ADVERTISEMENT

ಮೈತ್ರಿ ಸಲಹೆಗೆ ಒಪ್ಪಿ, ಬಳಿಕ ಇಲ್ಲವೆಂದ ದೇವೇಗೌಡ

ಕಾಂಗ್ರೆಸ್ ಜೊತೆ ಸೇರಿ ಬಿಜೆಪಿ ಸೋಲಿಸಲು ಪ್ರಗತಿಪರ ಮುಖಂಡರ ಮನವಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಮೈತ್ರಿ ಸಲಹೆಗೆ ಒಪ್ಪಿ, ಬಳಿಕ ಇಲ್ಲವೆಂದ ದೇವೇಗೌಡ
ಮೈತ್ರಿ ಸಲಹೆಗೆ ಒಪ್ಪಿ, ಬಳಿಕ ಇಲ್ಲವೆಂದ ದೇವೇಗೌಡ   

ಬೆಂಗಳೂರು: ಕೆಲವು ಕೇತ್ರಗಳಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ’ಯ ಸಲಹೆ ಒಪ್ಪಿ ಮಂಗಳವಾರ ಬೆಳಿಗ್ಗೆ ಹೇಳಿಕೆ ನೀಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಧ್ಯಾಹ್ನ ‘ಮೈತ್ರಿ ಮಾತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಆದರೆ, ಈ ಮಾತನ್ನು ದೇವೇಗೌಡರು ವ್ಯಂಗ್ಯವಾಗಿ ಹೇಳಿದ್ದಾರೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗಿತ್ತು. ತಾವು ವ್ಯಂಗ್ಯವಾಗಿ ಹೇಳಿದ್ದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ದೇವೇಗೌಡರೂ ಮಧ್ಯಾಹ್ನ ಸ್ಪಷ್ಟ‍ಪಡಿಸಿದರು.

ನಡೆದಿದ್ದೇನು? :
ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಮತ್ತು ಎ.ಕೆ. ಸುಬ್ಬಯ್ಯ ನೇತೃತ್ವದ ಈ ಸಂಘಟನೆಯ ಸದಸ್ಯರಾದ ಕೆ.ಎಲ್. ಅಶೋಕ್, ನೂರ್ ಶ್ರೀಧರ್, ಎನ್‌. ವೆಂಕಟೇಶ್ ಹಾಗೂ ಇತರರು ದೇವೇಗೌಡರನ್ನು ಭೇಟಿಯಾಗಿ ‘ಜೆಡಿಎಸ್– ಕಾಂಗ್ರೆಸ್ ನಡುವಿನ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲವಾಗಲಿರುವ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದ್ದರು.

ADVERTISEMENT

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ದೇವೇಗೌಡರು, ‘ನಾವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ ಮಾಡಬಾರದು, ಕಾಂಗ್ರೆಸ್‌ ಎಷ್ಟು ಸ್ಥಾನಗಳನ್ನು ನಮಗೆ ಬಿಟ್ಟುಕೊಡಲಿದೆ ಎಂದು ಕೇಳಿದ್ದೇನೆ. ಅಲ್ಲಿಂದ ಸೂಕ್ತ ಪ್ರಸ್ತಾವನೆ ಬಂದರೆ ನನ್ನ ಸಂಪೂರ್ಣ ಸಹಕಾರ ಇದೆ’ ಎಂದರು.

‘ಕರ್ನಾಟಕದಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷ, ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇದೆ ಎಂದು ಹೇಳಿಕೊಳ್ಳುತ್ತದೆ. ನಮ್ಮದೂ ಒಂದು ಪಕ್ಷ. ಹೆಸರೇ ಜಾತ್ಯಾತೀತ ಜನತಾ
ದಳ. ಆದರೆ, ನಮ್ಮದು ಅವಕಾಶವಾದಿ ಪಕ್ಷ ಎಂದು ಆ ಪಕ್ಷದ ನಾಯಕರು ಟೀಕಿಸುತ್ತಾರೆ. ಹೀಗಾಗಿ ಅವರಿಂದಲೇ ಪ್ರಸ್ತಾವನೆ ಬಂದರೆ ನೋಡೋಣ’ ಎಂದು ಜೆಡಿಎಸ್‌ ವರಿಷ್ಠರು ಹೇಳಿದ್ದರು.

ವ್ಯಂಗ್ಯವಾಗಿ ಹೇಳಿದ್ದು: ಮಧ್ಯಾಹ್ನ ಮತ್ತೊಮ್ಮೆ ತುರ್ತು ಮಾಧ್ಯಮಗೋಷ್ಠಿ ನಡೆಸಿದ ದೇವೇಗೌಡ, ‘ಪ್ರಗತಿಪರರು ಹೇಳಿದಂತೆ ಕೇಳಲು ಸಮಯವಿಲ್ಲ. ಕಾಂಗ್ರೆಸ್‌ ಜೊತೆಗಿನ ಮೈತ್ರಿ ಬಗ್ಗೆ ವ್ಯಂಗ್ಯವಾಗಿ ಹೇಳಿದ್ದನ್ನು ಮಾಧ್ಯಮಗಳಲ್ಲಿ ತಪ್ಪಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ’ ಎಂದರು.

‘ಈಗಾಗಲೇ ಬಿಎಸ್‌ಪಿ ಜೊತೆ ಕೈ ಜೋಡಿಸಿದ್ದೇವೆ. ಸಮಾಜವಾದಿ ಪಕ್ಷದವರು ಬಂದರೆ ಪರಿಶೀಲನೆ ಮಾಡುತ್ತೇವೆ. ಉಳಿದ ಪಕ್ಷಗಳ ಜೊತೆ ಮೈತ್ರಿ ಪರಿಗಣಿಸುವ ಕಾಲ ಮಿಂಚಿ ಹೋಗಿದೆ’ ಎಂದರು.

‘ಕಾಂಗ್ರೆಸ್‌ ಜೊತೆ ಸಂಬಂಧ ಬೆಳೆಸುವ ಪ್ರಮೇಯ ಬರುವುದೇ ಇಲ್ಲ. ಈಗಾಗಲೇ ಚುನಾವಣೆ ಘೋಷಣೆ ಆಗಿದೆ. ಮೇ 15ರಂದು ಫಲಿತಾಂಶ ಪ್ರಕಟ ಆಗಲಿದೆ. ಬಹುಮತದೊಂದಿಗೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮೇ 18ರಂದು ನನ್ನ ಹುಟ್ಟು ಹಬ್ಬವಿದೆ. ಅಂದು ನಾಡಿನ ಜನರೊಂದಿಗೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು.

ಮತ್ತೆ ಪತ್ರ ಬರೆಯುತ್ತೇನೆ: ದೊರೆಸ್ವಾಮಿ
‘ಬೆಳಿಗ್ಗೆ ಒಪ್ಪಿಕೊಂಡು ಮಧ್ಯಾಹ್ನ ಇಲ್ಲ ಎನ್ನುತ್ತಿರುವ ದೇವೇಗೌಡರಿಗೆ ಪತ್ರ ಬರೆಯುತ್ತೇನೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

‘ನನಗೆ ಅನಾರೋಗ್ಯ ಇರುವ ಕಾರಣ ದೇವೇಗೌಡರ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ, ನನ್ನ ಗೆಳೆಯರು ಹೋಗಿದ್ದ ವೇಳೆ ಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದರು. ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದರು. ಆದರೆ, ಈಗ ವ್ಯಂಗ್ಯವಾಗಿ ಹೇಳಿದ್ದೆ ಎನ್ನುತ್ತಿರುವುದು ಆಶ್ಚರ್ಯ ಎನಿಸಿದೆ’ ಎಂದರು.

‘ಬಿಜೆಪಿಯವರ ಜೊತೆ ಹೋದರೆ ನಿಮ್ಮ ಮಗ ಮುಖ್ಯಮಂತ್ರಿ ಆಗಬಹುದು ಅಷ್ಟೆ. ಆದರೆ, ಬಿಜೆಪಿಯಿಂದ ನಾಡಿಗೆ ಮತ್ತು ಸಂವಿಧಾನಕ್ಕೆ ಅಪಾಯವಿದೆ ಎಂಬುದನ್ನು ಪತ್ರ ಬರೆದು ಮನವರಿಕೆ ಮಾಡಿಸುತ್ತೇನೆ’ ಎಂದು ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

**

ಕಳೆದ ಮೂರು ದಿನಗಳಿಂದ ಅಧಿಕಾರಿಗಳ ವರ್ಗಾವಣೆ ಸ್ವೇಚ್ಛಾಚಾರವಾಗಿ ನಡೆಯುತ್ತಿದೆ. ಬೇಕಾದ ಕಡೆಗೆ ಬೇಕಾದವರನ್ನು ಸರ್ಕಾರ ವರ್ಗಾವಣೆ ಮಾಡಿದೆ‌
– ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.