ADVERTISEMENT

ಮಾತುಕತೆಗೆ ಪುತ್ತಿಗೆ ಶ್ರೀ ಆಹ್ವಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:35 IST
Last Updated 14 ಜನವರಿ 2012, 19:35 IST

ಉಡುಪಿ: `ವಾದಿರಾಜರ ಸಂಪ್ರದಾಯದಂತೆ ಸೋದೆ ಮಠದವರು ಮಧ್ವ ಮಠಗಳ ಸಂಪ್ರದಾಯ ಪಾಲಿಸಬೇಕು. ಭಾವಿ ಪರ್ಯಾಯ ಪೀಠಾಧೀಶ ಸೋದೆ ವಿಶ್ವವಲ್ಲಭ ತೀರ್ಥರು ನಮ್ಮ ಮಠದ ಬಗೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಭಾನುವಾರ ಸಂಜೆ 6 ಗಂಟೆಯೊಳಗೆ ಪುತ್ತಿಗೆ ಮಠಕ್ಕೆ ಭೇಟಿ ನೀಡಿ ಪಟ್ಟದ ದೇವರ ದರ್ಶನ ಮಾಡಿ ಆತಿಥ್ಯ ಸ್ವೀಕರಿಸಬೇಕು~ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಇಲ್ಲಿ ಹೇಳಿದರು.

ನಗರದಲ್ಲಿ ಇದೇ 18ರಂದು ನಡೆಯುವ ಸೋದೆ ಮಠದ ಪರ್ಯಾಯ ಮಹೋತ್ಸವ ಆಮಂತ್ರಣವನ್ನು ಈವರೆಗೂ ಪುತ್ತಿಗೆ ಮಠಕ್ಕೆ ನೀಡಿಲ್ಲ. ಅಲ್ಲದೆ ಪರ್ಯಾಯ ಮಹೋತ್ಸವ ಮೆರವಣಿಗೆ ಹಾಗೂ ದರ್ಬಾರಿನ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರಿಲ್ಲ. ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು ಈ ಬೆಳವಣಿಗೆಯಿಂದ ಆಗಿರುವ ಅವಮಾನದ ನೋವನ್ನು ತೋಡಿಕೊಂಡರು.

`ಯಾವುದೇ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅಷ್ಟ ಮಠಗಳ ಯತಿಗಳ ಹೆಸರು ಹಾಕಲಾಗುತ್ತದೆ.ಆದರೆ ಈ ಬಾರಿ ನಮ್ಮ ಹೆಸರು ಕೈಬಿಟ್ಟಿದ್ದು ಮಾತ್ರವಲ್ಲದೆ ಈವರೆಗೂ ಆಮಂತ್ರಣ ನೀಡಿಲ್ಲ~ ಎಂದರು.

`ವಯಸ್ಸಿನಲ್ಲಿ ತಮಗಿಂತ ಬಹಳ ಕಿರಿಯರಾಗಿದ್ದು ಮೊದಲ ಬಾರಿಗೆ ಪರ್ಯಾಯ ಪೀಠವೇರುತ್ತಿರುವ ಸೋದೆ ಶ್ರೀಗಳು ಯಾರದೋ ಕುಮ್ಮಕ್ಕಿನಿಂದ ಹೀಗೆ ಮಾಡುತ್ತಿದ್ದಾರೆ. ಇದು ಅಷ್ಟ ಮಠಗಳ ಏಕತೆಗೆ ಶೋಭೆ ತರುವಂಥದ್ದಲ್ಲ. ಇದರಿಂದ  ಮಠಗಳ ನಡುವಿನ ಸಂಬಂಧ ಶಿಥಿಲವಾಗುತ್ತದೆ~ ಎಂದು ಅವರು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.