ADVERTISEMENT

ಯುವಜನೋತ್ಸವಕ್ಕೆ ಜನ ಪ್ರವಾಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಮಂಗಳೂರು: ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವದ ಸ್ಪರ್ಧಾ ಕಾರ್ಯಕ್ರಮಗಳು ಶುಕ್ರವಾರ ಆರಂಭವಾಗಿವೆ.  ಸ್ಪರ್ಧೆಗಳನ್ನು ನೋಡಲು ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸ್ಪರ್ಧಿಗಳೂ ಉತ್ಸಾಹದಿಂದ ಪಾಲ್ಗೊಂಡಿದ್ದು, ಯುವಜನೋತ್ಸವದ ಸಂಭ್ರಮ ಎರಡನೇ ದಿನ ದ್ವಿಗುಣಗೊಂಡಿತು.

ವಿವಿಧ ರಾಜ್ಯಗಳ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ `ಫುಡ್ ಕೋರ್ಟ್~ ಮತ್ತು ಕರಕುಶಲ ಸಾಮಗ್ರಿಗಳ ಪ್ರದರ್ಶನ-ಮಾರಾಟದ `ಯುವಕೃತಿ~ ವಿಭಾಗ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆದಿದೆ.

ಒಟ್ಟು ಆರು ಕಡೆಗಳಲ್ಲಿ ಶುಕ್ರವಾರ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಈ ಪೈಕಿ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆ ನೋಡಲು ಜನ ಕಿಕ್ಕಿರಿದಿದ್ದರು. ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣ ಸಹಿತ ಇತರೆಡೆ ನಡೆದ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ವಿವಿಧ ಸಂಗೀತ ವಾದ್ಯಗಳ ವಾದನ ಸ್ಪರ್ಧೆಗಳನ್ನು ನೊಡಲು ವಿದ್ಯಾರ್ಥಿಗಳೂ ಆಗಮಿಸಿದ್ದು ವಿಶೇಷವಾಗಿತ್ತು.

ADVERTISEMENT

ಯಾವುದೇ ಸ್ಪರ್ಧಾ ಸ್ಥಳದಲ್ಲಿ ಗದ್ದಲವಾಗಲೀ, ವಿವಾದವಾಗಲೀ ಕೇಳಿಬರಲಿಲ್ಲ. ಯುವಜನೋತ್ಸವಕ್ಕೆ ಒಟ್ಟು 5774 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ  ಯುವ ಸ್ಪರ್ಧಿಗಳ ಸಂಖ್ಯೆ 3 ಸಾವಿರದಷ್ಟಿದೆ. ಸಂಜೆ ಮಂಗಳ ಕ್ರೀಡಾಂಗಣದಲ್ಲಿ ಹರಿಹರನ್ ಮತ್ತು ಲೆಸ್ಲಿ ಲೂಯಿಸ್ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

ಸಾಹಸ-ನಿರುತ್ಸಾಹ: ಆದರೆ ಜಲಸಾಹಸ ಕ್ರೀಡೆಗಳ ಬಗ್ಗೆ ಮಾತ್ರ ಯುವ ಕಲಾವಿದರಲ್ಲಿ ಅಂತಹ ಉತ್ಸಾಹ ಕಂಡುಬರಲಿಲ್ಲ. ಶುಕ್ರವಾರ ಸ್ಪರ್ಧೆಗಳು ಇಲ್ಲದವರು ಸಂಜೆ ಹೊತ್ತು ಪಣಂಬೂರು ಕಡಲ ತೀರದತ್ತ ತೆರಳಿದ್ದು ಕಂಡುಬಂತು. ಊಟ, ವಸತಿ ಬಗ್ಗೆ ಬಹುತೇಕ ಪ್ರತಿನಿಧಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಕಡಲತಡಿಯ ನಗರ ರಾತ್ರಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದರೆ, ಮಂಗಳಾ ಕ್ರೀಡಾಂಗಣದಲ್ಲಿ ಹರಿಹರನ್ ಸಂಗೀತ ಗಾಯನ ಸುಧೆ ಕಲಾರಸಿಕರನ್ನು ಗಂಟೆಗಳ ಕಾಲ ಹಿಡಿದಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.