ADVERTISEMENT

ಮುಖ್ಯಮಂತ್ರಿ ಮಾತಿಗೂ ದೊರೆಯದ ಫಲ: ಆಯುಕ್ತರಿಲ್ಲದ ಗುಲ್ಬರ್ಗ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಗುಲ್ಬರ್ಗ:  ಗುಲ್ಬರ್ಗ ಮಹಾನಗರ ಪಾಲಿಕೆಗೆ ನೂತನ ಆಯುಕ್ತರನ್ನು ನೇಮಿಸಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸದಾನಂದ ಗೌಡ ಅವರು ಸೆಪ್ಟೆಂಬರ್‌ನಲ್ಲಿ ಇಲ್ಲಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಎದುರು ಪ್ರಕಟಿಸಿ ತಿಂಗಳಾದರೂ ಪಾಲಿಕೆಯಲ್ಲಿ ಆಯುಕ್ತರಿಲ್ಲ. ಪರಿಣಾಮ ನಗರದಲ್ಲಿ ಮೂಲ ಸೌಕರ್ಯದ ಕಾಮಗಾರಿಗಳು ಅರ್ಧದಲ್ಲೆ ಉಳಿದುಕೊಂಡಿವೆ.

ನಗರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ, ಚರಂಡಿ ನಿರ್ಮಾಣ ಕಾಮಗಾರಿ, ರೂ. 100 ಕೋಟಿ ವಿಶೇಷ ಅನುದಾನದ ಕಾಮಗಾರಿಗಳು ಪ್ರಮುಖವಾಗಿ ನೆನೆಗುದಿಗೆ ಬಿದ್ದಿವೆ.

ಈ ಕುರಿತು ಪಾಲಿಕೆ ಆಯುಕ್ತರು ಕ್ರಮ ಜರುಗಿಸಬೇಕಾಗಿರುವುದರಿಂದ ಗುಲ್ಬರ್ಗ ನಗರದಾದ್ಯಂತ ಮೂಲ ಸೌಕರ್ಯಗಳಿಗೆ ಪರದಾಡಬೇಕಾಗಿದೆ. ಪಾಲಿಕೆ ಎದುರು ಸಮಸ್ಯೆಗಳನ್ನು ಹೇಳಿಕೊಳ್ಳದ ಅಸಹಾಯಕ ಸ್ಥಿತಿಯನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರಿಗೆ `ಕಮಿಷನರ್ ಇಲ್ಲ ನಾವೇನು ಮಾಡುವುದು~ ಎಂದು ಪಾಲಿಕೆ ಸಿಬ್ಬಂದಿ ಉತ್ತರ ಹೇಳುತ್ತಿದ್ದಾರೆ.

ADVERTISEMENT

ಮುನ್ಸಿಪಲ್ ಕಾಯ್ದೆ ಪ್ರಕಾರ ಜಿ-4 ನಿಯಮದಡಿಯಲ್ಲಿ ಪಾಲಿಕೆಯಲ್ಲಿ ಶೇ.70ರಷ್ಟು ಸಿಬ್ಬಂದಿ ಕೊರತೆ ಇದೆ. ಸದ್ಯ ಪಾಲಿಕೆಯಲ್ಲಿ ಆಯುಕ್ತರಿಲ್ಲ, ಆರೋಗ್ಯಾಧಿಕಾರಿ ಇಲ್ಲ, ಮುಖ್ಯ ಲೆಕ್ಕಾಧಿಕಾರಿ ಇಲ್ಲ, ಕಿರಿಯ ಎಂಜಿನಿಯರ್‌ಗಳಿಲ್ಲ, ಉಪ ಆಯುಕ್ತರ ಹುದ್ದೆ ಖಾಲಿ ಉಳಿದು ದಶಕಗಳು ಉರುಳಿವೆ.

ಶುದ್ಧ ಕುಡಿಯುವ ನೀರು ಇಲ್ಲದೆ ನಗರದಲ್ಲಿ ಮಲೇರಿಯಾ, ಡೆಂಗೆ ಹರಡಿಕೊಳ್ಳುತ್ತಿವೆ. ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಆರೋಗ್ಯಾಧಿಕಾರಿ ಹುದ್ದೆಯೂ ಖಾಲಿ ಇದೆ.

ಇವಲ್ಲದೆ ಸ್ಯಾನಿಟರಿ ಇನ್‌ಸ್ಪೆಕ್ಟರ್, ಡಿ ದರ್ಜೆ ನೌಕರರ ದೊಡ್ಡ ಪ್ರಮಾಣದ ಕೊರತೆಯನ್ನು ಪಾಲಿಕೆ ಎದುರಿಸುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ನಗರ ಬೆಳೆದಿದೆ. ಪಾಲಿಕೆಯ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುಲ್ಬರ್ಗಕ್ಕೆ ವರ್ಗಾವಣೆ ಮಾಡಿ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಸಂಘ-ಸಂಸ್ಥೆಗಳು ದಿನನಿತ್ಯ ಪ್ರತಿಭಟನೆ, ಧರಣಿ ನಡೆಸುತ್ತಿವೆ.

ಸರ್ಕಾರವು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಒದಗಿಸುತ್ತಿರುವ ಅನುದಾನವನ್ನು ಬಳಸಿಕೊಳ್ಳಲು ಸಿಬ್ಬಂದಿ ಕೊರತೆಯಿಂದ ಅಡ್ಡಿಯಾಗಿದೆ. ಜಿಲ್ಲೆಗೆ ದಕ್ಷ ಅಧಿಕಾರಿಗಳನ್ನು ನೇಮಕಗೊಳಿಸುವ ಬಗ್ಗೆ ಸರ್ಕಾರ ಗಮನಿಸುತ್ತಿಲ್ಲ. ಪಾಲಿಕೆಯು ನಿಷ್ಕ್ರಿಯವಾಗಿರುವುದರಿಂದ ನಗರದಲ್ಲಿ ಮೂಲ ಸೌಕರ್ಯಗಳಿಲ್ಲದೆ ಸ್ಥಳೀಯರು ರೋಸಿ           ಹೋಗಿದ್ದಾರೆ.

ಸಹನೆ ಕಳೆದುಕೊಂಡಿರುವ ವಿವಿಧ ಸಂಘ-ಸಂಸ್ಥೆಗಳು ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಇದೇ `19ರಂದು ಗುಲ್ಬರ್ಗ ಬಂದ್~ಗೆ ಕರೆ ನೀಡಿವೆ. ಪಾಲಿಕೆ ಸದಸ್ಯರೇ ಪಾಲಿಕೆ ಕಚೇರಿಗೆ ಬೀಗ ಹಾಕಿ ಆಯುಕ್ತರ ನೇಮಕಕ್ಕೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಸುಸ್ತಾದ ಉಸ್ತುವಾರಿ ಸಚಿವರು: ಜಿಲ್ಲೆಗೆ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿ ಸಚಿವರಾದ ನಂತರದಲ್ಲೂ ಪಾಲಿಕೆ ಆಡಳಿತದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಜಿಲ್ಲೆಗೆ ಭೇಟಿ ನೀಡಿದ ಪ್ರತಿಯೊಂದು ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ತಾಕೀತು ಮಾಡಿ ಸಚಿವರು ಸುಸ್ತು ಹೊಡೆದರೂ ವ್ಯವಸ್ಥೆ ಮಾತ್ರ ಬದಲಾಗುತ್ತಿಲ್ಲ ಎಂದು ಸಮಾಜಪರ ಸಂಘಟನೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಾಲಿಕೆಯ ಸಿಬ್ಬಂದಿ 10 ಗಂಟೆಗೂ ಮೀರಿ ಕೆಲಸ ಮಾಡುತ್ತಿದ್ದರೂ ಜನರಿಂದ ಬರುವ ದೂರುಗಳು ಕಡಿಮೆಯಾಗುತ್ತಿಲ್ಲ. ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ನಗರದಲ್ಲಿ ವಿವಿಧ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎನ್ನುವುದು ಈಗಿರುವ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. `ನಾವೇನು ಮಾಡುವುದು; ಸರ್ಕಾರ ಹೊಸ ಸಿಬ್ಬಂದಿ ನೇಮಿಸುತ್ತಿಲ್ಲ~ ಎನ್ನುವ ಮಾತು ಪಾಲಿಕೆಯಲ್ಲಿ  ಸಾಮಾನ್ಯವಾಗಿದೆ.

ನೂತನ ಆಯುಕ್ತ ಎಲ್ಲಿ?: ಮಂಗಳೂರಿನಲ್ಲಿ ಸಹಾಯಕ ಕಮಿಷನರ್ ಆಗಿದ್ದ ಪ್ರಭುಲಿಂಗ ಕಾವಳಕಟ್ಟೆ ಅವರನ್ನು ಗುಲ್ಬರ್ಗ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ ಎಂದು ಸೆ. 17ರಂದು ಮುಖ್ಯಮಂತ್ರಿ ಹೇಳಿದ್ದರು. ಈ ಕುರಿತು ವರ್ಗಾವಣೆ ಆದೇಶವೂ ಹೊರಬಿದ್ದಿತ್ತು. ಆದರೆ ಹೊಸ ಆಯುಕ್ತರು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.