ADVERTISEMENT

ಯಾದಗಿರಿ, ರಾಯಚೂರಿನಲ್ಲಿ ಮಹಿಳಾ ಸಾಕ್ಷರತೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ಯಾದಗಿರಿ, ರಾಯಚೂರಿನಲ್ಲಿ ಮಹಿಳಾ ಸಾಕ್ಷರತೆ ಕಡಿಮೆ
ಯಾದಗಿರಿ, ರಾಯಚೂರಿನಲ್ಲಿ ಮಹಿಳಾ ಸಾಕ್ಷರತೆ ಕಡಿಮೆ   

ಬೆಂಗಳೂರು: ರಾಜ್ಯದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಈಗಲೂ ಶೇಕಡ 50ಕ್ಕಿಂತ ಕಡಿವೆು ಇದೆ. ಒಟ್ಟು 8 ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ 60 ಮೀರಿಲ್ಲ.

ಇದು ಬುಧವಾರ ಬಿಡುಗಡೆ ಮಾಡಿರುವ 2011ರ ಜನಗಣತಿಯ ಪ್ರಾಥಮಿಕ ಮಾಹಿತಿಯಲ್ಲಿ ಇರುವ ಆಘಾತಕಾರಿ ವಿಷಯ. 2001ರಲ್ಲಿ ಶೇ 66.64ರಷ್ಟಿದ್ದ ರಾಜ್ಯದ ಸಾಕ್ಷರತೆಯ ಪ್ರಮಾಣ ಪ್ರಸ್ತುತ ಶೇ 75.60ರಷ್ಟಾಗಿದೆ. ಆದರೆ ಮಹಿಳೆಯರ ಸಾಕ್ಷರತೆ ಪ್ರಮಾಣ ಪುರುಷರ ಸಾಕ್ಷರತೆಯ ಪ್ರಮಾಣಕ್ಕೆ ಸರಿಸಮವಾಗಿ ಇನ್ನೂ ಏರಿಕೆ ಕಂಡಿಲ್ಲ.

ಸಾಕ್ಷರತೆ ಪ್ರಮಾಣದ ಪಟ್ಟಿಯಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ಮತ್ತು ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಯಾದಗಿರಿ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಾಕ್ಷರತೆಯ ಪ್ರಮಾಣ ರಾಜ್ಯದಲ್ಲಿ ಅತ್ಯಂತ ಕಡಿಮೆ ಇದೆ. ರಾಜ್ಯದ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ 75.60ರಷ್ಟಿದೆ. 12 ಜಿಲ್ಲೆಗಳ ಸಾಕ್ಷರತೆ ಪ್ರಮಾಣ ರಾಜ್ಯದ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಹೆಚ್ಚಿದೆ.

ಪುರುಷರ ಸಾಕ್ಷರತೆ ಪ್ರಮಾಣ 2001ರಲ್ಲಿ ಶೇ 76.10 ಇದ್ದದ್ದು 2011ರಲ್ಲಿ ಶೇ 82.85ರಷ್ಟಾಗಿದೆ. ಇದೇ ವೇಳೆ 2001ರಲ್ಲಿ ಶೇ 56.87ರಷ್ಟಿದ್ದ ಮಹಿಳಾ ಸಾಕ್ಷರತೆಯ ಪ್ರಮಾಣ 2011ರಲ್ಲಿ ಶೇ 68.18ಕ್ಕೆ ಏರಿಕೆ ಕಂಡಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದೆ. ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಮಹಿಳಾ ಸಾಕ್ಷರತೆ ಪ್ರಮಾಣ ಶೇ 80ಕ್ಕಿಂತ ಹೆಚ್ಚಿದೆ. 2001ರಲ್ಲಿ ರಾಜ್ಯದ ಒಟ್ಟು ಅಕ್ಷರಸ್ಥರ ಸಂಖ್ಯೆ 3.04 ಕೋಟಿ ಇತ್ತು. 2011ರಲ್ಲಿ 4.1 ಕೋಟಿಗೆ ಏರಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.