ADVERTISEMENT

ಯಡಿಯೂರಪ್ಪ ಬೆಂಬಲಿಗ ಸಚಿವರ ಖಾತೆ ಬದಲಾವಣೆ?

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಬೆಂಗಳೂರು: ಹಾವೇರಿಯಲ್ಲಿ ಭಾನುವಾರ ನಡೆದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ 14 ಜನ ಶಾಸಕರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವುದರ ಜೊತೆಗೆ ಕೆಜೆಪಿ ಅಧ್ಯಕ್ಷ ಬಿ.ಎಸ್‌ಯಡಿಯೂರಪ್ಪ ಬೆಂಬಲಿಗ ಸಚಿವರ ಖಾತೆಗಳನ್ನು ಬದಲಾಯಿಸಲು ಬಿಜೆಪಿಯಲ್ಲಿ ಗಂಭೀರ ಚಿಂತನೆ ನಡೆದಿದೆ.

ಯಡಿಯೂರಪ್ಪಗೆ ಆಪ್ತರಾಗಿರುವ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಖಾತೆಗಳು ಅಧಿವೇಶನ ಮುಗಿದ ನಂತರ ಬದಲಾಗಲಿವೆ. ಸಣ್ಣ ಉಳಿತಾಯ, ಮುಜರಾಯಿ, ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿ ಖಾತೆಗಳನ್ನು ಯಡಿಯೂರಪ್ಪ ಬೆಂಬಲಿಗರಿಗೆ ನೀಡಲಾಗುತ್ತದೆ ಎನ್ನಲಾಗಿದೆ.

ಮೇಲೆ ಹೆಸರಿಸಿರುವ ನಾಲ್ವರು ಸಚಿವರು ಪ್ರಮುಖ ಖಾತೆಗಳನ್ನು ಹೊಂದಿದ್ದು, ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಕೆಜೆಪಿ ಸಮಾವೇಶದಲ್ಲಿ ಶಾಸಕರನ್ನು ವೇದಿಕೆಯೇರಿಸಿದ್ದ ಯಡಿಯೂರಪ್ಪ ಅವರಿಗೆ ಪಾಠ ಕಲಿಸಬೇಕು ಎಂಬ ಉದ್ದೇಶದಿಂದ ಖಾತೆಗಳ ಬದಲಾವಣೆ ಬಗ್ಗೆ ಬಿಜೆಪಿ ಮುಖಂಡರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಬುಧವಾರ ಬೆಳಗಾವಿಯಲ್ಲಿ ಬಿಜೆಪಿ ಪ್ರಮುಖರ ಸಭೆ (ಕೋರ್ ಕಮಿಟಿ) ನಡೆಯಲಿದ್ದು, ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ 14 ಶಾಸಕರ ವಿರುದ್ಧ ಶಿಸ್ತುಕ್ರಮಕೈಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಂದು ಗೊತ್ತಾಗಿದೆ.

ಶಾಸಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆ ಕಡಿಮೆ. ಸದ್ಯಕ್ಕೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತದೆ. ಅವರಿಂದ ಬರುವ ಉತ್ತರವನ್ನು ಆಧರಿಸಿ ಶಿಸ್ತುಕ್ರಮಕೈಗೊಳ್ಳಬೇಕೇ, ಬೇಡವೇ ಎಂದು ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಶಾಸಕರನ್ನು ಅನರ್ಹತೆಗೊಳಿಸುವಂತೆ ಕೋರಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಪತ್ರ ಬರೆಯುವ ಸಾಧ್ಯತೆಯೂ ಕಡಿಮೆ. ಸರ್ಕಾರ ಉಳಿಸಿಕೊಳ್ಳುವ ದೃಷ್ಟಿಯಿಂದ ಎಚ್ಚರಿಕೆ ಹೆಜ್ಜೆ ಇಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಪತ್ರ ಬರೆದರೆ, ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲೇ 14  ಶಾಸಕರು ರಾಜೀನಾಮೆ ನೀಡಬಹುದು. ಆಗ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ನಾವಾಗಿಯೇ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡಿಕೊಂಡಂತೆ ಆಗುತ್ತದೆ ಎಂಬ ಅಭಿಪ್ರಾಯವನ್ನು ಬಿಜೆಪಿಯ ಕೆಲ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ಮಾಹಿತಿ ಪ್ರಕಾರ ಕೋರ್ ಕಮಿಟಿ ಸಭೆಯಲ್ಲಿ ನೋಟಿಸ್ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಬುಧವಾರ ಸಂಜೆ ಅಥವಾ ಗುರುವಾರ ಅಧಿವೇಶನ ಅಂತ್ಯವಾದ ನಂತರ 14 ಶಾಸಕರಿಗೆ ನೋಟಿಸ್ ತಲುಪಿಸಲಾಗುತ್ತದೆ. ಅವರಿಂದ ಉತ್ತರ ಬರುವ ಮೊದಲೇ ಅಧಿವೇಶನ ಮುಕ್ತಾಯವಾಗಿರುತ್ತದೆ. ಆ ನಂತರ ಈ ವಿಷಯವನ್ನು ಹೆಚ್ಚು ಬೆಳೆಸದೆ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.