ADVERTISEMENT

ಮಹಿಳೆ ಅನುಮಾನಾಸ್ಪದ ಸಾವು: ವಿಕೋಪಕ್ಕೆ ತಿರುಗಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 5:32 IST
Last Updated 30 ಮೇ 2018, 5:32 IST

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಂದಿಕುರಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಖಂಡಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ವಿಕೋಪಕ್ಕೆ ತಿರುಗಿತು.

ನಂದಿಕುರಳಿ ಗ್ರಾಮದಲ್ಲಿ ಅನಧಿಕೃತವಾಗಿ ಕ್ರಷರ್ ನಡೆಸುತ್ತಿರುವುದರ ವಿರುದ್ಧ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿತ್ತು. ಈ ವೇಳೆ ಮಹಿಳೆ ಸಾವಿಗೀಡಾಗಿದ್ದಾಳೆ ಎನ್ನಲಾಗುತ್ತಿದೆ.

ಘಟನೆಯಿಂದ ಆಕ್ರೋಶಗೊಂಡ ನಂದಿಕುರಳಿ ಗ್ರಾಮಸ್ಥರು ರಾಯಬಾಗ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಎರಡು ಬಸ್ ಗಳ ಗಾಜುಗಳನ್ನು, ನಿಲ್ದಾಣದ ಕಚೇರಿಯಲ್ಲಿನ ಕಂಪ್ಯೂಟರ್ ಒಡೆದು ಹಾಕಿದ್ದಾರೆ. ಕೆಲವು ವಾಹನಗಳನ್ನೂ ಜಖಂಗೊಳಿಸಲಾಗಿದೆ. ಇದರಿಂದಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಗುಂಪನ್ನು ಚದುರಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಂಗಡಿಗಳು ಬಂದ್ ಆಗಿವೆ.

ADVERTISEMENT

ಮಹಿಳೆ ಕಲ್ಲು ತೂರಾಟದ ವೇಳೆ ಮೃತಪಟ್ಟಿಲ್ಲ. ಮೆಟ್ಟಿಲಿನಿಂದ ಜಾರಿ ಬಿದ್ದು ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಹಿಳೆಯನ್ನು ಕೊಲೆ ಮಾಡಲಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.