ADVERTISEMENT

ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:59 IST
Last Updated 28 ಫೆಬ್ರುವರಿ 2018, 8:59 IST
ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ
ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ   

ಕೊಪ್ಪಳ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಇಷ್ಟೊಂದು ಕೀಳುಮಟ್ಟದಲ್ಲಿ ಮಾತನಾಡುವ ಪ್ರಧಾನಿಯನ್ನು ನಾನು ಕಂಡಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ ತಾಲ್ಲೂಕಿನ ಬಸಾಪುರದ ಎಂಎಸ್‌ಪಿಎಲ್ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಅಧಿಕಾರಕ್ಕೆ ಬರುವ ಮುಂಚೆ ಮೋದಿ ತಾನು ದೇಶದ ಚೌಕಿದಾರ ಎಂದು ಹೇಳುತ್ತಿದ್ದರು. ಲಲಿತ್‌ ಮೋದಿ, ನೀರವ್ ಮೋದಿ ದೇಶ ಬಿಟ್ಟು ಓಡಿ ಹೋಗುವಾಗ ಎಲ್ಲಿ ಹೋಗಿದ್ದರು ಈ ಚೌಕಿದಾರ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಮೋದಿ ನೀಡಿದ ಕುಮ್ಮಕ್ಕಿನಿಂದಲೇ ಅವರು ದೇಶ ತೊರೆದಿದ್ದಾರೆ’ ಎಂದರು.

ADVERTISEMENT

‘ಸೀದಾ ರುಪಯ್ಯಾ’ ಸರ್ಕಾರ ಎಂಬ ಪ್ರಧಾನಿ ಮೋದಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಚೆಕ್‌ ಮೂಲಕ ಹಣ ಪಡೆದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಇನ್ನೊಬ್ಬರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು.

‘ನಾವು ಅಮಿತ್‌ ಶಾಗೆ ಲೆಕ್ಕ ಕೊಡಬೇಕಾಗಿಲ್ಲ. ಬಜೆಟ್‌ ಮಂಡಿಸಿ ರಾಜ್ಯದ ಜನರಿಗೆ ಲೆಕ್ಕ ಕೊಟ್ಟಿದ್ದೇವೆ’ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹದಾಯಿ ಹೋರಾಟಗಾರರ ಸಭೆಯನ್ನು ಕರೆದಿಲ್ಲ. ಸಚಿವ ವಿನಯ ಕುಲಕರ್ಣಿ ಹೋರಾಟಗಾರರಿಗೆ ರಾಹುಲ್‌ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಈ ಸಂಗತಿ ರಾಹುಲ್ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ವಿಮಾನ ನಿಲ್ದಾಣಕ್ಕೆ ತೆರಳಿದರು ಎಂದು ಹೇಳಿದರು.

ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌ ಮಾಡಿದ ಹಾಗೂ ಸಾಲ ಮನ್ನಾ ಮಾಡಲು ನೋಟು ಮುದ್ರಿಸುವ ಯಂತ್ರ ಇಟ್ಟಿಲ್ಲ ಎಂದು ಹೇಳುತ್ತಿದ್ದ ಬಿ.ಎಸ್‌.ಯಡಿಯೂರಪ್ಪ ‘ರೈತ ಬಂಧು’ ಹೇಗೆ ಆಗುತ್ತಾರೆ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.