ADVERTISEMENT

ಯಡಿಯೂರಪ್ಪಗೆ ಮುಕ್ತ ಸಂಚಾರಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರು ಹಾಗೂ ಅಳಿಯ ಬೆಂಗಳೂರಿನಿಂದ ಹೊರಕ್ಕೆ ಹೋಗಿಬರಲು ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.

ಜಮೀನನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐಗೆ ಅಗತ್ಯವಿದ್ದಲ್ಲಿ, ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ.ವಿಜಯೇಂದ್ರ ಹಾಗೂ ಅಳಿಯ ಸೋಹನಕುಮಾರ್ ಅವರು 24 ಗಂಟೆಯೊಳಗೆ ಈ ತನಿಖಾ ಸಂಸ್ಥೆ ಮುಂದೆ ಹಾಜರಾಗುವಂತೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ನಿರ್ದೇಶಿಸಿದ್ದಾರೆ.
 
ಸಿಬಿಐ ಬಯಸಿದಾಗ ಅದರ ಮುಂದೆ 24 ಗಂಟೆ ಒಳಗೆ ಹಾಜರಾಗುವುದಾಗಿ ಎಲ್ಲರೂ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಅದನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿ, ಬೆಂಗಳೂರು ಬಿಟ್ಟು ಹೊರಕ್ಕೆ ಹೋಗಲು ಅನುವು ಮಾಡಿಕೊಟ್ಟರು.

ರಾಚೇನಹಳ್ಳಿ ಬಳಿಯ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕಾನೂನುಬಾಹಿರವಾಗಿ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ಜೂನ್ 21ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕೆಲ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಬೆಂಗಳೂರು ಬಿಟ್ಟು ಹೊರಕ್ಕೆ ಹೋಗಬಾರದು ಎಂಬ ಷರತ್ತೂ ಸೇರಿದೆ.
 
ನಿರೀಕ್ಷಣಾ ಜಾಮೀನಿನ ರದ್ದತಿಗೆ ಕೋರಿ ಸಿಬಿಐ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 6ರಂದು ವಜಾಗೊಳಿಸಿತ್ತು. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ, ಯಡಿಯೂರಪ್ಪ ಹಾಗೂ ಉಳಿದ ಆರೋಪಿಗಳು ಜಾಮೀನು ಸಡಿಲಿಕೆ ಕೋರಿ ಹೈಕೋರ್ಟ್ ಮೊರೆ ಹೋದರು.

ರಾಜ್ಯದಲ್ಲಿ ತೀವ್ರ ಬರ ಇದೆ. ಬರಪೀಡಿತ ಪ್ರದೇಶಗಳಿಗೆ ತಾವು ಭೇಟಿ ನೀಡುವ ಅಗತ್ಯ ಇದೆ ಎನ್ನುವುದು ಬಿಎಸ್‌ವೈ ವಾದವಾಗಿತ್ತು. ಇದಕ್ಕೆ ಸಿಬಿಐನಿಂದ ಆಕ್ಷೇಪ ವ್ಯಕ್ತವಾಗಿತ್ತು. ಜಮೀನನ್ನು ಕಾನೂನುಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿರುವ ಕಾರಣ, ಬೆಂಗಳೂರು ಬಿಟ್ಟು ಪರಸ್ಥಳಗಳಿಗೆ ಆರೋಪಿಗಳನ್ನು ಕಳುಹಿಸುವುದು ಉಚಿತವಲ್ಲ ಎಂದು ಸಿಬಿಐ ತಿಳಿಸಿತ್ತು.

`ಸಿಬಿಐಗೆ ಅಗತ್ಯವಿದ್ದ ಪಕ್ಷದಲ್ಲಿ ಅದರ ಮುಂದೆ ಹಾಜರಾಗಲು ನಾವು ಸಿದ್ಧರಿದ್ದೇವೆ~ ಎಂದು ಎಲ್ಲರೂ ಕೋರ್ಟ್‌ಗೆ ಸೋಮವಾರ ತಿಳಿಸಿದ್ದರು. ಅಂಶಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು. 

ತನಿಖೆ ರದ್ದತಿಗೆ ಕೋರಿ ಅರ್ಜಿ: ಈ ಮಧ್ಯೆ, ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ ಇನ್ನೆರಡು ಖಾಸಗಿ ದೂರುಗಳ (ಪಿಸಿಆರ್ 5 ಮತ್ತು 6) ರದ್ದತಿಗೆ ಕೋರಿ ಯಡಿಯೂರಪ್ಪ ಹಾಗೂ ಇತರ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಸಂಸ್ಥೆ ಬಳಸಿಕೊಂಡು ಆರ್ಥಿಕ ಅನುಕೂಲ ಪಡೆಯಲಾಗಿದೆ. ಶ್ರೀರಾಮಪುರದಲ್ಲಿ  ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಆರ್‌ಎಂವಿ ಎರಡನೇ ಹಂತದ ಬಡಾವಣೆಯ ನಿವೇಶನಗಳನ್ನು ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪಗಳು 5ನೇ ದೂರಿನಲ್ಲಿ ಇವೆ.
 
ಯಡಿಯೂರಪ್ಪ ಕುಟುಂಬದ ಸದಸ್ಯರ ಒಡೆತನದ ಭಗತ್ ಹೋಮ್ಸ ಕಂಪೆನಿಗೆ ಲಾಭ ಮಾಡುವ ಉದ್ದೇಶದಿಂದ ಜಮೀನನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉತ್ತರಹಳ್ಳಿ ಬಳಿ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂದು 6ನೇ ದೂರಿನಲ್ಲಿ ಆರೋಪಿಸಲಾಗಿದೆ.

ಈ ಆರೋಪಗಳಿಗೆ ಸಂಬಂಧಿಸಿದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶಿಸಿದೆ. ಈ ಆದೇಶದ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದರ ರದ್ದತಿಗೆ ಈಗ ಎಲ್ಲರೂ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾ. ವಿ.ಜಗನ್ನಾಥನ್ ವಿಚಾರಣೆಯನ್ನು 21ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.