ADVERTISEMENT

ಯುವತಿ ಸಂಶಯಾಸ್ಪದ ಸಾವು

ಶವಮಹಜರು ನಡೆಸದೆ ಪೋಷಕರಿಂದ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಕಲಘಟಗಿ (ಧಾರವಾಡ ಜಿಲ್ಲೆ): ತಾಲ್ಲೂಕಿನ ಸಂಗಮೇಶ್ವರ ಗ್ರಾಮದಲ್ಲಿ ಯುವತಿಯೊಬ್ಬಳು ಸೋಮವಾರ ಬೆಳಿಗ್ಗೆ ಮಲಗಿದಲ್ಲೇ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವದ ಮಹಜರು ನಡೆಸದೆ ಪೋಷಕರು ಅಂತ್ಯಸಂಸ್ಕಾರ ನಡೆಸಿರುವುದು ಶಂಕೆ ಹುಟ್ಟುಹಾಕಿದೆ.

ಗ್ರಾಮದ ಯಲ್ಲಪ್ಪ ಕಲಘಟಕರ ಎಂಬವರ ಮಗಳು, ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ದಾಕ್ಷಾಯಿಣಿ ಕಲಘಟಕರ (19) ಮೃತಪಟ್ಟಿದ್ದಾಳೆ. ಆದರೆ ಪೋಷಕರು ಶವದ ಮಹಜರು ನಡೆಸದೆ ತಮ್ಮ ಸಂಪ್ರದಾಯದಂತೆ ಅಂತ್ಯಸಂಸ್ಕಾರ (ಸುಟ್ಟು ಹಾಕಿ) ನಡೆಸಿರುವುದು ಸಂಶಯಕ್ಕೆ ಕಾರಣವಾಗಿದೆ. 

'ಭಾನುವಾರ ಸಂಜೆ ಹೊಟ್ಟೆ ನೋವು ಎಂದು ಬಳಲಿ, ಮಲಗುವ ಕೊಠಡಿಗೆ ನಿದ್ದೆ ಮಾಡಲೆಂದು ತೆರಳಿದ್ದಳು. ಆದರೆ ಬೆಳಗಾಗುವಷ್ಟರಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದಾಳೆ' ಎಂದು ಮೃತಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಯುವತಿಯ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್.ರವಿಕುಮಾರ್, ಪೋಷಕರು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು, 'ಯುವತಿಯ ಸಂಶಯಾಸ್ಪದ ಸಾವಿನ ಬಗ್ಗೆ ಆಕೆಯ ಪೋಷಕರನ್ನು ವಿಚಾರಿಸಲಾಗಿದೆ. ದಾಕ್ಷಾಯಿಣಿ ಕಳೆದ ಒಂದೂವರೆ ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಗೆ ಕಿಮ್ಸ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಳು. ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತ ಸ್ಥಳೀಯರನ್ನು ವಿಚಾರಿಸಿದಾಗ, ಮೃತಳು ಪಕ್ಕದ ಮನೆಯ ಪರಶುರಾಮ ಎಂಬಾತನನ್ನು ಪ್ರೀತಿಸುತ್ತಿದ್ದು, ಇಬ್ಬರೂ ಮರಾಠ ಜಾತಿಗೆ ಸೇರಿದವರು. ಇದಕ್ಕೆ ಯುವತಿಯ ಮನೆಯವರ ವಿರೋಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮಧ್ಯೆ ಪರಶುರಾಮ ತಲೆಮರೆಸಿಕೊಂಡಿದ್ದಾನೆ' ಎಂದರು.

'ಪ್ರಕರಣ ಜಟಿಲವಾಗಿದ್ದು, ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿಖರವಾದ ಯಾವುದೇ ಪುರಾವೆ ಲಭ್ಯವಾಗಿಲ್ಲ. ಸಾವಿನ ಹಿಂದಿನ ಸತ್ಯಾಸತ್ಯತೆ ತಿಳಿಯಲು ಎರಡು ತಂಡ ರಚಿಸಲಾಗಿದೆ. ಮಂಗಳವಾರ ಒಂದು ತಂಡ ಕಿಮ್ಸಗೆ ತೆರಳಿ ದಾಕ್ಷಾಯಿಣಿಗೆ ಚಿಕಿತ್ಸೆ ಪಡೆದಿರುವ ಕುರಿತು ದಾಖಲೆಗಳನ್ನು ಸಂಗ್ರಹಿಸಲಿದೆ. ಸೂಕ್ತ ದಾಖಲೆಗಳು ಲಭ್ಯವಾಗದಿದ್ದರೆ ಸ್ವ ಇಚ್ಚೆಯಿಂದ ದೂರ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದರು. ಸಿ.ಪಿ.ಐ. ಅಮರೇಶ ಬಾರಕೇರ, ಡಿ.ವೈ.ಎಸ್.ಪಿ. ರಾಜೀವ ಬನಹಟ್ಟಿ ಜೊತೆಗ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.