ADVERTISEMENT

ಮೈಸೂರು: ಆನೆ ದಾಳಿಗೆ ತುತ್ತಾದವರ ಅರಣ್ಯರೋದನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಮೈಸೂರು: ಈಚೆಗಷ್ಟೇ ನಗರಕ್ಕೆ ನುಗ್ಗಿದ ಕಾಡಾನೆ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಾಲ್ವರಿಗೆ ಸರ್ಕಾರ ಅಥವಾ ಅರಣ್ಯ ಸಚಿವರು ಇದುವರೆಗೂ ಬಿಡಿಗಾಸನ್ನೂ ಪರಿಹಾರವಾಗಿ ನೀಡಿಲ್ಲ.

ಇದರಿಂದಾಗಿ ಗಾಯಾಳುಗಳಲ್ಲಿ ಆತಂಕ ಮನೆ ಮಾಡಿದೆ. ಸರ್ಕಾರದ ಧನ ಸಹಾಯ ಭರವಸೆ ಇವರ ಪಾಲಿಗೆ ಮರೀಚಿಕೆಯಾಗಿ ಪರಿಣಮಿಸಿದೆ.

 ಮಿಷನ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ತಿಲಕ್ ನಗರದ 57 ವರ್ಷದ ವೈಲೆಟ್ ಅವರಿಗೆ ದಿಕ್ಕು ತೋಚದಂತಾಗಿದೆ. ಆನೆ ದಾಳಿಯಿಂದ ನಡೆದಾಡುವ ಚೈತನ್ಯ ಕಳೆದುಕೊಂಡಿದ್ದಾರೆ.

ಬೆನ್ನುಮೂಳೆ ತೊಂದರೆಯಿಂದ ಬಳಲುತ್ತಿರುವ ಇವರಿಗೆ ಇದುವರೆಗೂ ಸರ್ಕಾರದಿಂದ ಒಂದು ರೂಪಾಯಿಯೂ ದೊರೆತಿಲ್ಲ. ಆಸ್ಪತ್ರೆ ವೆಚ್ಚ ರೂ.15 ಸಾವಿರ ಮೀರಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಇವರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಬಹಳಷ್ಟು ತೊಂದರೆಯಾಗಿದೆ ಎಂಬುದು ವೈಲೆಟ್ ಪುತ್ರಿ ರೋಸಲಿನ್‌ರ ಅಳಲು.

 `ಆಸ್ಪತ್ರೆ ವೆಚ್ಚ ರೂ.15,180 ಆಗಿದೆ. ಆದಾಗ್ಯೂ ತಾಯಿ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ದೇಹದಲ್ಲಿ ನೋವಿದ್ದು ನಡೆದಾಡಲು ಕಷ್ಟ ಪಡುತ್ತಿದ್ದಾರೆ. ನಾಲ್ಕೈದು ಹೆಜ್ಜೆ ನಡೆಯಲು ಆಗದಷ್ಟು ನಿತ್ರಾಣಗೊಂಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣದ ಬಗ್ಗೆ ವರದಿ ಮಾಡಿಕೊಂಡಿದ್ದಾರೆ. ಔಷಧೋಪಚಾರಗಳ ವೆಚ್ಚ ಈಗಾಗಲೇ ರೂ. 6 ಸಾವಿರ ಮೀರಿದೆ. ಏನು ಮಾಡಬೇಕು ಎಂದು ತೋಚದಾಗಿದೆ~ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

`ಆನೆ ದಾಳಿಯಿಂದಾದ ಶಾಕ್‌ನಿಂದ ನನ್ನ ತಾಯಿ ಇನ್ನೂ ಹೊರಬಂದಿಲ್ಲ. ಆ ದಿನದ ಘಟನೆ ಇನ್ನೂ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ನಿದ್ರೆಯಲ್ಲೂ ಕನವರಿಸುತ್ತಾರೆ. ಅವರಿಗೆ ಮಧುಮೇಹ ಕಾಯಿಲೆ ಇಲ್ಲ. ಆದರೆ ಅತೀ ಒತ್ತಡದಿಂದಾಗಿ ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ದಿಕ್ಕೇ ತೋಚದಂತಾಗಿದೆ~ ಎಂದು ಭಾವುಕರಾದರು.

ಆನೆ ದಾಳಿಗೆ ತುತ್ತಾದವರ ಇನ್ನುಳಿದವರ ಸಮಸ್ಯೆ ಇದಕ್ಕಿಂತಲೂ ಭಿನ್ನವಾಗಿಲ್ಲ. 80 ವರ್ಷದ ಸಿದ್ದಮ್ಮ ಮತ್ತು 48 ವರ್ಷದ ಬಾಲಕೃಷ್ಣ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. `ಆಸ್ಪತ್ರೆ ನಮ್ಮಿಂದ ಯಾವುದಕ್ಕೂ ಹಣ ಪಡೆದಿಲ್ಲ. ಆದರೆ, ಹೊರಗಡೆಯಿಂದ ತರಿಸಿರುವ ಔಷಧಿ ವೆಚ್ಚ ರೂ. 3 ಸಾವಿರಕ್ಕೂ ಹೆಚ್ಚಾಗಿದೆ. ಬೆನ್ನೆಲುಬಿಗೆ ಆಳವಾದ ಗಾಯಗಳಾಗಿದ್ದು ಇನ್ನೂ ವಾಸಿಯಾಗಿಲ್ಲ. ಅರಣ್ಯ ಸಚಿವರು ನೀಡಿರುವ ರೂ. 5 ಸಾವಿರ ಹೊರತು ಪಡಿಸಿದರೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ ಎನ್ನುತ್ತಾರೆ~ ಸಿದ್ದಮ್ಮರ ಪುತ್ರಿ ಶಾಂತ.

`ನನ್ನ ತಾಯಿ ಬೆಳಿಗ್ಗೆ 8 ಗಂಟೆಗೆ ಅರಸು ರಸ್ತೆಗೆ ಹೂ ಮಾರಾಟಕ್ಕೆ ಹೋಗಿದ್ದರು.ಅವರ ಜತೆ ತಂಗಿ ಸರೋಜ ಕೂಡ ಹೋಗಿದ್ದಳು. ಈ ಸಮಯದಲ್ಲಿ ಆನೆ ದಾಳಿ ಮಾಡಿದೆ. ತಕ್ಷಣವೇ ಅಲ್ಲಿಂದ ಪಾರಾಗಲು ಸಾಧ್ಯವಾಗದೇ ಇರುವುದು ಇಷ್ಟೆಲ್ಲ ಸಂಭವಿಸಲು ಕಾರಣವಾಯಿತು~ ಎನ್ನುತ್ತಾರೆ ಶಾಂತ.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಬಾಲಕೃಷ್ಣರದ್ದೂ ಇದೇ ಗೋಳು. ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತಿದೆಯಾದರೂ ಇನ್ನುಳಿದಂತೆ ಔಷಧೋಪಚಾರ, ಊಟ ಸೇರಿ ಮತ್ತಿತರರ ವೆಚ್ಚಗಳಿಗೆ ಪರದಾಡಬೇಕಾಗಿದೆ ಎಂಬುದು ಅವರ ಅಳಲು.

ಇನ್ನು ಆಟೋ ಚಾಲಕ ಪವನ್ ದುಡಿಮೆಯ ಹಣವನ್ನು ಮನೆಯವರಿಗೆ ಕೊಡುತ್ತಿದ್ದ. ಈಗ ಆಸ್ಪತ್ರೆಗೆ ದಾಖಲಾಗಿರುವುದರಿಂದ ಕಳೆದ 10 ದಿನದಿಂದ ಆಟೋ ಮನೆಯ ಮುಂದೆ ನಿಂತಿದೆ. ಇದರಿಂದಾಗಿ ಬಹಳಷ್ಟು ತೊಂದರೆಯಾಗಿದೆ. ಪ್ರತಿ ದಿನ ರೂ 500 ದುಡಿದು ಮನೆ ಖರ್ಚಿಗೆ 300 ರೂಪಾಯಿ ಕೊಡುತ್ತಿದ್ದ. ಇದೀಗ ಆದಾಯ ನಿಂತು ಹೋಗಿದ್ದು, ಬಹಳಷ್ಟು ಕಷ್ಟವಾಗಿದೆ ಎನ್ನುತ್ತಾರೆ ಪವನ್ ತಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.