ಮೈಸೂರು: ಚಾಮರಾಜೇಂದ್ರ ಮೃಗಾಲಯವು ದೇಶದ ಮೃಗಾಲಯಗಳ ಪೈಕಿ ಪ್ರಥಮವಾಗಿ ಅನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೇವೆಯನ್ನು ಸೋಮವಾರ ಆರಂಭಿಸಿತು.ಮೈಸೂರಿನವರೇ ಆದ ಪ್ರಮೋದ್ ರಾವ್ ಆನ್‌ಲೈನ್ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಿದ್ದಾರೆ.
ಈ ಸೇವೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮಾ ಚಾಲನೆ ನೀಡಿದರು. `ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೀತಿಯ ವ್ಯವಸ್ಥೆಯನ್ನು ಪ್ರವಾಸಿಗರು ಬಯಸಿದ್ದರು~ ಎಂದರು.
ಪ್ರವಾಸಿಗರು www.mysorezoo.info ತಾಣಕ್ಕೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬೇಕು.
`ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಉದ್ಯಾನದಲ್ಲೂ ಮೈಸೂರು ಮೃಗಾಲಯ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುವುದು. ಇಷ್ಟೇ ಅಲ್ಲದೆ ಬಂಡೀಪುರದ ಅತಿಥಿಗೃಹ ಮತ್ತು ಸಫಾರಿಯನ್ನು ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗುವುದು~ ಎಂದು ತಿಳಿಸಿದರು.
`ಕೇಂದ್ರ ಸರ್ಕಾರ ಪರಿಸರ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿದ್ದು, ಹೆಚ್ಚು ಪ್ರವಾಸಿಗರು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳತ್ತ ಬರುತ್ತಿದ್ದಾರೆ. ಇಲ್ಲಿ ಖಾಸಗಿ ವಾಹನಗಳ ಸಫಾರಿಗೆ ಅವಕಾಶ ಇಲ್ಲ. ಪ್ರವಾಸಿಗರು ಅರಣ್ಯ ಇಲಾಖೆ ಇಲ್ಲವೇ ಜಂಗಲ್ ಲಾಡ್ಜ್‌ನಿಂದ ವಾಹನಗಳನ್ನುಪಡೆಯಬೇಕು. `ಹುಲಿ ಯೋಜನೆ ಪ್ರದೇಶದಲ್ಲಿ ಪ್ರತಿ ನಾಲ್ಕು ವಾಹನಗಳಿಗೆ ಮಾರ್ಗ ನಿಗದಿಗೊಳಿಸಲಾಗಿದೆ. ಅಲ್ಲದೇ ಪ್ರವಾಸಿಗರು ತಮ್ಮಂದಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇಂತಹ ಕ್ರಮದಿಂದ ಪ್ರವಾಸಿಗರಲ್ಲಿ ಶಿಸ್ತು ರೂಢಿಸಲಾಗುತ್ತಿದೆ~ ಎಂದು ಹೇಳಿದರು.
ಆನೆ ಗಣತಿ: `ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯ ಮುಕ್ತಾಯಗೊಂಡಿದೆ. ಅಂಕಿ ಅಂಶಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಿಕೊಡಲಾಗಿದ್ದು, ವಿಶ್ಲೇಷಣೆ ಕಾರ್ಯ ನಡೆಯುತ್ತಿದೆ. ಜುಲೈ ಅಂತ್ಯಕ್ಕೆ ನಿಖರ ಮಾಹಿತಿ ಲಭ್ಯವಾಗಿದೆ. ಈಗ ಆನೆಗಳ ಸಂಖ್ಯೆ ತೃಪ್ತಿಕರವಾಗಿದೆ~ ಎಂದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, `ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿಗಾಗಿ ಅತ್ಯಾಧುನಿಕ ಮಿನಿ ಬಸ್ ಬಿಡಲಾಗಿದ್ದು, ಪ್ರವಾಸಿಗರು ಹೆಚ್ಚು ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೊಂದು ಬಸ್‌ಗಾಗಿ ಬೇಡಿಕೆ ಬಂದಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.