ADVERTISEMENT

ಮಾರಕಾಸ್ತ್ರಗಳಿಂದ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ಎರಡು ಗುಂಪಿನ ನಡುವೆ ವಾಗ್ವಾದ

ಬೆಂಗಳೂರು: ಯುವಕರ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕೋರಮಂಗಲದಲ್ಲಿ ಸೋಮವಾರ ರಾತ್ರಿ ನಡೆದಿದೆ.

ರಾಜೇಂದ್ರನಗರ ಕೊಳೆಗೇರಿ ನಿವಾಸಿ  ಪುರುಷೋತ್ತಮ್ (24) ಕೊಲೆಯಾದವನು. ಆತ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೋರಮಂಗಲ ಎಂಟನೇ ಹಂತದಲ್ಲಿ ಭಾನುವಾರ ರಾತ್ರಿ ಅಣ್ಣಮ್ಮ ದೇವಿ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಪುರುಷೋತ್ತಮ್, ಆತನ ಸ್ನೇಹಿತರು ಹಾಗೂ ಸ್ಥಳೀಯ ಯುವಕರ ನಡುವೆ ವಾಗ್ವಾದ ನಡೆದು ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಸ್ಥಳೀಯ ಯುವಕರು, ಪುರುಷೋತ್ತಮ್ ಮತ್ತು ಸ್ನೇಹಿತರು ರಾತ್ರಿ ಕೋರಮಂಗಲಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಅಸ್ವಸ್ಥಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪುರುಷೋತ್ತಮ್‌ನ ಸ್ನೇಹಿತ ಶರತ್‌ಕುಮಾರ್ ಎಂಬಾತನ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಇದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.