–ಕಾಲು ಕಟ್ಟಿ ಮತ ಹಾಕಿಸಿ: ಬಿಎಸ್‌ವೈ

‘ಯಾವ ಮತದಾರರು ನಮಗೆ ವೋಟ್‌ ಮಾಡುವುದಿಲ್ಲವೆಂದು ಎನಿಸುತ್ತದೆಯೋ ಅವರ ಕೈ–ಕಾಲು ಕಟ್ಟಿಯಾದರೂ ಮತ ಹಾಕಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಾರ್ಯಕರ್ತರಿಗೆ ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಸೂಚಿಸಿದರು.

* ಮಹದಾಯಿ ವಿಷಯದಲ್ಲಿ ಪ್ರಧಾನಿ, ನಮ್ಮ ಮನವಿಗೆ ಸ್ಪಂದಿಸದೆ ಕರ್ನಾಟಕಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ

* ಟಿಕೆಟ್ ಹಂಚಲು ಟೆಂಡರ್ ಕರೆದಿದ್ದ ಕಾಂಗ್ರೆಸ್‌, ಟೆಂಡರ್ ಕರೆದು ಹಣ ಮುಟ್ಟಿಸುವವರನ್ನು ಮುಖ್ಯಮಂತ್ರಿ ಮಾಡಲಿದೆ

- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.