ADVERTISEMENT

ಮಾವು: ಈ ಬಾರಿಯೂ ತಡ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST
ಮಾವು: ಈ ಬಾರಿಯೂ ತಡ!
ಮಾವು: ಈ ಬಾರಿಯೂ ತಡ!   

ಕೋಲಾರ: ರಾಜ್ಯದಲ್ಲೆ ಅತ್ಯಂತ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಲ್ಲಿ ಈ ಬಾರಿಯೂ ಫಸಲು ತಡವಾಗಿ ಬರಲಿದೆ. ಆದರೆ ಬೆಳೆಗಾರರಿಗೆ ಮಾತ್ರ ‘ತಡವಾದರೇನಂತೆ ನಷ್ಟವಿಲ್ಲ’ ಎಂಬ ಕವಿವಾಣಿ ಅನ್ವಯವಾಗಲಿದೆ. ‘ಹಣ್ಣುಗಳ ರಾಜ’ ಮಾವಿನ ಸವಿಯನ್ನು ನೋಡಲು ಕಾದವರು ಮಾತ್ರ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

ಈ ಬಾರಿಯೂ ಮಾವಿನ ಮರಗಳಲ್ಲಿ ಹೂವುಗಳು ತಡವಾಗಿ ಅರಳುತ್ತಿವೆ. ವಾಡಿಕೆಯಂತೆ ಡಿಸೆಂಬರ್ ಮೂರನೇ ವಾರದಲ್ಲಿ ಅಥವಾ ಜನವರಿ ಮೊದಲ-ಎರಡನೇ ವಾರದಲ್ಲಿ ಹೂವುಗಳು ಪೂರ್ಣವಾಗಿ ಅರಳಬೇಕಾಗಿತ್ತು. ಆದರೆ ಈಗ ಒಂದು ತಿಂಗಳು ತಡವಾಗಿದೆ. ಪ್ರತಿ ಬಾರಿ ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದ ಹೊತ್ತಿಗೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ಮೇ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಇಳುವರಿ ಹೆಚ್ಚು:  ತಡವಾದರೂ ರೈತರಿಗೆ ನಷ್ಟವೇನಿಲ್ಲ. ಈ ಬಾರಿ ಮಾವಿನ ಇಳುವರಿ ಹೆಚ್ಚಾಗಲಿದೆ. ಒಂದು ವರ್ಷ ಪೂರ್ಣ ಮತ್ತು ಮತ್ತೊಂದು ವರ್ಷ ಅರ್ಧ ಇಳುವರಿ ನೀಡುವುದು ಮಾವಿನ ಪ್ರವೃತ್ತಿ. ‘ಕಳೆದ ಬಾರಿ ಅರ್ಧ ಇಳುವರಿ ದೊರೆತಿತ್ತು. ಈಗಿನದು ಪೂರ್ಣ ಇಳುವರಿಯ ವರ್ಷ. ಪ್ರಕೃತಿಯ ವಿಕೋಪಗಳಿಗೆ ಸಿಲುಕಿದರೂ ಈ ಬಾರಿ ಶೇ.85ರಷ್ಟು ಮಾವು ರೈತರ ಕೈಗೆಟುಕುವ ಭರವಸೆಯಂತೂ ಇದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸೋಮ ವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರದೇಶ ಹೆಚ್ಚಳ: ಈ ಬಾರಿ ಮಾವು ಬೆಳೆಯುವ ಪ್ರದೇಶದ ವಿಸ್ತೀರ್ಣವೂ ಜಿಲ್ಲೆಯಲ್ಲಿ ಹೆಚ್ಚಾಗಿರುವುದು ವಿಶೇಷ. ಕಳೆದ ವರ್ಷ 40,769 ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯ ಲಾಗಿತ್ತು. ಈ ಬಾರಿ ಅದು 43,177 ಹೆಕ್ಟೇರ್ ಅಂದರೆ, 2,408 ಹೆಕ್ಟೇರ್‌ನಷ್ಟು ಹೆಚ್ಚಾಗಿದೆ.

ರಾಜ್ಯದಲ್ಲಿ ಬೆಳೆಯಲಾಗುವ ಮಾವಿನ ಪ್ರಮಾಣದಲ್ಲಿ (1,17,381 ಹೆಕ್ಟೇರ್) ಶೇ.47ಕ್ಕೂ ಹೆಚ್ಚು ಪ್ರದೇಶ ಈ ಜಿಲ್ಲೆಯಲ್ಲಿಯೇ ಇದೆ. ಮಾವಿನ ತವರೂರು ಎಂದೇ ಪ್ರಸಿದ್ಧವಾಗಿರುವ ಜಿಲ್ಲೆಯ ಶ್ರೀನಿವಾಸಪುರದ 22,325 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾ ಗುತ್ತಿದೆ. ಮುಳಬಾಗಲಿನ 11,670 ಹೆಕ್ಟೇರ್, ಬಂಗಾರಪೇಟೆಯ 3,461 ಹೆ, ಕೋಲಾರದ 4,294 ಹೆ, ಮತ್ತು ಮಾಲೂರಿನ 1,427 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾ ಗುತ್ತಿದೆ. ಪೂರ್ಣಾವಧಿ ಇಳುವರಿಯ ವರ್ಷವಾದ 2009ರಲ್ಲಿ 4,64,115 ಟನ್ ಮಾವು ಬೆಳೆಯಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ಫಸಲು ಬರುವ ನಿರೀಕ್ಷೆ ಇದೆ.

‘ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಒಣ ವಾತಾವರಣವಿತ್ತು. ಡಿಸೆಂಬರ್‌ನಲ್ಲಿ ಮಳೆಯೂ ಇತ್ತು. ಹೀಗಾಗಿ ಹೂ ಬಿಡುವ ಪ್ರಕ್ರಿಯೆ ತಡವಾಗಿದೆ. ಈಗ ವಾತಾವರಣದಲ್ಲಿ ತೇವಾಂಶವಿಲ್ಲ. ಇಳುವರಿಯ ಪ್ರಮಾಣ ಹೂವುಗಳು ಮರಕ್ಕಂಟಿ ನಿಲ್ಲುವ ಪ್ರಮಾಣವನ್ನು ಆಧರಿಸಿದೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಹದ ಮಳೆ ಬಿದ್ದರೆ ಕಾಯಿಗಳು ದಪ್ಪವಾಗುತ್ತವೆ. 2009ರಲ್ಲಿ ಬಿದ್ದಂಥ ಆಲಿಕಲ್ಲು ಮಳೆ ಬಿದ್ದರೆ ಏನನ್ನೂ ಅಂದಾಜಿಸಲಾಗು ವುದಿಲ್ಲ’ ಎಂಬುದು ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಾರೆಡ್ಡಿ ಯವರ ಅಭಿಪ್ರಾಯ.

‘ಹೂ ಬಿಡುವ ಕಾಲದಲ್ಲೆ ರೈತರು ಎಚ್ಚರಿಕೆ ವಹಿಸಬೇಕು. ಜಿಗಿ ಹುಳು, ಬೂದಿ ರೋಗದಿಂದ ಹೂವನ್ನು ಸಂರಕ್ಷಿಸಬೇಕು. ಯಾವುದೇ ಒಂದು ಸೋಂಕಿ ತಗುಲಿದರೂ ವಾರದೊಳಗೆ ಹೂವು ಉದುರುತ್ತದೆ. ಸದ್ಯಕ್ಕೆ ಅಂಥ ಸಮಸ್ಯೆ ಕಂಡು ಬಂದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.