ADVERTISEMENT

ಯುವಕರ ಮದುವೆಗೆ ‘ಕಾಳಿ’ ಅಡ್ಡಿ!

ಕಾರವಾರ ತಾಲ್ಲೂಕಿನ ವೈಲವಾಡ ಗ್ರಾಮ ಪಂಚಾಯ್ತಿಯ ಉಮ್ಮಳೆಜೂಗ ದ್ವೀಪ

ಸದಾಶಿವ ಎಂ.ಎಸ್‌.
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ಉಮ್ಮಳೆಜೂಗ ದ್ವೀಪದಿಂದ ಶಾಲಾ ವಿದ್ಯಾರ್ಥಿನಿಯನ್ನು ಪೋಷಕರೊಬ್ಬರು ದೋಣಿಯಲ್ಲಿ ಕರೆದುಕೊಂಡು ಬರುತ್ತಿರುವುದು
ಉಮ್ಮಳೆಜೂಗ ದ್ವೀಪದಿಂದ ಶಾಲಾ ವಿದ್ಯಾರ್ಥಿನಿಯನ್ನು ಪೋಷಕರೊಬ್ಬರು ದೋಣಿಯಲ್ಲಿ ಕರೆದುಕೊಂಡು ಬರುತ್ತಿರುವುದು   

ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮ್ಮಳೆಜೂಗ ದ್ವೀಪದ ನಿವಾಸಿಗಳಲ್ಲಿ ಹಲವು ಯುವಕರಿಗೆ ಮದುವೆಯೇ ಆಗಿಲ್ಲ. ವೈವಾಹಿಕ ಬದುಕಿನ ಕನಸು ಕಾಣುತ್ತಿರುವ ಅವರಿಗೆ ಕಾಳಿ ನದಿಯೇ ಶತ್ರುವಾಗಿದೆ!

‘ಸಣ್ಣ ಸಣ್ಣ ದೋಣಿಗಳಲ್ಲಿ ಕುಳಿತು, ಜೀವ ಕೈಯಲ್ಲಿ ಹಿಡಿದುಕೊಂಡು ನದಿಯನ್ನು ದಾಟಬೇಕು. ಇಲ್ಲಿನ ಯುವಕರ ಮದುವೆ ಸಂಬಂಧಗಳ ಪ್ರಸ್ತಾವಕ್ಕೆ ಹೆಣ್ಣಿನ ಮನೆಯವರು ಆರಂಭದಲ್ಲಿ ಒಪ್ಪಿಗೆ ನೀಡುತ್ತಾರೆ. ಆದರೆ, ಹುಡುಗನ ಮನೆ ನೋಡಲು ಬಂದ ಮೇಲೆ ನಿರಾಕರಿಸುತ್ತಾರೆ. ನದಿ ದಾಟಿದ ಬಳಿಕ ಮೊಣಕಾಲುದ್ದದ ಕೆಸರು ತುಂಬಿದ ರಸ್ತೆಯನ್ನು ದಾಟಿ ಊರು ಸೇರಬೇಕು. ಈ ಕಾರಣಗಳಿಂದ ಸಂಬಂಧ ಬೆಳೆಸುವವರು ಇಲ್ಲಿಗೆ ಬರಲು ಒಪ್ಪುವುದೇ ಇಲ್ಲ’ ಎನ್ನುತ್ತಾರೆ ಯುವಕರೊಬ್ಬರ ಸಂಬಂಧಿ ಶರದ್ ತಾಮ್ಸೆ.

‘30 ವರ್ಷ ದಾಟಿದರೂ ಮದುವೆಯಾಗದ ಕಾರಣ ಕೆಲವರು ಉದ್ಯೋಗದ ನೆಪದಲ್ಲಿ ದೂರದ ಊರುಗಳಲ್ಲಿ ನೆಲೆಸಿದ್ದಾರೆ. ಊರಿನ ಅವ್ಯವಸ್ಥೆಯಿಂದ ಬೇಸತ್ತು ಅವರು ಬರುವುದನ್ನೇ ಕಡಿಮೆ ಮಾಡಿದ್ದಾರೆ. ಆದರೂ, ಇವರಿಗೂ ಹೆಣ್ಣು ಕೊಡುತ್ತಿಲ್ಲ. ದ್ವೀಪದಲ್ಲಿ ವಾಸ ಮಾಡುವುದು ಅನಿವಾರ್ಯ ಎಂದುಕೊಂಡವರು ಮಾತ್ರ ಇದ್ದಾರೆ’ ಎನ್ನುತ್ತಾರೆ ಅವರು.

ADVERTISEMENT

ಅಂದಾಜು 45 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿರುವ 25 ಮನೆಗಳಲ್ಲಿ 100ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಭತ್ತ, ತೆಂಗು ಬೆಳೆಯುತ್ತಾರೆ. ಇಲ್ಲಿಗೆ ಸಿದ್ದರ ಗ್ರಾಮದ ರಸ್ತೆಯ ಮೂಲಕ ನಯಾವಾಡದಿಂದ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಅದು ಸಾಧ್ಯವಿಲ್ಲದಿದ್ದರೆ ತೂಗುಸೇತುವೆಯಾದರೂ ಆಗಬೇಕು ಎಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ.

ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ನೇರವಾಗಿ ಸುಮಾರು 150 ಮೀಟರ್ ಅಂತರವಿದೆ. ಆದರೆ, ಅಲ್ಲಿ ನೀರಿನ ಸೆಳೆತ ಹೆಚ್ಚಿರುವ ಕಾರಣ ಬಹುತೇಕರು ಸುತ್ತಿ ಬಳಸಿ ಒಂದು ಕಿ.ಮೀ ದೂರ ದೋಣಿಯಲ್ಲಿ ಪ್ರಯಾಣಿಸಿ ದಡ ಸೇರುತ್ತಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ವೈಲವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ವಿನೋದ್ ನಾಯ್ಕ, ‘ಸೇತುವೆ ನಿರ್ಮಿಸುವಂತೆ ಕಳೆದ ಜುಲೈನಲ್ಲಿ ಜಿಲ್ಲಾಧಿಕಾರಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವ ಬೆಳವಣಿಗೆಯೂ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸ್ಕೂಲ್‌ ಬ್ಯಾಗ್‌ ಜತೆ ದೋಣಿ ಸವಾರಿ

ದ್ವೀಪದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು 1999ರಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚಲಾಯಿತು. ಅಪಾಯಕಾರಿ ದಾರಿಯಲ್ಲಿ ದಿನವೂ ಬರಲು ಶಿಕ್ಷಕರು ಒಪ್ಪುತ್ತಿರಲಿಲ್ಲ. ಇದರ ಪರಿಣಾಮ ಬೋಧನೆಯ ಮೇಲಾಗಿ, ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಯಿತು. ಈಗ ಎಲ್ಲ ಮಕ್ಕಳೂ ಹೊರಗಿನ ಶಾಲೆಗಳಿಗೇ ಹೋಗಬೇಕು.

‘ನನ್ನ ಮಗಳು ಸಿದ್ದರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ. ಅವಳನ್ನು ಶಾಲೆಗೆ ಕಳುಹಿಸಲು, ಮನೆಗೆ ಕರೆದುಕೊಂಡು ಬರಲು ನಾನು ದೋಣಿ ನಡೆಸಿಕೊಂಡು ಬರಲೇಬೇಕು’ ಎನ್ನುತ್ತಾರೆ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಸ್ಥಳೀಯ ನಿವಾಸಿ ಸಂದೀಪ್ ತಾಮ್ಸೆ. ದ್ವೀಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ದಿನಸಿ ಅಂಗಡಿ, ಅಂಚೆ ಕಚೇರಿ ಮುಂತಾದ ಯಾವುದೇ ಸೌಕರ್ಯಗಳಿಲ್ಲ ಎಂದೂ ಹೇಳಿದರು.

ಸುಮಾರು 45 ಎಕರೆ ವಿಸ್ತೀರ್ಣದ ದ್ವೀಪ

25 ಮನೆಗಳಲ್ಲಿ 100ಕ್ಕೂ ಅಧಿಕ ಜನರ ವಾಸ

ಕಾರವಾರದಿಂದ 20 ಕಿ.ಮೀ ದೂರದ ಕುಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.