ರೈಲ್ವೆ ಬಜೆಟ್ ದೇಶಕ್ಕೆ ಆಶಾದಾಯಕವಾದರೆ, ರಾಜ್ಯದ ಪಾಲಿಗೆ ನಿರಾಶಾದಾಯಕ. ರೈಲ್ವೆ ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಿದ್ದು ಮೆಚ್ಚುವಂತಹ ಕ್ರಮವೇ. ಸುರಕ್ಷತೆಗೆ ಒತ್ತು ನೀಡಿರುವುದೂ ಸ್ವಾಗತಾರ್ಹ. ಪ್ರತಿಶತ 40ರಷ್ಟು ಅಪಘಾತಗಳು ಮಾನವರಹಿತ ಲೆವೆಲ್ ಕ್ರಾಸಿಂಗ್‌ನಿಂದಲೇ ಸಂಭವಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಈ ಅಪಘಾತಗಳ ತಡೆಗೆ ರೈಲ್ವೆ ಇಲಾಖೆ ಮುಂದಾಗಿರುವುದು ಸಮಾಧಾನ ಉಂಟುಮಾಡಿದೆ.
ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲೂ ಉದ್ದೇಶಿಸಲಾಗಿದೆ. ಬಹಳಷ್ಟು ಹಿಂದೆಯೇ ಆಗಬೇಕಿದ್ದ ಕಾರ್ಯ ಇದು. ಎಲ್ಲ ನಿಲ್ದಾಣಗಳೂ ಸ್ವಚ್ಛತೆಯ ಬರವನ್ನು ಅನುಭವಿಸುತ್ತವೆ. ಶೌಚಾಲಯಗಳು ತುಂಬಾ ಗಲೀಜಾಗಿರುತ್ತವೆ. ಹಳಿಗಳ ನಡುವೆಯೂ ಹೊಲಸು ತುಂಬಿ, ಪ್ಲಾಟ್‌ಫಾರ್ಮ್‌ಗಳಲ್ಲಿ ಗಬ್ಬುನಾತ ಮೂಗಿಗೆ ಹೊಡೆಯುತ್ತದೆ.
ಅಂತಹ ವಾತಾವರಣಕ್ಕೆ ಮುಕ್ತಿ ನೀಡಲು ತ್ರಿವೇದಿ ಯೋಚಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಆಲಮಟ್ಟಿ, ಹಾವೇರಿ ಮತ್ತು ಬಾದಾಮಿ ನಿಲ್ದಾಣಗಳನ್ನು ಆದರ್ಶ ರೈಲ್ವೆ ನಿಲ್ದಾಣಗಳನ್ನಾಗಿ ಪರಿವರ್ತಿಸುವ ಯೋಜನೆ ಪ್ರಕಟಿಸಿರುವುದು ಒಳ್ಳೆಯ ಬೆಳವಣಿಗೆ.
ರೈಲುಗಳ ವೇಗ ಹಾಗೂ ಧಾರಣ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಅಧಿಕ ಎಚ್‌ಪಿ ಎಂಜಿನ್‌ಗಳನ್ನು ಹಳಿಗೆ ತರುವಂತಹ ಯೋಚನೆ ಮಾಡಿದ್ದಕ್ಕೂ ಭೇಷ್ ಎನ್ನಬೇಕು. ಆಟೊ ಕಾರ್‌ಗಳನ್ನು ಪರಿಚಯಿಸುವ ನಿರ್ಧಾರ ಕೂಡ ಸದುದ್ದೇಶದಿಂದ ಕೂಡಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದ್ದು ಆನಂದ ಉಂಟುಮಾಡಿದೆ. 70 ಕಿ.ಮೀ. ಉದ್ದದ ಅನವಶ್ಯಕ ಯಾತ್ರೆಗೆ ಇದರಿಂದ ಮುಕ್ತಿ ಸಿಗುವುದಲ್ಲದೆ ಡೀಸೆಲ್ ಮತ್ತು ಸಮಯದ ಉಳಿತಾಯವೂ ಆಗಲಿದೆ. ಬೆಂಗಳೂರಿನಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಬರಲಿದ್ದು, ರಾಜ್ಯದ ದೃಷ್ಟಿಯಿಂದ ಒಳ್ಳೆಯ ಸಮಾಚಾರ.
ನಮ್ಮ ರೈಲ್ವೆ ಖಾತೆ ಸಹಾಯಕ ಮಂತ್ರಿಯಾದ ಕೆ.ಎಚ್. ಮುನಿಯಪ್ಪ ತಮ್ಮ ಕ್ಷೇತ್ರ ಕೋಲಾರಕ್ಕೆ ಕೋಚ್ ಫ್ಯಾಕ್ಟರಿ ಬರುವಂತೆ ನೋಡಿಕೊಂಡಿದ್ದಾರೆ. 50,000 ಜನಕ್ಕೆ ಉದ್ಯೋಗ ಕಲ್ಪಿಸುವಂತಹ ಈ ನಿರ್ಧಾರ ಸಂತಸದಾಯಕ. ಸಣ್ಣ-ಪುಟ್ಟ ಪೂರಕ ಉದ್ಯಮಗಳ ಬೆಳವಣಿಗೆಗೂ ಇದರಿಂದ ಸಹಾಯ ಆಗುತ್ತದೆ. ಅದೇ ಆಸಕ್ತಿಯಿಂದ ರಾಜ್ಯದ ಇತರ ಭಾಗಗಳಿಗೆ ಯೋಜನೆ ತರುವಲ್ಲಿ ಅವರು ವಿಫಲವಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ ನೈರುತ್ಯ ರೈಲ್ವೆ ಬೆಳವಣಿಗೆ ದೃಷ್ಟಿಯಿಂದ ಹೇಳಿಕೊಳ್ಳುವಂತಹ ಯಾವ ಯೋಜನೆಯೂ ಬಜೆಟ್‌ನಲ್ಲಿ ಇಲ್ಲ. ದಶಮಾನೋತ್ಸವದ ಹೊಸ್ತಿಲಲ್ಲಿರುವ ವಲಯದ ಮೇಲೆ ತ್ರಿವೇದಿ ಇನ್ನಷ್ಟು ಕೃಪಾದೃಷ್ಟಿ ಬೀರಬೇಕಿತ್ತು. ನೈರುತ್ಯ ವಲಯದ ಹೆಚ್ಚಿನ ಅಧಿಕಾರಿಗಳು ಉತ್ತರ ಭಾರತ ಭಾಗದಿಂದ ಬಂದವರಾಗಿದ್ದಾರೆ. ಅವರಿಗೆ ಈ ಭಾಗದ ಜೊತೆಗೆ ಭಾವನಾತ್ಮಕ ಸಂಬಂಧ ಇಲ್ಲ. ಆದ್ದರಿಂದಲೇ ಗಟ್ಟಿಯಾದ ಇಚ್ಛಾಶಕ್ತಿ ಪ್ರದರ್ಶಿಸಿ ಸಚಿವರಿಗೆ ಇಂತಹ ಕೆಲಸ ಆಗಲೇಬೇಕು ಎಂಬ ಒತ್ತಡ ತರುವುದಿಲ್ಲ. ರಾಜ್ಯದ ಸಂಸದರ ನಿರ್ಲಕ್ಷ್ಯವೂ ಅದರ ಜತೆಯಲ್ಲಿ ಸೇರ್ಪಡೆಯಾಗಿ ಹೋಗಿದೆ.
ರೈಲ್ವೆ ಮಾರ್ಗಕ್ಕಿಂತ ರಸ್ತೆ ಅಗಲೀಕರಣಕ್ಕೆ ಹೆಚ್ಚಿನ ಅರಣ್ಯ ನಾಶವಾಗುತ್ತದೆ ಎಂಬ ತಜ್ಞರ ವರದಿ ಹೊರತಾಗಿಯೂ ಈ ಭಾಗದ ಪ್ರಮುಖ ಬೇಡಿಕೆಯಾದ ಹುಬ್ಬಳ್ಳಿ-ಅಂಕೋಲಾ ಮಾರ್ಗದ ಕನಸು ಕನಸಾಗಿಯೇ ಉಳಿದಿದೆ.
ಹುಬ್ಬಳ್ಳಿ ಭಾಗದ ಉದ್ಯಮಿಗಳಿಗೆ ಪುಣೆ ಮತ್ತು ಮುಂಬೈಗೆ ಹೆಚ್ಚಿನ ಒಡನಾಟವಿದೆ. ಪುಣೆ ಆಟೊ ಉದ್ಯಮದ ತಾಣವಾಗಿದ್ದು, ಉತ್ತರ ಕರ್ನಾಟಕದ ಜತೆ ದೊಡ್ಡ ವ್ಯವಹಾರದ ನಂಟು ಹೊಂದಿದೆ. ಈ ಮಾರ್ಗದ ಮೂಲಕ ಹಾಯ್ದುಹೋಗುವ ರೈಲುಗಳಿಗೆ ವಾರದ ಮೊದಲೇ ಎಲ್ಲ ಸೀಟುಗಳು ಕಾಯ್ದಿರಿಸಲ್ಪಟ್ಟಿರುತ್ತವೆ. ಇಷ್ಟೊಂದು ಸಂಚಾರ ದಟ್ಟಣೆಯಿದ್ದರೂ ಪುಣೆ ಮತ್ತು ಮುಂಬೈ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸದಿರುವುದು ಅತ್ಯಂತ ನಿರಾಶಾದಾಯಕ ಸಂಗತಿ.
ಕೇವಲ ವಿರೋಧಿಸುವ ಕಾರಣಕ್ಕಾಗಿಯೇ ಪ್ರಯಾಣ ದರದಲ್ಲಿ ಮಾಡಲಾದ ಅಲ್ಪ ಏರಿಕೆಯನ್ನು ವಿರೋಧಿಸುವುದು ಬಾಲಿಶ ಎನಿಸುತ್ತದೆ. ಅಭಿವೃದ್ಧಿ ಆಗಬೇಕಾದರೆ ಬಂಡವಾಳವೂ ಬೇಕು. ಪ್ರಯಾಣ ದರದ ಏರಿಕೆ ಮಾಡದೆ ಇಲಾಖೆ ಹೆಚ್ಚುವರಿ ಹಣಕಾಸನ್ನು ಹೇಗೆ ಹೊಂದಿಸಿಕೊಳ್ಳಬೇಕು? ನಮ್ಮ ಆಕ್ಷೇಪ ಇರುವುದು ಇಲ್ಲಿಯ ಹೆಚ್ಚುವರಿ ವರಮಾನವನ್ನು ಇಲ್ಲಿಯೇ ಖರ್ಚು ಮಾಡದಿರುವುದಕ್ಕೆ.
ರಾಜ್ಯಕ್ಕೆ ಒಂಬತ್ತು ಹೊಸ ರೈಲುಗಳನ್ನು ನೀಡಲಾಗಿದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದರೂ ಹಲವು ಈಗಾಗಲೇ ಇದ್ದಂಥವು. ಮತ್ತೆ ಕೆಲವು ತಾತ್ಕಾಲಿಕವಾಗಿ ಓಡುತ್ತಿರುವಂಥವು. ಅವುಗಳನ್ನೆಲ್ಲ ಕಾಯಂ ಮಾಡಲಾಗಿದೆ. ಈ ಪ್ರಕಟಣೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಮೊದಲಿದ್ದ ಹುಬ್ಬಳ್ಳಿ-ಸೊಲ್ಲಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಪುನಃ ಆರಂಭಿಸಲಿಲ್ಲ.
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈಗಳಿಗೆ ಸೂಪರ್ ಫಾಸ್ಟ್ ರೈಲು ಓಡಿಸಬೇಕೆಂಬ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ. ಧಾರವಾಡ-ಬೆಳಗಾವಿ ಮಾರ್ಗಕ್ಕೂ ಅದ್ಯತೆ ಸಿಕ್ಕಿಲ್ಲ. ಈ ಮಾರ್ಗದ ಮಹತ್ವವನ್ನು ಸಚಿವರಿಗೆ ಮನವರಿಕೆ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಹುಬ್ಬಳ್ಳಿ-ಬೀರೂರು ಮಧ್ಯೆ ಜೋಡಿಮಾರ್ಗ ರಚನೆ, ಹೊಸಪೇಟೆ-ಗುಂತಕಲ್ ಮಾರ್ಗದ ವಿದ್ಯುದೀಕರಣ ಯೋಜನೆಗಳು ಕಾಗದದಲ್ಲಿ ಉಳಿಯಬಾರದಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.