ADVERTISEMENT

ರಕ್ಷಣಾ ಇಲಾಖೆ ಅನುಮತಿ; ಆತಂಕ ನಿವಾರಣೆ

ಸಾಹಿತ್ಯ ಸಮ್ಮೇಳನಕ್ಕೆ ಸೈನಿಕ ಶಾಲೆಯ ಜಾಗ

ಗಣೇಶ ಚಂದನಶಿವ
Published 30 ಜನವರಿ 2013, 19:59 IST
Last Updated 30 ಜನವರಿ 2013, 19:59 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ವಿಜಾಪುರ ಸೈನಿಕ ಶಾಲೆಯ ಆವರಣದ ಸುಂದರ ವನಸಿರಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ವಿಜಾಪುರ ಸೈನಿಕ ಶಾಲೆಯ ಆವರಣದ ಸುಂದರ ವನಸಿರಿ   

ವಿಜಾಪುರ: ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಲ್ಲಿಯ ಸೈನಿಕ ಶಾಲೆಯ ಆವರಣದಲ್ಲಿ ನಡೆಸಲು ರಕ್ಷಣಾ ಇಲಾಖೆ ಅನುಮತಿ ನೀಡಿದೆ. ಸಮ್ಮೇಳನಕ್ಕೆ ಎದುರಾಗಿದ್ದ ಪ್ರಮುಖ ಆತಂಕ ಇದರಿಂದ ನಿವಾರಣೆಯಾಗಿದೆ.

`ಸುವರ್ಣ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿರುವ ನಮ್ಮ ಶಾಲೆಯ ಆವರಣದಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೂ ಹೆಮ್ಮೆ. ಸಮ್ಮೇಳನಕ್ಕೆ ಜಾಗ ಕೊಡಿ ಎಂದು ಜಿಲ್ಲಾ ಆಡಳಿತ ಕೋರಿದಾಗ ಸಂತೋಷದಿಂದಲೇ ನಾವು ಒಪ್ಪಿದ್ದು ಎಲ್ಲ ಸಹಕಾರ ನೀಡುತ್ತಿದ್ದೇವೆ. ಈಗ ರಕ್ಷಣಾ ಇಲಾಖೆಯೂ ಅನುಮತಿ ನೀಡಿದೆ' ಎಂದು ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಹೇಳಿದರು.

406 ಎಕರೆ ವಿಶಾಲ ಕ್ಯಾಂಪಸ್ ಹೊಂದಿರುವ ಸೈನಿಕ ಶಾಲೆಯ ಪರಿಸರ ವಿಜಾಪುರ ನಗರದಲ್ಲಿಯೇ ಅತ್ಯಂತ ಸುಂದರ. ಗಿಡ-ಮರ, ಪುಟ್ಟ-ಪುಟ್ಟ ಉದ್ಯಾನಗಳಿಂದಾಗಿ ಹಸಿರು ಕಂಗೊಳಿಸುತ್ತಿದೆ. ಅಲ್ಲಲ್ಲಿ ಅರಳಿ ನಿಂತಿರುವ ಹೂವುಗಳು ಇಡೀ ಆವರಣಕ್ಕೆ ಕಳೆ ಕಟ್ಟಿವೆ. ಉತ್ತಮ ರಸ್ತೆ, ಸ್ವಚ್ಛತೆ, ಸುಸಜ್ಜಿತ ಕಟ್ಟಡಗಳು, ಶಿಸ್ತಿನ ವಿದ್ಯಾರ್ಥಿಗಳ ಕಲರವ ಇಲ್ಲಿಯ ವಿಶೇಷತೆ.

ಸುವರ್ಣ ಮಹೋತ್ಸವಕ್ಕಾಗಿ ಮೊದಲೇ ಸಿಂಗಾರಗೊಂಡಿದ್ದ ಶಾಲೆಯ ಆವರಣದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ರಸ್ತೆಗಳ ದುರಸ್ತಿ ಕಾರ್ಯ ನಡೆದಿದೆ. ಅಲ್ಲದೆ ಹೆಚ್ಚುವರಿಯಾಗಿ ಬೀದಿ ದೀಪಗಳನ್ನೂ ಅಳವಡಿಸಲಾಗುತ್ತಿದೆ.

ರಕ್ಷಣಾ ಇಲಾಖೆಯಲ್ಲಿ ಉಪಯೋಗಿಸಿದ ಕೆಲ ಲಘು ವಿಮಾನ, ಅಪರೂಪದ ಪುರಾತನ ಗನ್‌ಗಳನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಶಾಲೆಯ ಆವರಣದಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಪಕ್ಕವೇ ರಾಜ್ಯ ಸರ್ಕಾರದ ಪ್ರವಾಸಿ ಮಂದಿರವಿದೆ. ವಾಹನ ನಿಲುಗಡೆಗೆ ವಿಶಾಲ ಸ್ಥಳಾವಕಾಶವಿದೆ. ಸೈನಿಕ ಶಾಲೆಯ ಆವರಣದಲ್ಲಿ 700 ಆಸನಗಳ `ಎಸ್.ಆರ್. ಕಂಠಿ ಸಭಾಂಗಣ' ವಿದ್ದು, ಅದನ್ನು ಸಮ್ಮೇಳನದ ಸಮಾನಾಂತರ ವೇದಿಕೆಗೆ ಹಾಗೂ ಸೈನಿಕ ಶಾಲೆಯ ಅತಿಥಿಗೃಹವನ್ನು ಭದ್ರತಾ ವ್ಯವಸ್ಥೆಗೆ ನೀಡಲಾಗಿದೆ.

`ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಾಲೆಯ ಕೆಡೆಟ್ಸ್‌ಗಳಿಗೆ (ವಿದ್ಯಾರ್ಥಿಗಳು) ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ತರದ ಹಾನಿಯಾದರೆ ಅದನ್ನು ಭರಿಸಿಕೊಡಬೇಕು ಎಂಬ ಷರತ್ತನ್ನು ರಕ್ಷಣಾ ಇಲಾಖೆ ವಿಧಿಸಿದೆ. ಸಮ್ಮೇಳನದ ಸಂಘಟಕರು ಇದನ್ನು ಪಾಲಿಸಿದರೆ ಸಾಕು' ಎನ್ನುತ್ತಾರೆ ಶಾಲೆಯವರು.

`ಸೈನಿಕ ಶಾಲೆಯ ಮುಂಭಾಗದ 20 ಎಕರೆ ಜಾಗವನ್ನು ಸಮ್ಮೇಳನಕ್ಕೆ ಬಳಸಿಕೊಳ್ಳುತ್ತೇವೆ. ಪ್ರಧಾನ ವೇದಿಕೆ, ಪುಸ್ತಕ-ವಾಣಿಜ್ಯ ಮಳಿಗೆ, ಊಟದ ವ್ಯವಸ್ಥೆ, ಮಾಧ್ಯಮ ಕೇಂದ್ರ ಒಂದೇ ಕಡೆ ಇರಲಿದೆ. ದೂಳಿನ ಸಮಸ್ಯೆ ನಿವಾರಣೆಗೆ ನೆಲಹಾಸು (ಮ್ಯಾಟ್) ಹಾಕುತ್ತಿದ್ದೇವೆ' ಎನ್ನುತ್ತಾರೆ ಈ ಕಾಮಗಾರಿಗಳ ಉಸ್ತುವಾರಿ ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಹಲಕುಡೆ.

`30 ಶೌಚಾಲಯ ನಿರ್ಮಿಸಲಾಗುತ್ತಿದ್ದು, ಎದುರಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ನಿಂದ ಕುಡಿಯುವ ನೀರಿನ ಸಂಪರ್ಕ ಪಡೆಯಲಾಗಿದೆ. 500ನಲ್ಲಿಗಳ ಮೂಲಕ ಶುದ್ಧ ನೀರು ಪೂರೈಸಲಾಗುವುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.