ADVERTISEMENT

ಮಾಸಾಶನ ನಿರೀಕ್ಷೆಯಲ್ಲಿ ಮಾಜಿ ದೇವದಾಸಿಯರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ದಾವಣಗೆರೆ: ರಾಜ್ಯದ 14 ಜಿಲ್ಲೆಗಳಲ್ಲಿರುವ ಅಂದಾಜು 18 ಸಾವಿರ ಮಾಜಿ ದೇವದಾಸಿಯರಿಗೆ ಸರ್ಕಾರ 6 ತಿಂಗಳಿನಿಂದ ಮಾಸಾಶನ ಸ್ಥಗಿತಗೊಳಿಸಿದೆ.

ಏಪ್ರಿಲ್ 2012ರಿಂದ ಮಾಸಾಶನ ಬಿಡುಗಡೆಯಾಗದ ಕಾರಣ 18ಸಾವಿರ ಮಾಜಿ ದೇವದಾಸಿಯರ ಜೀವನ ಸಂಕಷ್ಟಕ್ಕೀಡಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ  ಪ್ರತಿ ತಿಂಗಳು ನೀಡುವ ರೂ 400ನ್ನೇ ನಂಬಿ ಜೀವನ ಸಾಗಿಸುತ್ತಿದ್ದ 45ವರ್ಷಕ್ಕಿಂತ ಹೆಚ್ಚು ವಯೋಮಾನದ 18 ಸಾವಿರ  ಮಾಜಿ ದೇವದಾಸಿಯರು ಪ್ರತಿನಿತ್ಯ ಸರ್ಕಾರಿ ಕಚೇರಿ ಅಲೆಯುತ್ತಾ ಮಾಸಾಶನದ ನಿರೀಕ್ಷೆಯಲ್ಲಿ ದಿನ ನೂಕುತ್ತಿದ್ದಾರೆ.

ರಾಜ್ಯದ ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ, ಧಾರವಾಡ, ಹಾವೇರಿ, ಗದಗ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಗಳ ಮಾಜಿ ದೇವದಾಸಿಯರಿಗೆ ಸರ್ಕಾರ ಮಾಸಾಶನ ನೀಡುತ್ತಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ ನೀಡುವಾಗ ಸರ್ಕಾರ ನೀಡುವ ಆದೇಶ ಪತ್ರವನ್ನು ದೇವದಾಸಿಯರು ಪಡೆಯುವ ಮಾಸಾಶನಕ್ಕೆ ನೀಡುತ್ತಿಲ್ಲ. ಇದೂ ಕೂಡಾ ಮಾಸಾಶನಕ್ಕೆ ಅಡ್ಡಿಯುಂಟಾಗುತ್ತದೆ ಎನ್ನಲಾಗುತ್ತಿದೆ.

`ದೇವದಾಸಿ ಪುನರ್ವಸತಿ ಯೋಜನೆ ಅಡಿ ಸರ್ಕಾರ ಮಾಜಿ ದೇವದಾಸಿಯರಿಗೆ ಮಾಸಾಶನ ವಿತರಿಸುತ್ತಿದೆ. ಫಲಾನುಭವಿಗಳಿಗೆ ನೇರವಾಗಿ ಮಾಸಾಶನ ದೊರೆಯಲು ಸಮರ್ಪಕ ವ್ಯವಸ್ಥೆ ಇಲ್ಲ. 6 ತಿಂಗಳಿಂದ ಮಾಸಾಶನ ಬಿಡುಗಡೆಯಾಗಿಲ್ಲ. ಈ ಕುರಿತು ದೇವದಾಸಿ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿಗಳಲ್ಲಿ ವಿಚಾರಿಸಿದರೆ, ಹಾರಿಕೆಯ ಉತ್ತರ ಇಲ್ಲವೇ ಗೊಂದಲಮಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ~ ಎನ್ನುತ್ತಾರೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ.

ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳ ಮಾಸಾಶನ ಬಿಡುಗಡೆಯಾಗಿದೆ. ಉಳಿದ 4 ತಿಂಗಳ ಮಾಸಾಶನ ಬಿಡುಗಡೆಯಾಗಬೇಕಿದೆ. ನಿಗಮದಿಂದ ಜಿಲ್ಲಾ ಖಜಾನೆಗೆ ಹಣ ಬಿಡುಗಡೆಯಾಗುತ್ತದೆ. ಆಯಾ ಜಿಲ್ಲೆಯ ಸಿಡಿಪಿಒಗಳು ಬಿಲ್ ಮಾಡಿ, ಹಣ ಡ್ರಾ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ. ಇದಕ್ಕೆ ಹೆಚ್ಚು ಸಮಯ ತಗಲುತ್ತದೆ. ಹಾಗಾಗಿ, ಜಿಲ್ಲಾ ಖಜಾನೆಯಿಂದಲೇ ನೇರವಾಗಿ ಫಲಾನುಭವಿಗಳ ಖಾತೆಗೆ ಮಾಸಾಶನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ದಾವಣಗೆರೆ ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಮೋಕ್ಷಪತಿ.

`ಸರ್ಕಾರ ಈಚೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಸೂಚಿಸಿದೆ. ಆದರೆ, ಅನಕ್ಷರಸ್ಥರಾದ ನಮಗೆ ಬ್ಯಾಂಕಿನ ವಹಿವಾಟು ಅರ್ಥವಾಗದು. ಬ್ಯಾಂಕಿನಲ್ಲಿ ಖಾತೆ ತೆರೆಯಲು ಮನವಿ ಕೊಟ್ಟರೆ, ಅಲ್ಲಿನ ಅಧಿಕಾರಿಗಳು ಕನಿಷ್ಠ ರೂ 1ಸಾವಿರ ಜಮಾ ಮಾಡಬೇಕು ಎನ್ನುತ್ತಾರೆ. ಸರ್ಕಾರದ ರೂ 400ಅನ್ನೇ ನಂಬಿರುವ ನಮ್ಮಂಥವರಿಗೆ ಈ ಠೇವಣಿ ಹಣ ಕಟ್ಟುವುದು ಕಷ್ಟ~ ಎನ್ನುತ್ತಾರೆ ಶಾಮನೂರಿನ ಗಂಗಮ್ಮ. ಮಾಸಾಶನವಿಲ್ಲದೆ ವೃದ್ಧ ದೇವದಾಸಿಯರು ಊಟ, ಔಷಧಿಗೂ ಪರದಾಡುವಂತಾಗಿದೆ.

ಸಾಮಾಜಿಕವಾಗಿ ಬಹಿಷ್ಕೃತರಾಗಿರುವ ಇವರು, ವಯಸ್ಸಾದಾಗ ಮಕ್ಕಳಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಾರೆ. ಇಂಥ ಸ್ಥಿತಿಯಲ್ಲಿ ಮಾಸಾಶನವನ್ನೇ ನಂಬಿ ದಿನದೂಡುತ್ತಿರುವವರಿಗೆ ಬದುಕು ದುರ್ಬರವಾಗಿದೆ ಎನ್ನುತ್ತಾರೆ  ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ. 
 
ಖಾಸಗೀಕರಣದ ಹುನ್ನಾರ?
ದೇವದಾಸಿ ಪುನರ್ವಸತಿ ಯೋಜನೆಯನ್ನು ಸರ್ಕಾರ ಖಾಸಗಿಯವರಿಗೆ ನೀಡಲು ಚಿಂತನೆ ನಡೆಸುತ್ತಿದೆ. ಈ ಹಿಂದೆ ಸರ್ಕಾರ ಬೀದರ್‌ನಲ್ಲಿ ಖಾಸಗಿ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ಇದೇ ರೀತಿ ಯೋಜನೆ ನೀಡಿತ್ತು. ಆಗ ಆ ಸಂಸ್ಥೆ ಬೀದರ್ ಬಿಟ್ಟರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ದೇವದಾಸಿಯರೇ ಇಲ್ಲ ಎಂದು ಸುಳ್ಳು ಸಮೀಕ್ಷಾ ವರದಿ ನೀಡಿತ್ತು. ಹಾಗಾಗಿ, ಈ ಯೋಜನೆಯನ್ನು ಖಾಸಗೀಕರಣ ಮಾಡಬಾರದು ಎನ್ನು ತ್ತಾರೆ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಉಪಾಧ್ಯಕ್ಷೆ ಟಿ. ಪದ್ಮಾವತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT