ADVERTISEMENT

ಯುಎಪಿಎ ಪ್ರಕರಣ ದಾಖಲಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಯುಎಪಿಎ ಪ್ರಕರಣ ದಾಖಲಿಸಲು ಚಿಂತನೆ
ಯುಎಪಿಎ ಪ್ರಕರಣ ದಾಖಲಿಸಲು ಚಿಂತನೆ   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ಬಂಧಿತರಾಗಿರುವ ಐವರು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲು ಎಸ್‌ಐಟಿ ಚಿಂತನೆ ನಡೆಸಿದೆ.

ಈ ಸಂಬಂಧ ಕಾನೂನು ತಜ್ಞರ ಸಲಹೆ ಕೋರಿರುವ ಎಸ್‌ಐಟಿ ಅಧಿಕಾರಿಗಳು, ಅದಕ್ಕೆ ಅಗತ್ಯವಾದ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌ ಅಲಿಯಾಸ್ ಹೊಟ್ಟೆ ಮಂಜ, ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್‌ನನ್ನು ಬಂಧಿಸಲಾಗಿತ್ತು. ನಂತರ, ಅವರನ್ನು ಗೌರಿ ಹತ್ಯೆ ಪ್ರಕರಣದಲ್ಲೂ ಬಂಧಿಸಲಾಗಿದೆ.

ADVERTISEMENT

ಆರೋಪಿ ನವೀನ್, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಳಿದ ನಾಲ್ವರನ್ನು ಕಸ್ಟಡಿಗೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಅಜ್ಞಾತ ಪ್ರದೇಶದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.

‘ಆರೋಪಿಗಳು ಗುಂಪು ಕಟ್ಟಿಕೊಂಡು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ‍್ರಕರಣ ದಾಖಲಿಸಬಾರದೇಕೆ? ಎಂದು ಕಾನೂನು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಅವರು ಉತ್ತರ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಬ್ಯಾಗ್, ಸಿಮ್‌ಕಾರ್ಡ್‌ ಜಪ್ತಿ: ಆರೋಪಿ ಸುಜಿತ್ ಕುಮಾರ್‌ನಿಂದ 35 ವಸ್ತುಗಳನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಆರೋಪಿಯಿಂದ ಕಪ್ಪು ಬಣ್ಣದ 2 ಬ್ಯಾಗ್‍ಗಳು, 4 ಮೊಬೈಲ್‌ಗಳು, 4 ಬಿಎಸ್ಸೆನ್ನಲ್, 2 ವೋಡಾ ಫೋನ್ ಹಾಗೂ ಒಂದು ಐಡಿಯಾ ಕಂಪನಿ ಸಿಮ್‍ ಕಾರ್ಡ್‌, 3 ಪಾಸ್‌ಪೋರ್ಟ್ ಅಳತೆ ಫೋಟೊಗಳು ಹಾಗೂ 2 ಚಿಕ್ಕ ಡೈರಿಗಳು ಸಿಕ್ಕಿವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಬೆಂಗಳೂರು ನಗರದ ನಕ್ಷೆ, ಅಮೋಲ್ ಕಾಳೆ ಹೆಸರಿನಲ್ಲಿರುವ ಚಾಲನಾ ಪರವಾನಗಿ ಪತ್ರ, ಅದರ ಜೆರಾಕ್ಸ್‌ ಪ್ರತಿಗಳು ಸಹ ಆರೋಪಿಗಳ ಬಳಿ ಸಿಕ್ಕಿವೆ’ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.