ADVERTISEMENT

ಮೂವರಿಗೆ ಬ್ಯಾರಿ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಬೆಂಗಳೂರು:  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2011ನೇ ಸಾಲಿನ ಗೌರವ ಪ್ರಶಸ್ತಿಗೆ ಅಹಮದ್ ಬಾವ ಬಜಾಲ್ (ಬ್ಯಾರಿ ಭಾಷೆ), ಹಂಝ ಮಲಾರ್ (ಬ್ಯಾರಿ ಸಾಹಿತ್ಯ), ಇಸ್ಮಾಯಿಲ್ ಮೂಡುಶೆಡ್ಡೆ (ಬ್ಯಾರಿ ಕಲೆ) ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಅವರು, ನವೆಂಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರೂ 10 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಬಜಾಲ್ ಅವರು ರಾಜ್ಯದ ಬ್ಯಾರಿ ಪ್ರಮುಖರನ್ನು ಒಗ್ಗೂಡಿಸುವ ಮೂಲಕ ಭಾಷೆಯ ಏಳಿಗೆಗೆ ದುಡಿದಿದ್ದಾರೆ. ಹಂಝ ಮಲಾರ್ ಅವರು ಹಲವು ಕಾದಂಬರಿ, ನಾಟಕ, ಒಗಟು, ಜಾನಪದ ಕಥೆಗಳನ್ನು ರಚಿಸಿದ್ದಾರೆ. ಅಲ್ಲದೆ ಬ್ಯಾರಿ ಗಾದೆಗಳನ್ನು ಸಂಗ್ರಹಿಸುವ ಮೂಲಕ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಮೂಡುಶೆಡ್ಡೆ ಅವರು ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ ಎಂದು ವಿವರಿಸಿದರು. ಬ್ಯಾರಿ ಸಾಹಿತ್ಯದ ಬೆಳವಣಿಗೆಗೆ ಮುಂದಿನ ವರ್ಷ ವಿಶ್ವ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಸುವ ಯೋಚನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.