ADVERTISEMENT

ಯಕ್ಷಗಾನಕ್ಕೆ ಸಂದ ಗೌರವ: ಚಿಟ್ಟಾಣಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಹೊನ್ನಾವರ (ಉ.ಕ.ಜಿಲ್ಲೆ): `ನನಗೆ ಅತೀವ ಸಂತೋಷವಾಗಿದೆ. ಪ್ರಶಸ್ತಿಯು ಶ್ರೇಷ್ಠ ಕಲಾಪ್ರಕಾರವಾದ ಯಕ್ಷಗಾನದ ಕಿರೀಟಕ್ಕೆ ಸಂದ ಗೌರವ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಹಾರೈಕೆ....~ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರತಿಕ್ರಿಯಿಸಿದ್ದಾರೆ.

ಯಕ್ಷಗಾನವನ್ನು ವೃತ್ತಿಗಿಂತ ಪ್ರವೃತ್ತಿಯಾಗಿ ಸ್ವೀಕರಿಸಬೇಕಾದ ಮತ್ತು ಪ್ರದರ್ಶನದಲ್ಲಿ ಹಳೆಯ ಸಂಪ್ರದಾಯ ಹಾಗೂ ಹೊಸ ಅನ್ವೇಷಣೆ ಎರಡನ್ನೂ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಇನ್ನಷ್ಟು ಆರ್ಥಿಕ ನೆರವು ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಯುವ ಕಲಾವಿದರು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಭ್ಯಸಿಸಬೇಕೆಂದು ಸಲಹೆ ನೀಡಿದ ಅವರು, ಈ ನಿಟ್ಟಿನಲ್ಲಿ ಯಕ್ಷಗಾನ ಶಾಲೆಯೊಂದನ್ನು ಆರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.   

ಬಾಳೆಗದ್ದೆಯ ರಾಮಕೃಷ್ಣ ಭಟ್ಟ ಅವರಲ್ಲಿ ಯಕ್ಷಗಾನ ಶಿಕ್ಷಣವನ್ನು ಪಡೆದ ಚಿಟ್ಟಾಣಿ ಶಾಲೆಗೆ ಹೋಗಿ ಕಲಿತದ್ದು ಕೇವಲ ನಾಲ್ಕನೆಯ ತರಗತಿವರೆಗೆ ಮಾತ್ರ. ದುರ್ಯೋಧನ, ಭಸ್ಮಾಸುರ, ಮಾಗಧ, ಅರ್ಜುನ, ಕೀಚಕ ಹೀಗೆ ಯಕ್ಷಗಾನದ ಹಲವು ಪುರುಷ ಪಾತ್ರಗಳಿಗೆ ಚಿಟ್ಟಾಣಿ ಜೀವ ತುಂಬಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕು ಎಂಬ ತುಡಿತವನ್ನು 77ನೇ ವಯಸ್ಸಿನಲ್ಲಿಯೂ ಹೊಂದಿದ್ದಾರೆ.

ಕೆರೆಮನೆ ಶಿವರಾಮ ಹೆಗಡೆ ಹಾಗೂ ಕೊಂಡದಕುಳಿ ಸಹೋದರರು ತಮ್ಮ ಮೇಲೆ ಗಾಢ ಪ್ರಭಾವ ಬೀರಿದರು ಎಂದು ಅವರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.