ADVERTISEMENT

ಮೂರು ಕಡೆ ಭೂಕುಸಿತ: ರೈಲು ಸಂಚಾರಕ್ಕೆ ವ್ಯತ್ಯಯ

ಮಲೆನಾಡು, ಕರಾವಳಿ ಭಾಗದಲ್ಲಿ ಮುಂದುವರಿದ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 20:05 IST
Last Updated 11 ಜೂನ್ 2018, 20:05 IST
ಸಕಲೇಶಪುರಲ್ಲಿ ಸೋಮವಾರ ಸುರಿದ ವರ್ಷಧಾರೆಗೆ ಪಟ್ಟಣದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಳೆಯಂತೆ ನಿಂತ ನೀರಿನಲ್ಲಿ ಕಾರುಗಳು ಮುಳುಗಿರುವುದು
ಸಕಲೇಶಪುರಲ್ಲಿ ಸೋಮವಾರ ಸುರಿದ ವರ್ಷಧಾರೆಗೆ ಪಟ್ಟಣದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಳೆಯಂತೆ ನಿಂತ ನೀರಿನಲ್ಲಿ ಕಾರುಗಳು ಮುಳುಗಿರುವುದು   

ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವರ್ಷಧಾರೆ ಮುಂದುವರಿದಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆ ಕೆಳ ಸೇತುವೆಗಳು ಮುಳುಗಡೆಯಾಗಿವೆ.

ಮಳೆಯಿಂದಾಗಿ ಹಾಸನ ಜಿಲ್ಲೆಯ ಕಡಗರವಳ್ಳಿ ಹಾಗೂ ಯಡಕುಮೇರಿ ರೈಲು ನಿಲ್ದಾಣಗಳ ಮಧ್ಯೆ ಮೂರು ಕಡೆ ಭೂ ಕುಸಿತ ಉಂಟಾಗಿದ್ದು, ಮಂಗಳೂರು–ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ವ್ಯತ್ಯಯವಾಗಿದೆ.

ಸೋಮವಾರ ಯಶವಂತಪುರದಿಂದ ಬರಬೇಕಿದ್ದ ಯಶವಂತಪುರ–ಮಂಗಳೂರು ಜಂಕ್ಷನ್–ಕಾರವಾರ (ರೈ.ಸಂ. 16515) ರೈಲು ಹಾಸನದವರೆಗೆ ಮಾತ್ರ ಸಂಚರಿಸಿದೆ. ಸೋಮವಾರ ಹಾಸನ ಮಾರ್ಗವಾಗಿ ತೆರಳಬೇಕಿದ್ದ ಮಂಗಳೂರು ಜಂಕ್ಷನ್–ಯಶವಂತಪುರ (ರೈ.ಸಂ. 16576) ರೈಲು ಕಣ್ಣೂರು, ಶೋರನೂರು, ಪಾಲ್ಘಾಟ್ ಜಂಕ್ಷನ್, ಕೊಯಮತ್ತೂರು, ಈರೋಡ್, ಜೋಲಾರಪೇಟ್‌ ಮೂಲಕ ಯಶವಂತಪುರಕ್ಕೆ ತೆರಳಿದೆ.

ADVERTISEMENT

‘ಕುಸಿದಿರುವ ಮಣ್ಣು ತೆಗೆಯುವ ಕಾರ್ಯ ಆರಂಭಿಸಲಾಗಿದೆ. ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಮಣ್ಣು ತೆರವಿಗೆ ಅಡ್ಡಿಯಾಗುತ್ತಿದೆ’ ಎಂದು ಸ್ಟೇಷನ್‌ ಮಾಸ್ಟರ್‌ ಇ.ವಿಜಯಕುಮಾರ್‌ ತಿಳಿಸಿದರು.

ಆಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಹೇಮಾವತಿ ಜಲಾಶಯದ ಒಳಹರಿವಿನ ಪ್ರಮಾಣ 9 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದೆ.

ಕಡಬ ತಾಲ್ಲೂಕಿನ ಹೊಸ್ಮಠ ಸೇತುವೆ ಮುಳುಗಡೆಯಾಗಿದ್ದು, ಉಪ್ಪಿನಂಗಡಿ–ಸುಬ್ರಹ್ಮಣ್ಯ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿ ಸರಾಸರಿ 52 ಮಿ.ಮೀ. ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಸರಾಸರಿ 48 ಮಿ.ಮೀ. ಮಳೆ ಸುರಿದಿದೆ. ಕಾಫಿನಾಡಿನ ಮಳೆಗಾಲದ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜಿಲ್ಲೆಗೆ ಹರಿದು ಬರುತ್ತಿದೆ. ಸಿರಿಮನೆ, ಕಲ್ಲತ್ತಿಗಿರಿ, ಹೆಬ್ಬೆ ಮೊದಲಾದ ಜಲಪಾತಗಳು, ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.

ಕೂಟುಹೊಳೆ ಭರ್ತಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆಯ ಬಳಿಕ ಮತ್ತೆ ಬಿರುಸುಗೊಂಡಿದೆ. ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿತ್ತು.

ಪ್ರವಾಸಿಗರಿಗೆ ತಲಕಾವೇರಿ ಕ್ಷೇತ್ರಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಬ್ರಹ್ಮಗಿರಿಯಲ್ಲಿ ಮಳೆ ಹಾಗೂ ಗಾಳಿ ಅಬ್ಬರವಿದ್ದು, ತಲಕಾವೇರಿಗೆ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕೋರಿದೆ. ಮಡಿಕೇರಿಗೆ ಕುಡಿಯುವ ನೀರು ಪೂರೈಸುವ ಕೂಟುಹೊಳೆ ಭರ್ತಿಯಾಗಿದೆ.

ಅಪ್ಪಂಗಳ, ಕತ್ತಲೆಕಾಡು, ಅಯ್ಯಂಗೇರಿ ವ್ಯಾಪ್ತಿಯಲ್ಲಿ ವಿದ್ಯುತ್‌ ಕಂಬಗಳು ಬಿದ್ದಿರುವ ಪರಿಣಾಮ ಕಳೆದ ಮೂರು ದಿನಗಳಿಂದ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, 2,806.07 ಅಡಿ ನೀರು ಸಂಗ್ರಹವಾಗಿದೆ. ಒಂದೇ ದಿನ 6 ಅಡಿಯಷ್ಟು ನೀರು ಹರಿದು ಬಂದಿದೆ.

ಧಾರಾಕಾರ ಮಳೆ: ತೀರ್ಥಹಳ್ಳಿ, ಆಗುಂಬೆಯಲ್ಲಿ ಸೋಮವಾರ ಧಾರಾಕರ ಮಳೆಯಾಗಿದೆ. ಮಳೆ ಹಾಗೂ ಗಾಳಿಯಿಂದ ತಾಲ್ಲೂಕಿನ ಕೆಸಲೂರು, ದೇವಂಗಿ, ನಂಬಳ ಗ್ರಾಮಗಳಲ್ಲಿ ಮನೆ ಹಾಗೂ ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಪಟ್ಟಣದ ಕುರುವಳ್ಳಿ ಶಿಲ್ಪಕಲಾ ಕೇಂದ್ರದ ಬಳಿ ಧರೆಯ ಮಣ್ಣು ಕುಸಿದಿದ್ದು, ಕಲಾ ಕೇಂದ್ರಕ್ಕೆ ಹಾನಿಯಾಗಿದೆ.

ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಹಾಗೂ ಶಿವಮೊಗ್ಗದಲ್ಲಿ ಜಿಟಿಜಿಟಿ ಮಳೆಯಾಗಿದೆ.

**

ಶಾಲೆಗಳಿಗೆ ರಜೆ

ಚಿಕ್ಕಮಗಳೂರು: ಮಳೆಯ ಹಿನ್ನೆಲೆಯಲ್ಲಿ ಶೃಂಗೇರಿ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕಿನಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.

**

24 ಗಂಟೆಗಳ ಅವಧಿಯಲ್ಲಿ ಆದ ಮಳೆ ಪ್ರಮಾಣ (ಮಿ.ಮೀ ನಲ್ಲಿ)

ಶಾಂತಳ್ಳಿ; 196

ಭಾಗಮಂಡಲ; 174

ಶೃಂಗೇರಿ; 137

ನಾಪೋಕ್ಲು ಹೋಬಳಿ; 131

ಆಗುಂಬೆ; 128

ಮೂಡಿಗೆರೆ; 104

ತೀರ್ಥಹಳ್ಳಿ; 102.8

ಬಂಟ್ವಾಳ; 98.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.