ADVERTISEMENT

‘ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಿಂದ ಹೊಡೆಯಿರಿ’: ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 20:03 IST
Last Updated 14 ಏಪ್ರಿಲ್ 2018, 20:03 IST
ಪ್ರತಿಭಟನೆಯಲ್ಲಿ ದಿನೇಶ್‌ ಗುಂಡೂರಾವ್‌ ಮಾತನಾಡಿದರು ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ದಿನೇಶ್‌ ಗುಂಡೂರಾವ್‌ ಮಾತನಾಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಮೌರ್ಯ ವೃತ್ತದಲ್ಲಿ ಶನಿವಾರ ಮೋಂಬತ್ತಿ ಬೆಳಗಿಸಿ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ‘ಮೋಸಗಾರ, ಸುಳ್ಳುಗಾರ ಯೋಗಿ ಮತ್ತೊಮ್ಮೆ ರಾಜ್ಯಕ್ಕೆ ಬಂದರೆ ಬುದ್ಧಿ ಕಲಿಸುತ್ತೇವೆ’ ಎಂದು ಕಿಡಿಕಾರಿದರು.

‘ಯೋಗಿ ಆದಿತ್ಯನಾಥ್ ಅಲ್ಲ, ಬೋಗಿ ಆದಿತ್ಯನಾಥ್. ಅಂಥ ವ್ಯಕ್ತಿ ಕರ್ನಾಟಕದ ಪವಿತ್ರ ಭೂಮಿಗೆ ಬಂದರೆ ಕಳಂಕವಾಗುತ್ತದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವನು‌ ನಾಲಾಯಕ್. ಪ್ರಧಾನಿ ನರೇಂದ್ರ ‌ಮೋದಿ ತಕ್ಷಣ ಅವನನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಬಿಸಾಕಬೇಕು’ ಎಂದೂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ADVERTISEMENT

‘ಶಾಸಕ ಅತ್ಯಾಚಾರ ಮಾಡಿದರೂ ಉತ್ತರ ಪ್ರದೇಶ ಸರ್ಕಾರ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನ್ಯಾಯಾಲಯ ಹೇಳಿದ ಮೇಲೆ ಸಿಬಿಐ ಶಾಸಕನನ್ನು ಬಂಧಿಸಿದೆ. ಆದರೆ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ತಂದೆಯನ್ನು ಜೈಲಿಗೆ ಹಾಕಿ ಸಾಯಿಸಿದೆ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.