ADVERTISEMENT

ರತ್ನಪ್ರಭಾ, ಪಟ್ಟನಾಯಕ್‌ ಪೈಪೋಟಿ

ಡಿಜಿಪಿ ಹುದ್ದೆಗೆ ನೀಲಮಣಿ, ಕಿಶೋರ್‌ ಚಂದ್ರ, ರೆಡ್ಡಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಬೆಂಗಳೂರು: ಹದಿನೈದು ದಿನಗಳ ಅಂತರದಲ್ಲಿ ಖಾಲಿಯಾಗುತ್ತಿರುವ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆಗಳಿಗೆ ತೀವ್ರ ಪೈಪೋಟಿ ಆರಂಭವಾಗಿದೆ.

ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸೇವೆಯಲ್ಲಿ ಹಿರಿಯರಾದ ರತ್ನಪ್ರಭಾ ಹಾಗೂ ಎಸ್‌.ಕೆ. ಪಟ್ಟನಾಯಕ್‌ ಹೆಸರು ಕೇಳಿಬರುತ್ತಿವೆ. ಡಿಜಿಪಿ ಹುದ್ದೆಗೆ ನೀಲಮಣಿರಾಜು, ಕಿಶೋರ್‌ಚಂದ್ರ ಹಾಗೂ ಎಂ.ಎನ್‌.ರೆಡ್ಡಿ ನಡುವೆ ಪೈಪೋಟಿ ನಡೆಯುತ್ತಿದೆ. 

ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಖುಂಟಿಆ ನ. 11ಕ್ಕೆ ನಿವೃತ್ತಿಯಾಗಲಿದ್ದಾರೆ. ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್ ದತ್ತಾ ಇದೇ 31ರಂದು ನಿವೃತ್ತಿ ಹೊಂದಲಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ದತ್ತಾ ಅವರನ್ನೇ ಇನ್ನು ಆರು ತಿಂಗಳು ಮುಂದುವರಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

1981ನೇ ಸಾಲಿನ ಅಧಿಕಾರಿಯಾಗಿರುವ ರತ್ನಪ್ರಭಾ ಅವಧಿ ಆರು ತಿಂಗಳು ಮಾತ್ರ ಉಳಿದಿದ್ದು, 2018ರ ಮಾರ್ಚ್ 13ಕ್ಕೆ ನಿವೃತ್ತಿ ಆಗಲಿದ್ದಾರೆ. 1982ನೇ ಸಾಲಿನ ಐಎಎಸ್ ಅಧಿಕಾರಿ, ಸದ್ಯ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಎಸ್.ಕೆ. ಪಟ್ಟನಾಯಕ್ ಹೆಸರೂ ಈ ಹುದ್ದೆಗೆ ಕೇಳಿ ಬರುತ್ತಿದೆ.

ದಲಿತ ಸಮುದಾಯಕ್ಕೆ ಸೇರಿರುವ ಮತ್ತು ಮಹಿಳೆಯಾಗಿರುವ ಕಾರಣಕ್ಕೆ ರತ್ನಪ್ರಭಾ ಅವರನ್ನೇ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಕಳೆದ ಸಲ ಸ್ವಲ್ಪದರಲ್ಲಿ ಅವರಿಗೆ ಅವಕಾಶ ಕೈತಪ್ಪಿತ್ತು.

ಡಿಜಿಪಿ ಹುದ್ದೆಗೆ 1983ನೇ ಬ್ಯಾಚ್‌ ಐಪಿಎಸ್ ಅಧಿಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ನೀಲಮಣಿ ರಾಜು ಹೆಸರು ಮೊದಲ ಸ್ಥಾನದಲ್ಲಿದೆ. ಅವರ ಕರ್ತವ್ಯ ಅವಧಿ 2020ರ ಜನವರಿವರೆಗೆ ಇದೆ. ನಂತರದ ಸ್ಥಾನದಲ್ಲಿ 1984ರ ಬ್ಯಾಚ್‌ ಐಪಿಎಸ್ ಅಧಿಕಾರಿಗಳಾದ ಸಿಐಡಿ ಡಿಜಿ ಎಚ್.ಸಿ. ಕಿಶೋರ ಚಂದ್ರ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಡಿಜಿ ಎಂ.ಎನ್. ರೆಡ್ಡಿ ಈ ಮೂವರಲ್ಲಿ ಯಾರನ್ನು ನೇಮಿಸಬಹುದು ಎಂಬ ಕುತೂಹಲ ಇಲಾಖೆಯಲ್ಲಿದೆ.

ಸೇವಾ ಹಿರಿತನದ ಆಧಾರದಲ್ಲಿಯೇ ಪೊಲೀಸ್ ಮಹಾ ನಿರ್ದೇಶಕರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈಸೂರಿನವರಾದ ಕಿಶೋರ ಚಂದ್ರ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅವರನ್ನೇ ಡಿಜಿ ಹುದ್ದೆಗೆ ಪರಿಗಣಿಸುವಂತೆ ಒಕ್ಕಲಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿ ಮೇಲೆ ಒತ್ತಡ ತಂದಿದ್ದಾರೆ. ಆದರೆ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಎಂ.ಎನ್. ರೆಡ್ಡಿ ಪರವಾಗಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.