ADVERTISEMENT

ಮಹೇಶಪ್ಪ ಪ್ರಕರಣ: ಹೈಕೋರ್ಟ್‌ಗೆ ವಿವರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಮಹೇಶಪ್ಪ ಅವರು ಎಂಜಿನಿಯರಿಂಗ್ ಪದವಿಯಲ್ಲಿ ದ್ವಿತೀಯ ದರ್ಜೆ ಪಡೆದಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರ ಪರ ವಕೀಲರು ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದರು.

`ಮೈಸೂರು ವಿಶ್ವವಿದ್ಯಾಲಯವು ಕುಲಾಧಿಪತಿಗಳಿಗೆ ಬರೆದಿರುವ ಪತ್ರದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಪ್ರಥಮ ಹಂತದಲ್ಲಿಯೇ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾದರೆ ಮಾತ್ರ  ದರ್ಜೆ ನೀಡಲಾಗುತ್ತದೆ. ಮಹೇಶಪ್ಪನವರು 9ನೇ ಸೆಮಿಸ್ಟರ್‌ನಲ್ಲಿ ಮೊದಲ ಹಂತದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ ಅವರ ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಅವರು ಪಡೆದಿರುವುದು ದ್ವಿತೀಯ ದರ್ಜೆಯೇ ಎಂಬುದನ್ನು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ~ ಎಂದು ವಕೀಲ ಉದಯ ಹೊಳ್ಳ ತಿಳಿಸಿದರು.

ಕುಲಾಧಿಪತಿಗಳಿಗೆ ನಿರ್ದೇಶನ: ಈ ಹಿನ್ನೆಲೆಯಲ್ಲಿ, `ಮಹೇಶಪ್ಪನವರು ಬಿ.ಇ. ಮುಗಿಸಿದ ಸಂದರ್ಭದಲ್ಲಿ (1983) ದರ್ಜೆ ನೀಡುವಾಗ ಯಾವ ಮಾನದಂಡ ಅನುಸರಿಸಲಾಗಿತ್ತು. ಅವರದ್ದು ಪ್ರಥಮ ದರ್ಜೆಯೋ, ದ್ವಿತೀಯ ದರ್ಜೆಯೋ ಎಂಬ ಬಗ್ಗೆ ಕುಲಾಧಿಪತಿಗಳೇ ಪರಿಶೀಲಿಸಬೇಕು. ಅವರು ಗಳಿಸಿರುವ ದರ್ಜೆಯ ಬಗ್ಗೆ ಕೋರ್ಟ್ ಯಾವುದೇ ನಿಲುವು ತಾಳಲು ಆಗದು~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿತು. ಅರ್ಜಿಯನ್ನು ಇತ್ಯರ್ಥಗೊಳಿಸಲಾಯಿತು.

ADVERTISEMENT

ಆದುದರಿಂದ ವಿಟಿಯು ಕುಲಪತಿಗಳ `ದರ್ಜೆ~ಗೆ ಸಂಬಂಧಿಸಿದ ವಿವಾದ ಈಗ ರಾಜ್ಯಪಾಲರ ಅಂಗಳಕ್ಕೆ ಬಂದಿದೆ. ವಿದ್ಯಾರ್ಹತೆ ಹಾಗೂ ಅನುಭವಕ್ಕೆ ಸಂಬಂಧಿಸಿದಂತೆ ಇವರು ನಕಲಿ ದಾಖಲೆ ನೀಡಿ ಕುಲಪತಿಯಾಗಿ ನೇಮಕಗೊಂಡಿದ್ದಾರೆ ಎಂದು ದೂರಿ ಜೆ.ಎಚ್.ಅನಿಲ್‌ಕುಮಾರ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಕಳೆದ ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದ ಸಂದರ್ಭದಲ್ಲಿ `ಬಿ.ಇ.ಯಲ್ಲಿ ತಾವು ಪಡೆದಿರುವುದು ದ್ವಿತೀಯ ದರ್ಜೆಯೇ~ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದ ಮಹೇಶಪ್ಪನವರು, ಇನ್ನೊಂದು ವಿಚಾರಣೆ ವೇಳೆ, ತಾವು ಪಡೆದಿದ್ದು ಪ್ರಥಮ ದರ್ಜೆ ಎಂದು ತಿಳಿಸಿದ್ದರು.

ಮಾರ್ಗಸೂಚಿಗೆ ಮನವಿ: ನೋಟಿಸ್

ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಂಬಂಧ ಕೆಲವೊಂದು ಮಾರ್ಗಸೂಚಿಯನ್ನು ರೂಪಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೆ ಆದೇಶಿಸಿದೆ.

ಪ್ರಣಾಳಿಕೆಯಲ್ಲಿರುವ ಹೆಚ್ಚಿನ ಅಂಶಗಳನ್ನು ರಾಜಕಾರಣಿಗಳು ಪಾಲಿಸುವುದಿಲ್ಲ. ಮನಸೋ ಇಚ್ಛೆ ನಡೆದುಕೊಳ್ಳುತ್ತಾರೆ. ಅದರಲ್ಲಿನ ಅಂಶಗಳನ್ನು ಅವರು ಚಾಚೂತಪ್ಪದೆ ಪಾಲಿಸಬೇಕಾದ ಅಗತ್ಯ ಇದೆ ಎನ್ನುವುದು ಅರ್ಜಿದಾರರಾದ ವೀರೇಂದ್ರ ಪಾಟೀಲ್ ಅವರ ವಾದ. ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.