ADVERTISEMENT

ರಥ ಹರಿದು ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಹೊಸಪೇಟೆ: ಬುಧವಾರ ಇಲ್ಲಿ ವಿಜೃಂಭಣೆಯಿಂದ ನಡೆದ ಜಂಬೂನಾಥ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಇಬ್ಬರ ಕಾಲುಗಳ ಮೇಲೆ ರಥ ಹರಿದು ಪರಿಣಾಮ ಅವರಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ದೇವಾಲಯದ ಮುಂದಿನ ಪ್ರಾಂಗಣದಿಂದ ಬನ್ನಿಮಂಟದವರೆಗೂ ಸಾಗಿದ ರಥ ವಾಪಸಾಗುವ ವೇಳೆ ಮಿತಿ ಮೀರಿದ ಭಕ್ತರ ಉತ್ಸಾಹದಿಂದ ರಥ ಹತೋಟಿಗೆ ಸಿಗಲಿಲ್ಲ. ಅಡ್ಡಾದಿಡ್ಡಿ ಸಾಗಿದ ರಥ ಜಾತ್ರೆ ಪರಿಕರಗಳ ಮಾರಾಟ ಮಾಡುವ ಟೆಂಟ್ ಬಳಿ ನಿಂತಿದ್ದ ಚೈತ್ರಾಳ (11) ಎರಡು ಪಾದಗಳು ಮತ್ತು ಪಕ್ಕದಲ್ಲೇ ನಿಂತಿದ್ದ ಕೃಷ್ಣ ಎಂಬ ಯುವಕನ ಎಡಗಾಲಿನ ಮೇಲೆ ಹರಿಯಿತು. ಅವರಿಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಚೈತ್ರಾಳ ಎರಡೂ ಪಾದಗಳು ಪೂರ್ತಿ ಜಜ್ಜಿ ಹೋಗಿರುವ ಕಾರಣ ರಕ್ತಸ್ರಾವವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬಳ್ಳಾರಿಯ ವಿಮ್ಸಗೆ ಕರೆದೊಯ್ಯಲು ವೈದ್ಯರು ಸಲಹೆ ನೀಡಿದ್ದಾರೆ.

ಜಂಬೂನಾಥಸ್ವಾಮಿ ಗುಡ್ಡಕ್ಕೆ ಹೊಂದಿಕೊಂಡಿರುವ ಹೊಸಪೇಟೆ, ಕಲ್ಲಳ್ಳಿ, ರಾಜಾಪುರ, ವೆಂಕಟಗಿರಿ, ಕಾಕುಬಾಳ, ಅಮರಾವತಿ, ಜಂಬೂನಾಥನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.