ADVERTISEMENT

ರಾಜೇಂದ್ರ ಸಿಂಗ್‌, ಮಾರ್ಕ್‌ ಹಸ್ಸಿಗೆ ಗೌರವ ಡಾಕ್ಟರೇಟ್

22ರಂದು ಕೃಷಿ ವಿ.ವಿ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST
ರಾಜೇಂದ್ರ ಸಿಂಗ್‌, ಮಾರ್ಕ್‌ ಹಸ್ಸಿಗೆ ಗೌರವ ಡಾಕ್ಟರೇಟ್
ರಾಜೇಂದ್ರ ಸಿಂಗ್‌, ಮಾರ್ಕ್‌ ಹಸ್ಸಿಗೆ ಗೌರವ ಡಾಕ್ಟರೇಟ್   

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲ­ಯದ ವಾರ್ಷಿಕ ಘಟಿ­ಕೋತ್ಸವ ಇದೇ 22ರಂದು ನಡೆಯ­ಲಿದೆ. ರಾಜಸ್ತಾನದ ಜಲ ತಜ್ಞ ಡಾ. ರಾಜೇಂದ್ರ ಸಿಂಗ್‌ ಹಾಗೂ ಅಮೆರಿಕದ ಟೆಕ್ಸಾಸ್‌ನ ಎ ಅಂಡ್‌ ಎಂ ವಿ.ವಿಯ ಪ್ರಭಾರ ಅಧ್ಯಕ್ಷ ಡಾ. ಮಾರ್ಕ್‌ ಎ. ಹಸ್ಸಿ ಅವರನ್ನು ಗೌರವ ಡಾಕ್ಟ­ರೇಟ್‌ ಪದವಿಗೆ ಆಯ್ಕೆ ಮಾಡಲಾಗಿದೆ.

‘ಕಳೆದ ವರ್ಷ ಕಾಯಂ ಕುಲಪತಿ ನೇಮಕ ವಿಳಂಬವಾದ ಹಿನ್ನೆಲೆಯಲ್ಲಿ ವಾರ್ಷಿಕ ಘಟಿಕೋತ್ಸವ ನಡೆದಿರಲಿಲ್ಲ. ಎರಡೂ ವರ್ಷದ ಘಟಿಕೋತ್ಸವವನ್ನು ಒಟ್ಟಿಗೇ ನಡೆಸಲು ಯೋಜಿಸಲಾಗಿದೆ. ಮರಳುಗಾಡಿನಲ್ಲಿ ನೀರು ಹರಿಸಿದ ಆಧುನಿಕ ಭಗೀರಥ ಎಂದೇ ಹೆಸರಾದ ಡಾ. ಸಿಂಗ್‌ ಹಾಗೂ ಅಮೆರಿಕದ ಡಾ. ಮಾರ್ಕ್‌ ಅವರಿಗೆ ಗೌರವ ಡಾಕ್ಟ­ರೇಟ್‌ (ಹಾನರಿಸ್‌ ಕಾಜಾ) ನೀಡಲು ವಿ.ವಿ. ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸ­ಲಾಗಿದೆ’ ಎಂದು ಕುಲಪತಿ ಡಾ. ಡಿ.ಪಿ. ಬಿರಾದಾರ ಸೋಮವಾರ ಸುದ್ದಿಗೋಷ್ಠಿ­ಯಲ್ಲಿ ತಿಳಿಸಿದರು.

‘845 ಅಭ್ಯರ್ಥಿಗಳಿಗೆ ವಿವಿಧ ಪದವಿ ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. 51 ಪಿಎಚ್‌.ಡಿ., 218 ಸ್ನಾತಕೋತ್ತರ ಹಾಗೂ 576 ಸ್ನಾತಕ ವಿದ್ಯಾರ್ಥಿಗಳು ಪದವಿಗಳನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳು, ಪೋಷ­ಕರು ಹಾಗೂ ವಿ.ವಿ. ಪ್ರಾಧ್ಯಾಪ­ಕರು ಸೇರಿದಂತೆ ಸುಮಾರು 1500 ಜನರು ಘಟಿಕೋತ್ಸವದಲ್ಲಿ ಭಾಗವಹಿ­ಸು­ವುದರಿಂದ ಕೃಷಿ ವಿ.ವಿ.ಯ ಬೀಜ ಘಟಕದ ಆವರಣದಲ್ಲಿ ಘಟಿಕೋತ್ಸವ ನಡೆಯಲಿದೆ’ ಎಂದರು.

ನಿಶಾ, ಮಲ್ಲಿಕ್‌ ‘ಚಿನ್ನದ ಹುಡುಗಿ’, ಹುಡುಗ: ಕೃಷಿ ಕಾಲೇಜಿನ 2011–12ನೇ ಸಾಲಿನ ವಿದ್ಯಾರ್ಥಿನಿ ನಿಶಾಕುಮಾರಿ ಒಟ್ಟು 10 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ‘ಚಿನ್ನದ ಹುಡುಗಿ’ಯಾಗಿ ಹೊರ­ಹೊಮ್ಮಿ­ದ್ದರೆ, 2012–13ನೇ ಸಾಲಿನ ವಿದ್ಯಾರ್ಥಿ ಎಂ.ಮಲ್ಲಿಕ್‌ 12 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ‘ಚಿನ್ನದ ಹುಡುಗ’ನಾಗಿ ಮಿಂಚಿದ್ದಾನೆ’ ಎಂದು ಅವರು ವಿವರ ನೀಡಿದರು. ‘ಮಾರ್ಕ್‌ ಹಸ್ಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.