ADVERTISEMENT

ಯುವತಿಯರ ಮೇಲೆ ಅಮಾನವೀಯ ಹಲ್ಲೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 16:10 IST
Last Updated 28 ಜುಲೈ 2012, 16:10 IST
ಯುವತಿಯರ ಮೇಲೆ ಅಮಾನವೀಯ ಹಲ್ಲೆ
ಯುವತಿಯರ ಮೇಲೆ ಅಮಾನವೀಯ ಹಲ್ಲೆ   

ಮಂಗಳೂರು: ನಗರದ ಹೊರವಲಯದ ಪಡೀಲ್ ಬಡ್ಲಗುಡ್ಡೆಯಲ್ಲಿರುವ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇ ಮೇಲೆ ದಾಳಿ ನಡೆಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಅಲ್ಲಿದ್ದ ನಾಲ್ವರು ಹುಡುಗಿಯರ ಸಹಿತ 12 ಮಂದಿ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಪೊಲೀಸರು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಪಡೀಲ್, ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹ ಸಂಚಾಲಕ ಸುಭಾಸ್ ಸಹಿತ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 

`ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ~ಗೆ ಹಿಂದು ಜಾಗರಣ ವೇದಿಕೆಯವರು ದಾಳಿ ನಡೆಸುವ ವೇಳೆ ನಾಲ್ವರು ಯುವತಿಯರು ಹಾಗೂ ಎಂಟು ಪುರುಷರು ಇದ್ದರು.  ಮಹಿಳೆಯರು ಎನ್ನುವ ಕನಿಕರವನ್ನೂ ತೋರಿಸದೆ ಸಂಘಟನೆಯ ಕಾರ್ಯಕರ್ತರು ಅವರನ್ನು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆ ವೇಳೆ ಕೆಲವು ಮಹಿಳೆಯರ ಬಟ್ಟೆ ಹರಿದುಹೋಗಿದೆ. ದಾಳಿ ಮಾಡುವಾಗ ಎರಡು ಟೀವಿ ವಾಹಿನಿಗಳ ವರದಿಗಾರರನ್ನೂ ದುಷ್ಕರ್ಮಿಗಳು ಕರೆದುಕೊಂಡು ಹೋಗಿದ್ದರು.

ರಾತ್ರಿ 7 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಸುಮಾರು ಎರಡು ತಾಸಿನ ಬಳಿಕ ಹೋಂ ಸ್ಟೇನಲ್ಲಿದ್ದ ಮಹಿಳೆಯರು ಹಾಗೂ ಪುರುಷರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.

`ಇಲ್ಲಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದೆವು. ಅಷ್ಟರಲ್ಲೇ ನಮ್ಮ ಮೇಳೆ ದಾಳಿ ನಡೆಯಿತು. ನಾವು ರೇವ್ ಪಾರ್ಟಿ ನಡೆಸುತ್ತಿರಲಿಲ್ಲ~ ಎಂದು ಹಲ್ಲೆಗೊಳಗಾದವರು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಪ್ರತಿಭಟನೆ: ಘಟನೆ ನಡೆಯುವಾಗ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ. ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಪಾಲಿಕೆ ಸದಸ್ಯ ಮೋಹನ್ ಪಡೀಲ್ ನೇತೃತ್ವದಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಗುಂಪು, `ಹೋಂ ಸ್ಟೇ ಹೆಸರಿನಲ್ಲಿ ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ.
 
ಈ ಬಾರಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಹಿಂದು ಜಾಗರಣ ವೇದಿಕೆ ಹಿಡಿದುಕೊಟ್ಟಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿತು. ಪೊಲೀಸರು ಗುಂಪನ್ನು ಚದುರಿಸಿದರು.

ಘಟನೆ ನಡೆದ ಸ್ಥಳಕ್ಕಾಗಮಿಸಿದ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು, ಸ್ಥಳದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದುದನ್ನು ನಿರಾಕರಿಸಿದ್ದಾರೆ.

`ನಮಗೆ ಈಗಷ್ಟೇ ವಿಷಯ ತಿಳಿದಿದೆ. ಸಮಗ್ರ ಮಾಹಿತಿ ಇನ್ನಷ್ಟೇ ಕಲೆ ಹಾಕುತ್ತಿದ್ದೇವೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಅದು ಬಿಟ್ಟು ಕಾನೂನು ಕೈಯಲ್ಲಿ ತೆಗೆದುಕೊಂಡು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು ಸರಿಯಲ್ಲ. ಮಾಧ್ಯಮದವರು ಮಹಿಳೆ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡುವ ಬದಲು ಅವರನ್ನು ರಕ್ಷಿಸಬೇಕಿತ್ತು. ಕನಿಷ್ಠ ಪಕ್ಷ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು~ ಎಂದರು. 

ಅನೈತಿಕ ಚಟುವಟಿಕೆ ಗೊತ್ತಿಲ್ಲ: `ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ~ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಮೂರು ನಾಲ್ಕು ತಿಂಗಳ ಹಿಂದೆ ಧ್ವನಿವರ್ಧಕಗಳನ್ನು ಬಳಸಿ ಅಕ್ಕ ಪಕ್ಕದವರಿಗೆ ಕಿರಕಿರಿ ಆಗುವ ರೀತಿ ಕೆಲವು ಬರ್ತ್ ಡೇ ಪಾರ್ಟಿ, ವಾರಾಂತ್ಯ ಪಾರ್ಟಿ, ಮದುವೆ ಔತಣಕೂಟಗಳು ನಡೆಯುತ್ತಿದ್ದವು. ಈ ಬಗ್ಗೆ ಸ್ಥಳೀಯ ಶಾಂತಿನಗರ-ಬಡ್ಲಗುಡ್ಡ ನಿವಾಸಿಗಳ ಒಕ್ಕೂಟದವರು `ಹೋಂ ಸ್ಟೇ~ಗೆ ಸಂಬಂಧಿಸಿದವರ ಬಳಿ ತೆರಳಿ ಧ್ವನಿ ವರ್ಧಕ ಬಳಸದಂತೆ ಮನವಿ ಮಾಡಿದ್ದೆವು.

ಆ ಬಳಿಕ ಧ್ವನಿವರ್ಧಕದ ಹಾವಳಿ ಇರಲಿಲ್ಲ. `ಹೋಂ ಸ್ಟೇ~ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತೊ ಇಲ್ಲವೋ ನಮಗೆ ಗೊತ್ತಿಲ್ಲ~ ಎಂದು ` ಹೋಂ ಸ್ಟೇ~ ಪಕ್ಕದ ನಿವಾಸಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. ಈ ಹೋಂ ಸ್ಟೇ ಲೊರೆಟ್ಟೊ ರೆಬೆಲ್ಲೊ ಎಂಬುವವರಿಗೆ ಸೇರಿದ್ದೆನ್ನಲಾಗಿದೆ.

ಪೊಲೀಸರಿಗೇ ಧಮಕಿ: ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದ ಯುವತಿಯರನ್ನು ಕೋಣೆಗೆ ಕರೆದೊಯ್ದು ರಕ್ಷಣೆ ನೀಡಿದ್ದಕ್ಕೆ ಹಲ್ಲೆ ನಡೆಸಿದ ಗುಂಪು ಆಕ್ಷೇಪ ವ್ಯಕ್ತಪಡಿಸಿತು. ಹಲ್ಲೆ ನಡೆಸಿದವರು ತಮ್ಮ ವಿರುದ್ಧ ಅವಾಚ್ಯವಾಗಿ ಬಯ್ಯುತ್ತಿದ್ದರೂ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಅಸಹಾಯಕರಾಗಿ ನೋಡಬೇಕಾಯಿತು.

ಸ್ಥಳದಲ್ಲಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಹಾಗೂ ಇನ್‌ಸ್ಪೆಕ್ಟರ್ ವಿರುದ್ಧವೂ ಅವಾಚ್ಯ ಶಬ್ದವನ್ನು ಪ್ರಯೋಗಿಸಿದ್ದರು. ಪೊಲೀಸ್ ಆಯುಕ್ತರು ಹೆಚ್ಚಿನ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಬಳಿಕವಷ್ಟೇ ದಾಳಿ ನಡೆಸಿದವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಮಾಧ್ಯಮದವರ ವಿರುದ್ಧವೂ ಪ್ರಕರಣ?: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೆಲವು ಟಿ.ವಿ ಚಾನೆಲ್‌ಗಳ ವರದಿಗಾರರನ್ನೂ ಕರೆದೊಯ್ದಿದ್ದರು ಎನ್ನಲಾಗಿದೆ.

ಮಾಧ್ಯಮದವರು ಪೊಲೀಸರಿಗೆ ಮಾಹಿತಿ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಗರ ಪೊಲೀಸ್ ಆಯುಕ್ತರು, `ಮಾಧ್ಯಮದವರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಯುವತಿಯರ ವಿರುದ್ಧ ದಾಳಿಯಾಗುವಾಗ ಅವರ ರಕ್ಷಣೆಗೆ ಧಾವಿಸುವ ಬದಲು ಶೂಟಿಂಗ್ ನಡೆಸುತ್ತಿದ್ದುದು ಸರಿಯಲ್ಲ~ ಎಂದರು. ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಮಾಧ್ಯಮದವರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರು ಸ್ಥಳದಲ್ಲಿದ್ದ ಗ್ರಾಮಾಂತರ ಠಾಣೆಯ ಪೊಲೀಸ್‌ಅಧಿಕಾರಿಗಳಿಗೆ  ಸೂಚಿಸಿದರು.

ಮಹಿಳೆಯರನ್ನು ಛೂಬಿಟ್ಟರು: ದಾಳಿ ನಡೆಸಿದ್ದಕ್ಕಾಗಿ ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ದಾಳಿ ನಡೆಸಿದವರು ಸ್ಥಳೀಯ ನಾಲ್ಕೈದು ಮಂದಿ ಮಹಿಳೆಯರನ್ನು ಹೋಂ ಸ್ಟೇ ಬಳಿಗೆ ಕರೆತಂದು ಪ್ರತಿಭಟನೆ ನಡೆಸಿದರು. 

`ಹೋಂ ಸ್ಟೇ ಹೆಸರಿನಲ್ಲಿ ಇಲ್ಲಿ ನಿರಂತರವಾಗಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಮಾನವಂತರು ಇಲ್ಲಿ ಬದುಕಲು ಸಾಧ್ಯವಿಲ್ಲ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ~ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದರು. ಅವರ ಅಹವಾಲು ಆಲಿಸಿದ ಪೊಲೀಸರು ಅವರನ್ನು ಹೋಂ ಸ್ಟೇ ಆವರಣದಿಂದ ಹೊರಕ್ಕೆ ಕಳುಹಿಸಿದರು. ಈ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರತಿಭಟನೆ: `ಹೋಂ ಸ್ಟೇ~ನಲ್ಲಿ ಇದ್ದ ವಿದ್ಯಾರ್ಥಿಗಳನ್ನು ನಗರದ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯ್‌ಲಾಗಿದೆ. ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೆ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಎದುರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಮರುಕಳಿಸಿದ ದಾಳಿ: ಈ ಹಿಂದೆ 2009ರ ಜನವರಿ 24ರಂದು ನಗರದ ಪಬ್ ಒಂದರ ಮೇಲೆ ಇದೇ ರೀತಿ ದಾಳಿ ನಡೆದಿತ್ತು. ಇದಾದ ನಂತರ 2011ರ ಆಗಸ್ಟ್ 14ರಂದು ಉಳ್ಳಾಲದಲ್ಲಿ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ದಾಳಿ ಕುರಿತು ಪ್ರತಿಕ್ರಿಯೆಗಳು:

ಬೆಂಗಳೂರು: ಮಂಗಳೂರಿನ ಪಡೀಲ್‌ನಲ್ಲಿ ಯುವಕ ಯುವತಿಯರ ಮೇಲೆ ನಡೆದ ಘಟನೆಯ ಬಗ್ಗೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾಡಿನ ಲೇಖಕಿಯರು, ಸಾಹಿತಿಗಳು, ಮಹಿಳಾ ಸಂಘಟನೆಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

`ಸರ್ಕಾರ ಇದೆಯೇ ಎಂಬುದು ಅನುಮಾನ~
`ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯುತ್ತಿಲ್ಲ. ಈ ಘಟನೆಯಿಂದ ಆಘಾತವಾಗಿದೆ. ನಾವಿರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲೇ ಅಥವಾ ಗೂಂಡಾ ವ್ಯವಸ್ಥೆಯಲ್ಲೋ ತಿಳಿಯುತ್ತಿಲ್ಲ. ಈ ಹಿಂದೆಯೂ ಮಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಈಗ ಇಂಥ ಮತ್ತೊಂದು ಘಟನೆ ನಡೆದಿರುವುದು ಅಮಾನವೀಯ. ಇದೆಲ್ಲವನ್ನೂ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡುತ್ತಿದೆ~
 -ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ

`ಸಂವಿಧಾನ ಕೊಲ್ಲುವ ಯತ್ನ~
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬುದು ಈ ದಾಳಿಯಿಂದ ಸಾಬೀತಾಗಿದೆ. ಲಿಂಗ ಸಮಾನತೆಯನ್ನು ಸಾರುವ ಭಾರತದ ಸಂವಿಧಾನವನ್ನು ಕೊಲ್ಲುವ ಪ್ರಯತ್ನ ಇದು. ಮಹಿಳೆ ಸಂಜೆ ಮೇಲೆ ಎಲ್ಲೂ ಹೋಗಬಾರದು ಎಂದು ಹೇಳಲು ಇವರಾರು. ನಡತೆ ನಿಯಂತ್ರಣ ಯುವಕರ ಕುಟುಂಬ, ಪೊಲೀಸ್ ಹಾಗೂ ಕಾನೂನಿಗೆ ಸಂಬಂಧಿಸಿದ್ದು. ಇದನ್ನು ಪ್ರಶ್ನಿಸುವ ಹಕ್ಕು ಹಿಂದೂ ಸಂಘಟನೆಗೆ ಇಲ್ಲ.
 - ಸಾರಾ ಅಬೂಬಕ್ಕರ್, ಸಾಹಿತಿ

`ತಲೆ ತಗ್ಗಿಸುವ ಘಟನೆ~
`ಒಂದೆಡೆ ಪಾರ್ಟಿಗಳಲ್ಲಿ ಭಾಗವಹಿಸುವ ಅವಶ್ಯಕತೆಯಿದೆಯೇ ಎಂಬ ಪ್ರಶ್ನೆಯೊಂದಿಗೆ ಈ ರೀತಿಯ ದೌರ್ಜನ್ಯ ನಡೆಸುವುದು ಎಷ್ಟು ಸರಿ? ಎಂಬ ವಿಚಾರವನ್ನು ಚರ್ಚಿಸಬೇಕಿದೆ. ಹೊಡೆದು ಬಡಿದು ಸಂಸ್ಕೃತಿಯನ್ನು ಕಲಿಸಲು ಸಾಧ್ಯವೇ? ವಿಕೃತ ಮನಸ್ಸುಗಳು ಮಾತ್ರ ಈ ರೀತಿಯ ದಾಳಿ ನಡೆಸಲು ಸಾಧ್ಯ. ಒಟ್ಟು ಘಟನೆಯೇ ಮನುಷ್ಯರು ತಲೆತಗ್ಗಿಸುವಂಥದ್ದು~
      - ವೈದೇಹಿ, ಲೇಖಕಿ

`ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು~
`ಘಟನೆ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ತರಿಸಿಕೊಂಡಿದ್ದೇನೆ. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಹುಡುಗ-ಹುಡುಗಿಯರು ಅಶ್ಲೀಲವಾಗಿ ವರ್ತಿಸುತ್ತಿದ್ದರೆ ಅದು ತಪ್ಪು. ಅಕ್ರಮವಾಗಿ ರೇವ್ ಪಾರ್ಟಿ ನಡೆಸುವುದೂ ತಪ್ಪು.
 
ಆದರೆ ಅಕ್ರಮ ನಡೆಯುತ್ತಿರುವ ಕುರಿತು ಮಾಹಿತಿ ಇದ್ದರೆ, ಪೊಲೀಸರಿಗೆ ವಿಷಯ ತಿಳಿಸಬೇಕಿತ್ತು. ಕಾನೂನು ಕೈಗೆತ್ತಿಕೊಂಡಿದ್ದು ಖಂಡಿತ ಸರಿಯಲ್ಲ. ಹುಡುಗ-ಹುಡುಗಿಯರ ಮೇಲೆ ನಡೆದ ಹಲ್ಲೆ ಹಾಗೂ ಅಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತೇ ಎಂಬ ಕುರಿತು ತನಿಖೆ ನಡೆಸಲಾಗುವುದು. ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಜರುಗಿಸುತ್ತಾರೆ.~
 - ಸಿ.ಟಿ. ರವಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ.

ಕಠಿಣ ಕ್ರಮ
ರೇವ್ ಪಾರ್ಟಿ ಹೆಸರಿನಲ್ಲಿ ಯುವಕ- ಯುವತಿಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅವರನ್ನು ತಕ್ಷಣವೇ ಬಂಧಿಸಲು ಪೊಲೀಸರಿಗೆ ಸೂಚಿಸಲಾಗಿದೆ.

ಪಾರ್ಟಿ ನಡೆಸುವುದಕ್ಕೆ ಪರವಾನಗಿ ಪಡೆದಿದ್ದರೋ ಅಥವಾ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ, ಕಾನೂನನ್ನು ಕೈಗೆತ್ತಿಕೊಂಡು, ಹಲ್ಲೆ ಮಾಡಿದ್ದು ಸರಿಯಲ್ಲ. ಮಂಗಳೂರಿನಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ತಡೆಯಲು ವಿಶೇಷ ಗಮನ ನೀಡಲಾಗುವುದು.
 - ಆರ್.ಅಶೋಕ, ಉಪ ಮುಖ್ಯಮಂತ್ರಿ (ಗೃಹ)

`ನೈತಿಕ ಪೊಲೀಸಿಂಗ್ ಅಲ್ಲ ಗೂಂಡಾಗಿರಿ~
ನೈತಿಕ ಪೊಲೀಸ್ ಹೆಸರಲ್ಲಿ ಹಿಂದೂ ಸಂಘಟನೆಗಳು ಮಾಡುತ್ತಿರುವ ಗೂಂಡಾಗಿರಿಯಿದು. ಪೊಲೀಸರ ಮೂಲಕ, ನ್ಯಾಯಾಂಗದ ಸಹಾಯದಿಂದ ಅಪರಾಧ ತಡೆಗಟ್ಟಲಿ. ಕರಾವಳಿಯಲ್ಲಿ ಸಂವಿಧಾನವೇ ಇಲ್ಲ ಎಂಬುದು ಈ ರೀತಿಯ ಘಟನೆಗಳಿಂದ ಸಾಬೀತಾಗುತ್ತಿದೆ. ಸರ್ಕಾರದ ನೆರಳಲ್ಲಿ ನಡೆಯುತ್ತಿರುವ ವ್ಯವಸ್ಥಿತ ಸಂಚಿದು.
 - ಡಾ. ಪಟ್ಟಾಭಿರಾಮ ಸೋಮಯಾಜಿ, ಚಿಂತಕ

`ಹತಾಶ ಮನಸ್ಥಿತಿ ಸೂಚಕ~
ಈ ಘಟನೆ ಹಿಂದೂ ಸಂಘಟನೆಗಳ ಹತಾಶ ಮನಸ್ಥಿತಿಯ ಸೂಚಕವಾಗಿದೆ. ಒಟ್ಟು ಮಹಿಳಾ ಸಮುದಾಯಕ್ಕಾದ ಅವಮಾನವಿದು. ಎಲ್ಲ ಮಹಿಳೆಯರೂ ಒಟ್ಟಾಗಿ ಇದನ್ನು ಖಂಡಿಸಬೇಕು. ಕೊಳಕು ರಾಜಕೀಯ ಪರಿಸ್ಥಿತಿ ತಾರಕಕ್ಕೆ ಏರಿರುವ ಸಾಕ್ಷ್ಯವೂ ಇದಾಗಿದೆ.
 - ಡಾ. ಸಬೀಹಾ ಭೂಮಿಗೌಡ, ಸಾಹಿತಿ

`ಗೂಂಡಾ ಕಾಯಿದೆ ಅಡಿ ಬಂಧಿಸಲಿ~
ಈ ಹಿಂದಿನ ಪಬ್ ದಾಳಿ ಸಮಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ದಾಳಿಕೋರರ ಮೇಲೆ ಗೂಂಡಾ ಕಾಯಿದೆ ಅನ್ವಯ ಬಂಧಿಸುವುದಾಗಿ ಹುಸಿ ಆಶ್ವಾಸನೆ ನೀಡಿ ವಿಫಲವಾಗಿದೆ. ದಾಳಿ ಮಾಡಿದವರನ್ನು ಬಂಧಿಸಿದರೆ ಸಾಲದು. ಅವರನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು. ಸರ್ಕಾರ ನೈತಿಕ ಹೊಣೆ ಹೊತ್ತು ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಿ.
 - ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ಮುಖಂಡ

`ಜಿಲ್ಲಾಡಳಿತವೇ ಹೊಣೆ ಹೊರಬೇಕು~
`ಮಂಗಳೂರಿನ ಪಾರ್ಟಿಯಲ್ಲಿ ನಡೆದ ಘಟನೆಯನ್ನು ಮಹಿಳಾ ಆಯೋಗ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಗೆ ಜಿಲ್ಲಾಡಳಿತವೇ ಹೊಣೆ ಹೊರಬೇಕು. ಈ ಭಾಗದಲ್ಲಿ ಜಿಲ್ಲಾಡಳಿತ ನಿಷ್ಕ್ರಿಯಗೊಂಡಿದೆ ಎಂಬುದು ಮತ್ತೊಮ್ಮೆ ಇಂತಹ ಘಟನೆಯಿಂದ ಸಾಬೀತುಗೊಂಡಿದೆ.
 
ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ವಿಶೇಷ ದಳವನ್ನು ರೂಪಿಸಿದೆ. ಪಾರ್ಟಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಅದರ ವಿರುದ್ದ ಕ್ರಮ ತೆಗೆದುಕೊಳ್ಳದೇ ಇರುವುದು ಜಿಲ್ಲಾಡಳಿತದ ವೈಫಲ್ಯ. ಈ ವಿಚಾರದಲ್ಲಿ ಕಾನೂನನ್ನು ಕೈಗೆತ್ತುಕೊಳ್ಳುವವರನ್ನು ಕೂಡಲೇ ಬಂಧಿಸಬೇಕು~
 - ಸಿ. ಮಂಜುಳಾ, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

`ಮೃಗೀಯ ಘಟನೆ~
`ಸದನದಲ್ಲಿ ಬ್ಲೂ ಫಿಲ್ಮ್ ನೋಡಿದವರ ಮೇಲೆ ಯಾವುದೇ ಹಲ್ಲೆ ಮಾಡದ ಈ ಸಂಘಟನೆಯವರು ಈಗ ಸಂಸ್ಕೃತಿ ಉಳಿಸುವ ಹೆಸರಲ್ಲಿ ಈ ಹಲ್ಲೆ ನಡೆಸಿರುವುದು ಸರಿಯಲ್ಲ. ದಾಳಿ ಮಾಡಿದ ಸಂಘಟನೆಯ ಗೂಂಡಾಗಳ ಸ್ವೇಚ್ಛಾಚಾರಕ್ಕೆ ಅವಕಾಶ ಮಾಡಿಕೊಟ್ಟ ಅಲ್ಲಿನ ಪೊಲೀಸರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು. ನಿಜಕ್ಕೂ ಇದೊಂದು ಮೃಗೀಯ ಘಟನೆ~
 -ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಹಿರಿಯ ಸಾಹಿತಿ

`ನಾಗರಿಕ ಸಮಾಜ ತಲೆತಗ್ಗಿಸುವಂತದ್ದು~
`ಈ ಘಟನೆ ಒಟ್ಟು ನಾಗರಿಕ ಸಮಾಜವೇ ತಲೆತಗ್ಗಿಸುವಂತದ್ದು. ಪಾರ್ಟಿಯಲ್ಲಿ ಭಾಗವಹಿಸುವವರ ಸರಿ ತಪ್ಪಿನ ಬಗ್ಗೆ ವಿಚಾರಿಸುವ ಕ್ರಮವೇ ಬೇರೆಯಿದೆ. ಒಂದು ಸಮುದಾಯದ ಸಾಮಾಜಿಕ ನೆಲೆ ಸೇರಿದಂತೆ ಯಾವುದೇ ದೃಷ್ಟಿಕೋನದಿಂದಲೂ ಈ ಘಟನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಮೂಲಭೂತ ವಾದವು ರುದ್ರ ನರ್ತನ ಮಾಡುತ್ತಿರುವಂತೆ ಕಾಣಿಸುತ್ತಿದೆ~
 - ಡಾ.ಎಂ.ಎಸ್. ಆಶಾದೇವಿ, ವಿಮರ್ಶಕಿ

`ಕ್ರೌರ್ಯ ಮೆರೆದಿದ್ದಾರೆ~
`ನನಗೆ ಬಂದ ಮಾಹಿತಿಯ ಪ್ರಕಾರ ಆ ಯುವಕ ಯುವತಿಯರು ಹುಟ್ಟುಹಬ್ಬದ ಪಾರ್ಟಿಗೆ ಸಿದ್ಧಮಾಡಿಕೊಂಡಿದ್ದರು. ಮಂಗಳೂರಿನ ಕೆಲವೆಡೆ ಮನೆ ಹಾಗೂ ರೆಸಾರ್ಟ್‌ಗಳಲ್ಲಿ ಪಾರ್ಟಿ ಮಾಡಲು ಅವಕಾಶ ನೀಡಲಾಗುತ್ತಿದೆ. ಸಂಭ್ರಮದಲ್ಲಿದ್ದ ಯುವತಿಯರನ್ನು ಬೆಡ್‌ರೂಂಗೆ ಬಲವಂತವಾಗಿ ತಳ್ಳಲಾಗಿದೆ. ಆ ನಂತರ ಮನಬಂದಂತೆ ಹೊಡೆಯುವ ಮೂಲಕ ಹಿಂದೂ ಜಾಗರಣ ವೇದಿಕೆಯ ಪುಂಡರು ಕ್ರೌರ್ಯ ಮೆರೆದಿದ್ದಾರೆ.

ಹಗರಣಗಳಿಂದಲೇ ಜನಪ್ರಿಯಗೊಂಡ ಬಿಜೆಪಿ ಸರ್ಕಾರ ಜನರ ಗಮನ ಸೆಳೆಯಲು ಸಂಘ ಪರಿವಾರದಿಂದ ಇಂತಹ ಕಾರ್ಯವನ್ನು ನಡೆಸುತ್ತಿದೆ. ತಪ್ಪು ಸರಿಯ ಪ್ರಶ್ನೆ ಆಮೇಲೆ. ಆದರೆ ಒಂದು ಹೆಣ್ಣಿನ ಮೇಲೆ ಕೈಹಾಕಿ ಹಿಂಸಿಸುವ ಮೂಲಕ ಕಾಮುಕರಿಗಿಂತಲೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿದ್ದಾರೆ. ಈ ಘಟನೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ.
 -ಕೆ.ಎಸ್. ವಿಮಲಾ, ಅಧ್ಯಕ್ಷೆ, ಜನವಾದಿ  ಮಹಿಳಾ ಸಂಘಟನೆ

`ವಿಕೃತ ಮನೋಭಾವ~
`ಕಾನೂನು ರಚಿಸುವ ವಿಧಾನಸಭೆಯಲ್ಲೇ ಬ್ಲೂಫಿಲಂ ನೋಡುತ್ತಾ ಅದರ ಪಾವಿತ್ರತ್ಯೆಯನ್ನು ಹಾಳು ಮಾಡಿದ ಬಿಜೆಪಿ ಸಚಿವರ ವಿರುದ್ದ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಹಿಂದೂಜಾಗರಣ ವೇದಿಕೆಯು ಖಾಸಗಿ ರೆಸಾರ್ಟ್‌ನಲ್ಲಿ ಪಾಲೊಂಡ ಯುವತಿಯರ ಮೇಲೆ ದೈಹಿಕ ಹಲ್ಲೆಯನ್ನು ನಡೆಸಿರುವುದು ಖಂಡನೀಯ.

ವೇಶ್ಯವಾಟಿಕೆಯನ್ನೇ ಒಪ್ಪಿಕೊಂಡ ಸಂಸ್ಕೃತಿ ನಮ್ಮದು. ಅದರ ಅಳ ಅರಿವು ತಿಳಿಯದೇ ಇರುವ ಇವರು ಪಾರ್ಟಿಯಲ್ಲಿ ಪಾಲ್ಗೊಂಡರು ಎನ್ನುವ ಒಂದೇ ಕಾರಣಕ್ಕೆ ಹೀಗೆ ಹಿಂಸಿಸಿ ವಿಕೃತ ಮನೋಭಾವವನ್ನು ಮೆರೆದಿದ್ದಾರೆ. ಸರ್ಕಾರವೇ ಇವರದ್ದು ಎನ್ನುವ ಅಹಂನಿಂದ ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ~
 - ಉಷಾ ಕಟ್ಟೇಮನೆ, ಲೇಖಕಿ

`ಯಾವುದೇ ಅನುಕಂಪ ಬೇಡ~
`ಹೆಣ್ಣು ಮಕ್ಕಳ ಮೇಲೆ ಅಮಾನವೀಯ ದಾಳಿ ನಡೆಸಿರುವುದು ಖಂಡನೀಯ. ಕಾನೂನು ಕೈಗೆತ್ತಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ದಾಳಿ ನಡೆಸಿದವರ ಬಗ್ಗೆ ಅನುಕಂಪ ಬೇಡ~
 -ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

`ಗೂಂಡಾ ದಾಳಿ~
`ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಕಾನೂನು ಬಾಹಿರ. ವ್ಯಕ್ತಿಗಳು, ಸಂಘಟನೆಗಳು ಹೀಗೆ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಘಟನೆಯನ್ನು ನೋಡಿದರೆ ಇದೇನು ತಾಲಿಬಾನ್ ವ್ಯವಸ್ಥೆಯೇ ಎಂಬ ಅನುಮಾನ ಮೂಡುತ್ತಿದೆ. ಇದೊಂದು ಗೂಂಡಾ ದಾಳಿ~
 -ಲಕ್ಷ್ಮೀನಾರಾಯಣ ನಾಗವಾರ,ಸಾಮಾಜಿಕ ಕಾರ್ಯಕರ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT