ADVERTISEMENT

ಮೌಲ್ಯಯುತ ಶಿಕ್ಷಣ ಅಗತ್ಯ: ಪ್ರಣವ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:52 IST
Last Updated 24 ಸೆಪ್ಟೆಂಬರ್ 2013, 19:52 IST
ವಿಜಾಪುರದಲ್ಲಿ ಮಂಗಳವಾರ ನಡೆದ ಸೈನಿಕ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಅವರ ಭಾವಚಿತ್ರವಿರುವ ಸ್ಮರಣಿಕೆ  ನೀಡುವ ಮೂಲಕ ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಗೌರವಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದಲ್ಲಿದ್ದಾರೆ
ವಿಜಾಪುರದಲ್ಲಿ ಮಂಗಳವಾರ ನಡೆದ ಸೈನಿಕ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಅವರ ಭಾವಚಿತ್ರವಿರುವ ಸ್ಮರಣಿಕೆ ನೀಡುವ ಮೂಲಕ ಪ್ರಾಚಾರ್ಯ ಕರ್ನಲ್‌ ಆರ್‌.ಬಾಲಾಜಿ ಗೌರವಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದಲ್ಲಿದ್ದಾರೆ   

ವಿಜಾಪುರ: ‘ಮಾತೃ ಭೂಮಿ ಪ್ರೀತಿಸುವುದು, ಹಿರಿಯರು– ಮಹಿಳೆಯರನ್ನು ಗೌರವಿಸುವುದು ಮತ್ತು ಧರ್ಮ ಸಹಿಷ್ಣುತೆ ನಮ್ಮ ನಾಗರಿಕತೆಯ ಲಕ್ಷಣ. ಐದು ಸಾವಿರ ವರ್ಷಗಳ ನಾಗರಿಕತೆಯಲ್ಲಿ ನಾವು ಇದನ್ನು ಜಗತ್ತಿಗೇ ಪರಿಚಯಿಸಿದ್ದೇವೆ. ನಮ್ಮ ಯುವ ಪೀಳಿಗೆ ಈ ಮೌಲ್ಯಗಳನ್ನು ಹೃದಯಪೂರ್ವಕಾಗಿ ಸ್ವೀಕರಿಸಿ, ಪಾಲಿಸಬೇಕು. ಶಿಕ್ಷಣದ ಪರಿಕಲ್ಪನೆಯೂ ಇದೇ ಆಗಿರಬೇಕು’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದರು.

ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ‘ವ್ಯಕ್ತಿಯ ವೈಯಕ್ತಿಕ ಸಾಧನೆ ಎಷ್ಟು ಮುಖ್ಯವೋ, ಅದಕ್ಕಿಂತ ಮುಖ್ಯವಾದುದು ತಾಯಿನಾಡಿನ ಮೇಲಿನ ಪ್ರೀತಿ ಮತ್ತು ನಾಗರಿಕ ಗುಣಗಳು. ಇವುಗಳನ್ನು ನಾವು ಬಾಲ್ಯಾವಸ್ಥೆಯಲ್ಲಿಯೇ ಕಲಿಯಬೇಕು. ಇದಕ್ಕೆ ಶಿಕ್ಷಣ ಮಹತ್ವವಾದ ಪಾತ್ರ ವಹಿಸುತ್ತದೆ. ಸಶಕ್ತ ಸಮಾಜ, ಬಲಿಷ್ಠ ರಾಷ್ಟ್ರ ಕಟ್ಟುವ ಹೊಣೆಗಾರಿಕೆಯನ್ನು ಯುವ ಜನತೆ ಯಶಸ್ವಿಯಾಗಿ ನಿಭಾಯಿಸಬೇಕು’ ಎಂದರು.

ಸರ್ಕಾರಕ್ಕೆ ರಾಜ್ಯಪಾಲರ ಸಲಹೆ: ‘ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡಬೇಕು’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಸಲಹೆ ನೀಡಿದರು.

‘ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ವಿಜಾಪುರ ಪ್ರದೇಶಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕಿವೆ. ಅದಕ್ಕೆ ರಾಜ್ಯ ಸರ್ಕಾರ ಗಮನ ಹರಿಸಬೇಕು’ ಎಂದು ಇಲ್ಲಿಯ ಸೈನಿಕ ಶಾಲೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹೇಳಿದರು.

‘ನಮ್ಮ ಶಿಕ್ಷಣದ ಅಡಿಪಾಯ ಬಲಗೊಳಿಸುವಲ್ಲಿ ಸೈನಿಕ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ದೇಶದ 24 ಸೈನಿಕ ಶಾಲೆಗಳಲ್ಲಿ ವಿಜಾಪುರ ಶಾಲೆ ಅತ್ಯುತ್ತಮವಾಗಿದೆ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ರಕ್ಷಣಾ ಪಡೆಗಳಿಗೆ 500ಕ್ಕೂ ಹೆಚ್ಚು ಅಧಿಕಾರಿಗಳನ್ನು ನೀಡಿದ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.